Advertisement

ಎವರೆಸ್ಟ್‌ ಶಿಖರ ಮಾಪನದ ವಿವರ…

11:48 PM Dec 08, 2020 | mahesh |

ಮೌಂಟ್‌ ಎವರೆಸ್ಟ್‌ನ ಪರಿಷ್ಕೃತ ಎತ್ತರವನ್ನು ಚೀನ ಮತ್ತು ನೇಪಾಲಘೋಷಿಸಿವೆ. ಕಳೆದ ಕೆಲವು ವರ್ಷಗಳ ಹಿಂದೆ ಸಂಭವಿಸಿದ ಭೂಕಂಪದಿಂದಾಗಿ ಈ ಪರ್ವತದ ಎತ್ತರ ತಗ್ಗಿರಬಹುದು ಎನ್ನುವ ಅನುಮಾನವೂ ಒಂದೆಡೆ ಇತ್ತು. ಆದರೆ, ಅಚ್ಚರಿಯೆಂಬಂತೆ ಎತ್ತರದಲ್ಲಿ ಏರಿಕೆಯಾಗಿದೆ…

Advertisement

1856ರಲ್ಲಿ ಮೊದಲ ಮಾಪನ
ಒಂದು ಪರ್ವತದ ಎತ್ತರವನ್ನು ಖಚಿತವಾಗಿ ಅಳೆಯುವುದು ಹೇಗೆ ಎನ್ನುವ ವಿಚಾರದಲ್ಲಿ ಪರ-ವಿರೋಧ ಇದ್ದೇ ಇದೆ. ಆದರೂ ಶತಮಾನಗಳಿಂದ ಪರ್ವತವೊಂದರ ಎತ್ತರವನ್ನು ಅಳೆಯಲು ಬಳಸುತ್ತಾ ಬಂದಿರುವ ಮಾರ್ಗವೆಂದರೆ-ಗಣಿತ! ನಿರ್ದಿಷ್ಟವಾಗಿ ಹೇಳಬೇಕೆಂದರೆ ತ್ರಿಕೋನಮಿತಿಯ ಮೂಲಕ. ಮಾಪಕರು ನೆಲ ಮಟ್ಟದಲ್ಲಿ ಎರಡು ಬಿಂದುಗಳ ನಡುವಿನ ಅಂತರವನ್ನು ಲೆಕ್ಕ ಹಾಕಿ ಆ ಎರಡೂ ಬಿಂದುಗಳಿಂದ ಪರ್ವತದ ತುತ್ತತುದಿಯವರೆಗಿನ ಬಿಂದುವನ್ನು ಲೆಕ್ಕಹಾಕುತ್ತಾರೆ (ತ್ರಿಭುಜಾಕಾರದಲ್ಲಿ) ನಂತರ ಗಣಿತ ಸೂತ್ರದ ಆಧಾರದಲ್ಲಿ ಎತ್ತರವನ್ನು ದಾಖಲಿಸುತ್ತಾರೆ. ಮೊಟ್ಟ ಮೊದಲಿಗೆ ಈ ರೀತಿಯಲ್ಲಿ ಮೌಂಟ್‌ ಎವರೆಸ್ಟ್‌ನ ಎತ್ತರವನ್ನು ಲೆಕ್ಕಹಾಕಿದವರೆಂದರೆ ಜಾರ್ಜ್‌ ಎವರೆಸ್ಟ್‌(1856ರಲ್ಲಿ). ಕೋನಗಳನ್ನು ಲೆಕ್ಕ ಹಾಕಲು ಅವರು 500 ಕೆ.ಜಿ. ಭಾರತ ಥಿಯೋಡಲೈಟ್‌ ಎನ್ನುವ ಉಪಕರಣವನ್ನು ಬಳಸಿದ್ದರು. 1955ರಲ್ಲಿ ಭಾರತದ ನೇತೃತ್ವದಲ್ಲಿ ಪರ್ವತವನ್ನು ಅಳೆಯುವ ಪ್ರಕ್ರಿಯೆಯಲ್ಲಿ ಬದಲಾವಣೆ ಬಂದಿತು. ಅಂದು ಫೋಟೋಗ್ರಾಮೆಟ್ರಿ ಎನ್ನುವ ಛಾಯಾಗ್ರಹಣದ ಆಧಾರದಲ್ಲಿ ಎತ್ತರ ಮತ್ತು ಅಂತರವನ್ನು ಪತ್ತೆಹಚ್ಚುವ ಮಾರ್ಗವನ್ನೂ ಪೂರಕವಾಗಿ ಬಳಸಿಕೊಂಡಿದ್ದರು. ಈಗ ತಂತ್ರಜ್ಞಾನ ಕ್ಷೇತ್ರದಲ್ಲಿ ಅಭೂತಪೂರ್ವ ಬದಲಾವಣೆಯಾಗಿದ್ದು, ಜಿಪಿಎಸ್‌ ತಂತ್ರಜ್ಞಾನವನ್ನೂ ಬಳಸಿಕೊಳ್ಳಲಾಗುತ್ತದೆ.

