Advertisement

ಕಾರ್ಕಳದಲ್ಲಿ ನಿತ್ಯ ಹಸಿ ಕಸ, ವಾರಕ್ಕೊಮ್ಮೆ ಒಣ ಕಸ ಸಂಗ್ರಹ

08:28 PM Nov 25, 2020 | mahesh |

ಕಾರ್ಕಳ: ಪುರಸಭೆ ಘನತ್ಯಾಜ್ಯ ವಸ್ತುಗಳ ನಿರ್ವಹಣೆ ನಿಯಮವನ್ನು ನಗರದಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಯತ್ನಿಸುತ್ತಿದೆ. ಇದಕ್ಕಾಗಿ ನಿಯಮದಲ್ಲಿ ಬದಲಾವಣೆ ತರಲಾಗಿದೆ.

Advertisement

ಪುರಸಭೆ ವ್ಯಾಪ್ತಿಯಲ್ಲಿ ಪೌರ ಘನತ್ಯಾಜ್ಯ ನಿಯಮಾವಳಿ ಅನುಷ್ಠಾನಕ್ಕಾಗಿ 23 ವಾರ್ಡ್‌ಗಳಲ್ಲಿ ಮನೆ ಮನೆ ಕಸ ಸಂಗ್ರಹಿಸಲಾಗುತ್ತಿದೆ. ಉತ್ಪತ್ತಿಯಾಗುವ ಘನತ್ಯಾಜ್ಯ ವಸ್ತುಗಳನ್ನು ಮೂಲದಲ್ಲಿಯೇ ಹಸಿ ಮತ್ತು ಒಣ ಕಸವಾಗಿ ವಿಂಗಡಿಸಿ ಪುರಸಭೆಯ ತ್ಯಾಜ್ಯ ಸಂಗ್ರಹ ವಾಹನಗಳ ಮೂಲಕ ಸಂಗ್ರಹಿಸಲಾಗುತ್ತಿದೆ.

ಶುಕ್ರವಾರ ಮಾತ್ರ ಒಣ ಕಸ
ನೂತನ ನಿಯಮ ಪ್ರಕಾರ ಪುರಸಭೆ ವಾರದಲ್ಲಿ ಒಂದು ದಿನ ಅಂದರೆ ಶುಕ್ರವಾರ ಮಾತ್ರ ಒಣ ಕಸವನ್ನು ಸಂಗ್ರಹಿಸಲಿದೆ. ಹಸಿ ಕಸವನ್ನು ಮಾತ್ರ ನಿತ್ಯವೂ ಸಂಗ್ರಹಿಸಲಿದೆ. ಇದರಿಂದ ಕೊಳೆಯುವ ವಸ್ತುಗಳನ್ನು ಸಂಗ್ರಹಿಸಿಡುವುದು ತಪ್ಪುತ್ತದೆ. ಒಣ ಕಸ ಎಸೆಯುವ ಬದಲು ಒಂದೇ ದಿನ ಕೊಟ್ಟರೆ ಮಾಲಿನ್ಯ ತಡೆ, ಸ್ವತ್ಛತೆಗೆ ಪ್ರಯೋಜನವಾಗುತ್ತದೆ ಎನ್ನುವುದು ಪುರಸಭೆ ವಾದವಾಗಿದೆ. ಆದರೆ ಒಣ ಕಸ ಒಂದು ವಾರ ಮನೆಯಲ್ಲಿ ಶೇಖರಿಸುವುದು ಕಷ್ಟ ಎನ್ನುವ ಅಭಿಪ್ರಾಯವೂ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಪೈಪ್‌ ಕಾಂಪೋಸ್ಟ್‌
ಈ ನಡುವೆ ಹಸಿ ಕಸವನ್ನೂ ಸಮರ್ಥವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಮನೆಗಳಲ್ಲಿ ಪೈಪ್‌ ಕಾಂಪೋಸ್ಟ್‌ ಅಳವಡಿಸುವ ಯೋಜನೆಯನ್ನು ಪ್ರೋತ್ಸಾಹಿಸುತ್ತಿದೆ. ಸಂಘ-ಸಂಸ್ಥೆಗಳ ಸಹಕಾರ ದಲ್ಲಿ 500 ಮನೆಗಳಲ್ಲಿ ಪೈಪ್‌ ಕಾಂಪೋಸ್ಟ್‌ ಅಳವಡಿಸಲು ನಿರ್ಧರಿಸಲಾಗಿದೆ. 250 ಮನೆಗಳಲ್ಲಿ ಅಳವಡಿಕೆಯಾಗಿದೆ.

