Advertisement

ಅತ್ತಿದ್ದಕ್ಕೆ ಬಹುಮಾನ!

06:00 AM Nov 20, 2018 | |

ನಾನಾಗ ಪ್ರೌಢಶಾಲೆಯಲ್ಲಿ ಓದುತ್ತಿದ್ದೆ. ಬೇರೆ ಎಲ್ಲ ಪಠ್ಯಗಳಿಗಿಂತ ಕನ್ನಡ ಎಂದರೆ ನನಗೆ ಹೆಚ್ಚು ಪ್ರಿಯ ವಿಷಯವಾಗಿತ್ತು. ನಮಗೆ ಕನ್ನಡ ಬೋಧಿಸುತ್ತಿದ್ದ ಗುರುಗಳು ಪಾಠ ಮಾಡುವ ಶೈಲಿ, ಸ್ಪಷ್ಟ ಉಚ್ಚಾರಣೆ ನನಗೆ ಬಹಳ ಹಿಡಿಸಿತ್ತು. ಅವರ ತರಗತಿಯನ್ನು ತಪ್ಪಿಸಿಕೊಳ್ಳುತ್ತಲೇ ಇರಲಿಲ್ಲ. ಪರೀಕ್ಷೆಯಲ್ಲೂ ಸಹ ಕನ್ನಡದಲ್ಲಿ ಹೆಚ್ಚಿನ ಅಂಕ ಪಡೆಯುತ್ತಿದ್ದೆ. 

Advertisement

ನಮ್ಮ ಗುರುಗಳು ಆಯಾ ಪಾಠಗಳನ್ನು ಮುಗಿಸಿದ ಮೇಲೆ ಅದಕ್ಕೆ ಸಂಬಂಧಿಸಿದಂತೆ ವಿಶೇಷ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಅವುಗಳಲ್ಲಿ ನನ್ನ ಭಾಗವಹಿಸುವಿಕೆ ಇದ್ದೇ ಇರುತ್ತಿತ್ತು. ನಮಗೆ ಆಗ ಎಂ.ಎಸ್‌. ಸುಂಕಾಪುರ ಬರೆದ “ನಗು-ಅಳು’ ಎಂಬ ಹಾಸ್ಯಪಾಠವಿತ್ತು. ಆ ಪಾಠವನ್ನು ನಾವೆಲ್ಲ ತುಂಬಾ ಎಂಜಾಯ್‌ ಮಾಡಿಕೊಂಡು ಕೇಳಿದ್ದೆವು. ಗುರುಗಳು ಆ ಗದ್ಯದ ಮೇಲೆ ಒಂದು ಸಣ್ಣ ಚಟುವಟಿಕೆಯನ್ನು ಆಯೋಜಿಸಿದ್ದರು. ಅದೇನೆಂದರೆ, ನಾವೆಲ್ಲ ವೇದಿಕೆಯ ಮೇಲೆ ಹೋಗಿ, ನಗುವುದರ ಜೊತೆಗೆ ಅತ್ತು ಬರಬೇಕು. ಅದರಲ್ಲಿ ಗೆದ್ದವರಿಗೆ ಬಹುಮಾನವೂ ಇತ್ತು. ಒಬ್ಬೊಬ್ಬರಾಗಿ ವೇದಿಕೆಯ ಮೇಲೆ ಹೋಗಿ ಅತ್ತು, ನಕ್ಕು ಬರತೊಡಗಿದರು. ಒಬ್ಬೊಬ್ಬರದು ಒಂದೊಂದು ರೀತಿ. ಒಬ್ಬ ಹುಚ್ಚನಂತೆ ನಕ್ಕರೆ, ಮತ್ತೂಬ್ಬ ವ್ಯಂಗ್ಯವಾಗಿ ಅಳುತ್ತಿದ್ದ. ನನ್ನ ಸರತಿ ಬಂತು. ಅಳುಕಿನಿಂದಲೇ ಸ್ಟೇಜ್‌ ಹತ್ತಿದೆ. ಕಾಲು ನಡುಗುತ್ತಿದ್ದವು. ಒಮ್ಮೆಲೇ ಜೋರಾಗಿ ನಕ್ಕು, ಮರು ಕ್ಷಣವೇ ರೊಯ್ಯನೆ ಅತ್ತು ಬಿಟ್ಟೆ. ನನ್ನ ಮುಖ ನೋಡಿ ಶಿಕ್ಷಕರಾದಿಯಾಗಿ ಸ್ನೇಹಿತರೆಲ್ಲರೂ ನಗತೊಡಗಿದರು. ಕೆಲಸ ಕೆಟ್ಟಿತೆಂದು ವೇದಿಕೆ ಇಳಿದು ಓಡಿಬಂದೆ.

ಎಲ್ಲರ ಸರತಿ ಮುಗಿದ ಮೇಲೆ, ಯಾರು ಗೆದ್ದಿರಬಹುದೆಂದು ಊಹಿಸುತ್ತಾ ತೀರ್ಪಿಗಾಗಿ ಕಾಯತೊಡಗಿದೆವು. ಆದರೆ, ಗುರುಗಳು ಯಾರು ಗೆದ್ದರೆಂದು ನಾಳೆ ಹೇಳುತ್ತೇನೆ ಎಂದು ಹೊರಟುಹೋದರು. ಮರುದಿನ ತರಗತಿಯಲ್ಲಿ ಪ್ರಥಮ ಬಹುಮಾನ ಘೋಷಣೆ ಮಾಡಿದಾಗ, ವಿಜೇತ ನಾನಾಗಿದ್ದೆ. ನನಗಂತೂ ಎಲ್ಲಿಲ್ಲದ ಖುಷಿ. ಉಡುಗೊರೆಯಾಗಿ ಸಿಕ್ಕಿದ್ದು ಹತ್ತು ರೂಪಾಯಿ ಹಾಗೂ ಒಂದು ಸಣ್ಣ ನೋಟ್‌ಬುಕ್‌. ಆಗ ಏನೋ ಸಾಧಿಸಿದವನಂತೆ ಬೀಗಿದ್ದೆ. 

– ಅಂಬಿ ಎಸ್‌. ಹೈಯ್ಯಾಳ್‌, ಮುದನೂರ ಕೆ

Advertisement

Udayavani is now on Telegram. Click here to join our channel and stay updated with the latest news.

Next