ಈಗ ಹೇಗೆ ಮಾಪನ ಮಾಡಲಾಯಿತು?
ಸಮುದ್ರದ ಮಟ್ಟವನ್ನು ಬೇಸ್‌ ಲೆವೆಲ್‌ ಎಂದು ಪರಿಗಣಿಸಲಾಯಿತು. ನಂತರ ಮುಖ್ಯವಾಗಿದ್ದು, ಮೌಂಟ್‌ ಎವರೆಸ್ಟ್‌ನ ತುದಿ ಅಂದರೆ ಅದರ ಮೇಲಿನ ಹಿಮವೋ ಅಥವಾ ಕೊನೆ ಬಂಡೆಗಲ್ಲೋ ಎನ್ನುವುದು. ಮಾಪನ ನಡೆಸಿದ ಚೀನ ಮತ್ತು ನೇಪಾಲದ ನಡುವೆಯೂ ಈ ವಿಚಾರದಲ್ಲಿ ಭಿನ್ನಾಭಿಪ್ರಾಯವಿತ್ತು. ಚೀನ ಬಂಡೆಗಲ್ಲನ್ನೇ ತುದಿ ಎಂದು ಪರಿಗಣಿಸಬೇಕು ಎಂದು ವಾದಿಸಿದರೆ ನೇಪಾಲ ಹಿಮವನ್ನು ತುದಿ ಎಂದು ಭಾವಿಸಬೇಕು ಎಂದಿತ್ತು. ಆದರೆ ಕೆಲವೊಮ್ಮೆ ಬಂಡೆಗಲ್ಲಿನ ಮೇಲೆ 10 ಅಡಿಯಷ್ಟು ಹೆಚ್ಚುವರಿ ಹಿಮ ಜಮೆಯಾಗಿರುತ್ತದೆ. ಹೀಗಾಗಿ, ಅದನ್ನೇ ಎತ್ತರ ಎಂದು ಪರಿಗಣಿಸಲು ಆಗುವುದಿಲ್ಲ ಎನ್ನುವ ತೀರ್ಮಾನಕ್ಕೆ ಬರಲಾಯಿತು. ಬಂಡೆಗಲ್ಲು ಎಷ್ಟು ಕೆಳಗಿದೆ ಎನ್ನುವುದನ್ನು ಪತ್ತೆಹಚ್ಚಲು ಈ ತಂಡ ರೇಡಾರ್‌ ವ್ಯವಸ್ಥೆಯನ್ನು ಬಳಸಿತು. ಅನಂತರ ಜಿಪಿಎಸ್‌ ಉಪಕರಣ ಸ್ಥಾಪಿಸಿತು. ಜಿಪಿಎಸ್‌ ಪರಿಕರ ಎಷ್ಟು ಎತ್ತರದಲ್ಲಿದೆ ಎನ್ನುವುದನ್ನು 3 ಉಪಗ್ರಹಗಳು ಮಾಪನ ಮಾಡಿದವು. ನಂತರ ಗಣಿತ ಸೂತ್ರ ಬಳಸಿ ಎತ್ತರವನ್ನು ಪತ್ತೆಹಚ್ಚಲಾಯಿತು. 1934ರಲ್ಲಿ ಸಂಭವಿಸಿದ್ದ ಭಾರೀ ಭೂಕಂಪವೊಂದು ಮೌಂಟ್‌ ಎವರೆಸ್ಟ್‌ನ ಎತ್ತರವನ್ನು 2 ಅಡಿ ತಗ್ಗಿಸಿತ್ತು. ಹೀಗಾಗಿ, 2015ರಲ್ಲಿ ನೇಪಾಳಕ್ಕೆ ಬಂದಪ್ಪಳಿಸಿದ ಭಾರೀ ಭೂಕಂಪದ ಪರಿಣಾಮ ಪರ್ವತದ ಎತ್ತರ ಕುಸಿತವೂ ಆಗಿರಬಹುದು ಎನ್ನುವ ಅನುಮಾನ ಮೂಡಿತ್ತು. ಆದರೆ ಈಗಿನ ಮಾಪನವು ಈ ಅನುಮಾನಗಳಿಗೆ ತೆರೆ ಎಳೆದಿದೆ. ಈ ಹಿಂದೆ 8,844 ಮೀಟರ್‌ ಎತ್ತರವಿದ್ದ ಈ ಪರ್ವತ ಈಗ 8,848 ಮೀಟರ್‌ನಷ್ಟು ಬೆಳೆದುನಿಂತಿದೆ.

Advertisement

Udayavani is now on Telegram. Click here to join our channel and stay updated with the latest news.

Next