ಮಾಹಿತಿ ನೀಡಿ
ಮನೆಗಳಿಂದ ತ್ಯಾಜ್ಯ ಸಂಗ್ರಹ ಆರಂಭವಾದ ಬಳಿಕ ನಗರದಲ್ಲಿ ರಸ್ತೆ ಬದಿ ತ್ಯಾಜ್ಯ ಎಸೆಯುವ ಸಮಸ್ಯೆ ಬಹುತೇಕ ನಿವಾರಣೆಗೊಂಡಿತ್ತು. ಈಗ ಹೊಸ ನಿಯಮಾವಳಿ ಬಗ್ಗೆ ಜನರಿಗೆ ಇನ್ನೂ ತಿಳಿದಿಲ್ಲ. ಮನದಟ್ಟಾಗುವವರೆಗೆ ಮತ್ತೆ ರಸ್ತೆಗಳಲ್ಲಿ, ವಿವಿಧೆಡೆಗಳಲ್ಲಿ ಕಸ ಬೀಳುವ ಸಾಧ್ಯತೆ ಇದೆ. ಇದಕ್ಕಾಗಿ ಪುರಸಭೆ ನಿರಂತರ ಮಾಹಿತಿ ನೀಡಿ ತಿಳಿವಳಿಕೆ ಮೂಡಿಸಬೇಕೆನ್ನುವುದು ಜನರ ಆಗ್ರಹವಾಗಿದೆ.

Advertisement

ಮಾಲಿನ್ಯ ತಡೆಗೆ ಸಹಕಾರಿ
ಪ್ರತಿನಿತ್ಯ ಹಸಿಕಸ-ಒಣ ಕಸವನ್ನು ಒಟ್ಟಿಗೆ ನೀಡಿ ನೆಲಭರ್ತಿ ಜಾಗದಲ್ಲಿ ತುಂಬಿಸುವುದರಿಂದ ಪರಿಸರ ಮಾಲಿನ್ಯವಾಗುತ್ತಿದೆ. ಪ್ರಕೃತಿ ರಕ್ಷಣೆಗೆ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಅನಿವಾರ್ಯವಾಗಿದ್ದು, ಸಾರ್ವಜನಿಕರು ಸಹಕರಿಸಬೇಕಿದೆ.
-ರೇಖಾ ಜೆ. ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ ಕಾರ್ಕಳ

ಒಣ ಕಸ ರಾಶಿ
ಹಸಿ-ಒಣ ಕಸ ಪ್ರತ್ಯೇಕಿಸಿ ಕೊಡುವ‌ ಕ್ರಮ ಮೊದಲಿನಿಂದಲೂ ಇತ್ತು. ಮಧ್ಯದಲ್ಲಿ ಜನ ಒಟ್ಟಿಗೆ ಕೊಡಲು ಆರಂಭಿಸಿದ್ದರಿಂದ ತ್ಯಾಜ್ಯ ವಾಹನದವರು ಅದನ್ನೆ ಸಂಗ್ರಹಿಸಿ ತರುತ್ತಿದ್ದರು. ಇದರಿಂದ ಡಂಪಿಂಗ್‌ ಯಾರ್ಡ್‌ನಲ್ಲಿ ಒಣ ಕಸ ತುಂಬಿ ಹೋಗಿದೆ. ಪರಿಸರವೂ ಮಾಲಿನ್ಯವಾಗಿದೆ.
-ಸುಮಾ ಕೇಶವ್‌, ಅಧ್ಯಕ್ಷೆ ಪುರಸಭೆ ಕಾರ್ಕಳ

ಹಸಿ ಕಸ ಯಾವುದು?
ಅಡುಗೆ ಮನೆ ತ್ಯಾಜ್ಯಗಳಾದ ತರಕಾರಿ, ಹಣ್ಣು ಹಂಪಲು, ತ್ಯಾಜ್ಯ ಇತರೆ ಕೊಳೆಯುವ ವಸ್ತುಗಳು.
ಒಣ ಕಸ ಯಾವುದು?
ಹಾಲಿನ ಪ್ಯಾಕೆಟ್‌, ಕಾಗದ, ಪ್ಲಾಸ್ಟಿಕ್‌ ಬಾಟಲಿ, ಪ್ಲಾಸ್ಟಿಕ್‌ , ರಟ್ಟು, ಕಬ್ಬಿಣ, ಇತರ ಘನ ವಸ್ತುಗಳು.

ಪುರಸಭೆ ಜನಸಂಖ್ಯೆ: 25,800
ವಾರ್ಡ್‌ಗಳ ಸಂಖ್ಯೆ: 23
ದಿನವೊಂದಕ್ಕೆ ಹಸಿ ಕಸ ಸಂಗ್ರಹ: 5 ಟನ್‌
ದಿನವೊಂದಕ್ಕೆ ಒಣ ಕಸ ಸಂಗ್ರಹ: 6 ಟನ್‌
ಅಳವಡಿಸಲಾದ ಪೈಪ್‌ ಕಾಂಪೋಸ್ಟ್‌: 250
ತಿಂಗಳಿಗೆ ತಯಾರಾಗುವ
ಎರೆಹುಳ ಗೊಬ್ಬರ: 4 ಟನ್‌

Advertisement

Udayavani is now on Telegram. Click here to join our channel and stay updated with the latest news.

Next