Advertisement

ಎವರ್‌ ಕೂಲ್‌ ಕುರ್ತಿ

07:49 PM Sep 03, 2019 | mahesh |

ನಿಮ್ಮ ವಾರ್ಡ್‌ರೋಬ್‌ನಲ್ಲಿ ಈ ಡ್ರೆಸ್‌ ಇದ್ದರೆ ಚಿಂತಿಸುವ ಅಗತ್ಯವೇ ಇಲ್ಲ. ಮಳೆ, ಚಳಿ, ಬೇಸಿಗೆಕಾಲವೆನ್ನದೆ ಸರ್ವಋತುಗಳಿಗೂ ಹೊಂದುವ, ಆಫೀಸ್‌-ಔಟಿಂಗ್‌ ಎನ್ನದೆ ಎಲ್ಲ ಕಡೆಗೂ ಧರಿಸಬಹುದಾದ ದಿರಿಸು ಇದು. ಯಾವುದು ಅಂತ ಗೊತ್ತಾಯ್ತಾ? ಅದೇರೀ, ಕಾಟನ್‌ ಕುರ್ತಿ…

Advertisement

ಬಿಸಿಲು, ಮಳೆ, ಚಳಿ… ಕಾಲ ಯಾವುದೇ ಇರಲಿ; ವರ್ಷದ ಅಷ್ಟೂ ದಿನಗಳು ಧರಿಸಬಹುದಾದ ಉಡುಗೆಗಳಲ್ಲಿ ಕಾಟನ್‌ (ಹತ್ತಿ) ಕುರ್ತಿ ಕೂಡಾ ಒಂದು. ಈ ಬಟ್ಟೆ ಬೇಸಿಗೆಯಲ್ಲಿ ನಮ್ಮನ್ನು ತಂಪಾಗಿರಿಸುವುದಲ್ಲದೆ, ಬೆವರನ್ನು ಹೀರಿ ದೇಹದ ದುರ್ಗಂಧವನ್ನು ದೂರವಿಡುತ್ತದೆ. ಮಳೆಗಾಲ ಮತ್ತು ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸುತ್ತದೆ. ಅಷ್ಟೇ ಅಲ್ಲ, ಕಾಟನ್‌ ಕುರ್ತಿ ಧರಿಸಲು ಕಂಫ‌ರ್ಟಬಲ್‌ ಕೂಡಾ ಹೌದು.

ನವನವೀನ “ಕುರ್ತಿ’
ಖಾದಿ ಅಥವಾ ಕಾಟನ್‌ ಬಟ್ಟೆ ಧರಿಸಿದರೆ ಅಡಗೂಲಜ್ಜಿ ಅನ್ನುವ ಕಾಲ ಯಾವತ್ತೋ ಹೋಯ್ತು. ಈಗ ಫ್ಯಾಷನ್‌ ಲೋಕದಲ್ಲಿ ಈ ಉಡುಗೆ ಟ್ರೆಂಡ್‌ ಆಗುತ್ತಿದೆ. ಡೆನಿಮ್‌ ಪ್ಯಾಂಟ್‌, ಜೀನ್ಸ್‌ ಸ್ಕರ್ಟ್‌, ಹ್ಯಾರೆಂಪ್ಯಾಂಟ್‌, ಧೋತಿ ಪ್ಯಾಂಟ್‌, ಲೆಗಿಂಗ್ಸ್, ಚೂಡಿದಾರ ಪ್ಯಾಂಟ್‌, ಪಟಿಯಾಲ ಪ್ಯಾಂಟ್‌, ಉದ್ದ ಲಂಗ, ಪಲಾಝೊ… ಹೀಗೆ ಯಾವುದರ ಜೊತೆ ಬೇಕಾದರೂ ಕಾಟನ್‌ ಕುರ್ತಿಯನ್ನು ತೊಡಬಹುದು.

ಸಾಂಪ್ರದಾಯಕವಷ್ಟೇ ಅಲ್ಲ
ಕುರ್ತಿ ಎಂದಾಕ್ಷಣ ಸಾಂಪ್ರದಾಯಿಕ ಉಡುಗೆ ಎಂಬ ಕಲ್ಪನೆ ಮೂಡಬಹುದು. ಆದರೆ ಈಗ ಈ ಸರಳ ಕಾಟನ್‌ ಕುರ್ತಿ ಕೂಡ ಮೇಕ್‌ಓವರ್‌ ಪಡೆದಿದೆ. ಫಾರ್ಮಲ್‌ ಅಂಗಿಯಂತೆ ಕಾಣುವ ಕುರ್ತಿಗಳೂ ಮಾರುಕಟ್ಟೆಯಲ್ಲಿ ಲಭ್ಯ. ಫಾರ್ಮಲ್‌ ಉಡುಗೆಯಲ್ಲಿ ಇರುವ ಗೀಟು, ಪಟ್ಟಿ, ಚೌಕಗಳಂಥ ಫಾರ್ಮಲ್‌ ಡಿಸೈನ್‌ಗಳನ್ನು ಮೂಡಿಸಿ, ಕುರ್ತಿಗೆ ಫಾರ್ಮಲ್‌ನ ಲುಕ್‌ ಕೊಡಲಾಗಿದೆ. ಇಂಥ ಫಾರ್ಮಲ್‌ ಕುರ್ತಿಗಳು ವ್ಯಕ್ತಿತ್ವಕ್ಕೆ ಗಾಂಭೀರ್ಯವನ್ನೂ ಕೊಡುತ್ತವೆ. ಹಾಗಾಗಿ ಪಾರ್ಟಿ, ಪಿಕ್‌ನಿಕ್‌, ಶಾಪಿಂಗ್‌,ಕ್ಯಾಶುಯಲ್‌ ಔಟಿಂಗ್‌ ಅಷ್ಟೇ ಅಲ್ಲದೆ, ಇವುಗಳನ್ನು ಆಫೀಸ್‌ಗೂ, ಇಂಟರ್‌ವ್ಯೂಗೆ ಹೋಗುವಾಗಲೂ ತೊಡಬಹುದು.

ಚಿತ್ರ, ಚಿತ್ತಾರವೂ ಇದೆ
ಸಾಂಪ್ರದಾಯಿಕ ಕುರ್ತಿ ತೊಡಲು ಇಷ್ಟಪಡುವವರಿಗೆ ಬಹಳಷ್ಟು ಆಯ್ಕೆಗಳು ಇದ್ದೇ ಇವೆಯಲ್ಲ! ಇಂಡಿಯನ್‌ಪ್ರಿಂಟ್‌, ಬಗೆ ಬಗೆಯ ಚಿತ್ರಕಲೆ, ಟೈಡೈ (ರಾಜಾಸ್ಥಾನಿ ಬಾಂದನಿ ಶೈಲಿಯ ಕಸೂತಿ ಮತ್ತು ಬಣ್ಣ ಮೂಡಿಸುವ ಕಲೆ), ಮಿರರ್‌ ವರ್ಕ್‌, (ಕನ್ನಡಿ ಚೂರುಗಳನ್ನು ಬಳಸಿ ಕಸೂತಿ ಹಾಕಿದ ಅದ್ಧೂರಿ ಕುರ್ತಿಗಳು), ಬ್ಲಾಕ್‌ ಪ್ರಿಂಟ್‌… ಹೀಗೆ, ಅನೇಕ ವಿನ್ಯಾಸದ ಕುರ್ತಿಗಳನ್ನು ಆಯ್ದುಕೊಳ್ಳಬಹುದು.

Advertisement

ಪೋಲ್ಕಾ ಡಾಟ್ಸ್‌, ಜಾಮೆಟ್ರಿಕ್‌ ಡಿಸೈನ್ಸ್‌, ಸ್ಪ್ರೆ ಪೈಂಟ್‌ ಶೈಲಿಯ ಚಿತ್ರಕಲೆ, ಅನಿಮಲ್‌ ಪ್ರಿಂಟ್‌, ಫ್ಲೋರಲ್‌ ಪ್ರಿಂಟ್‌, ವೆಜಿಟಬಲ್‌ ಪ್ರಿಂಟ್‌, (ತರಕಾರಿಯಿಂದ ಉತ್ಪತ್ತಿಯಾಗುವ ನೈಜಬಣ್ಣ), ಬ್ಲೀಚ್‌ವಾಶ್‌, ಪ್ಯಾಚ್‌ವರ್ಕ್‌ ಶೈಲಿ, ಲೇಸ್‌ವರ್ಕ್‌, ಕ್ರೋಶಾ, ಪಾಕೆಟ್‌ (ಜೇಬು), ಇತ್ಯಾದಿಗಳ ಆಯ್ಕೆಯೂ ಇವೆ. ಇವನ್ನು ಹಬ್ಬ-ಹರಿದಿನ, ಕಾಲೇಜು ಫೆಸ್ಟ್‌ಗಳಂಥ ಸಮಾರಂಭಗಳಲ್ಲಿ ತೊಡಬಹುದು.

ಟೂ ಇನ್‌ ಒನ್‌
ಇಂಡಿಯನ್‌ ಕುರ್ತಿಗಳನ್ನು ದುಪಟ್ಟಾ ಜೊತೆ ತೊಟ್ಟರೆ ಸಲ್ವಾರ್‌ ಕಮೀಜ್‌ ಆಯಿತು. ಫಾರ್ಮಲ್‌ ಕುರ್ತಿಯನ್ನು ಕೇವಲ ಪ್ಯಾಂಟ್‌ ಜೊತೆ ತೊಟ್ಟರೆ ಪಾಶ್ಚಾತ್ಯಉಡುಗೆ ಆಯಿತು. ಹಾಗಾಗಿ ಕುರ್ತಿಗಳನ್ನು ಕ್ಯಾಶುಯಲ್‌, ಪಾಶ್ಚಾತ್ಯ ಮತ್ತು ಸಾಂಪ್ರದಾಯಿಕ, ಎಲ್ಲಾ ಬಗೆಯ ಉಡುಗೆಯೆಂದು ಪರಿಗಣಿಸಬಹುದು.

ಕುರ್ತಿಯಲ್ಲಿ ಸ್ಲಿವ್ಸ್‌, ಸ್ಲಿವ್‌ಲೆಸ್‌ ಅಷ್ಟೇ ಅಲ್ಲದೆ ಬಹಳಷ್ಟು ಆಯ್ಕೆಗಳಿವೆ. ಉದ್ದ ತೋಳಿನ ಕುರ್ತಿಗಳಲ್ಲಿ ಬೆಲ್‌ಬಾಟಮ್‌ ತೋಳು, ಮುಕ್ಕಾಲು ತೋಳು, ಕ್ಯಾಪ್‌ಸ್ಲಿವ್ಸ್‌, ಫೋಲ್ಡ್ ಬಲ್‌ ತೋಳು, ಗುಂಡಿ (ಬಟನ…) ಇರುವ ತೋಳು… ಮುಂತಾದ ಆಯ್ಕೆಗಳಿವೆ. ಇವುಗಳಲ್ಲಿ ಅಂಗಿಯಂತೆ ಕಾಲರ್‌ ಕೂಡಾ ಲಭ್ಯ. ಚೂಡಿದಾರದ ಟಾಪ್‌ನಂತೆ ಬಗೆ-ಬಗೆಯ ಕತ್ತಿನ ವಿನ್ಯಾಸಗಳೂ ಲಭ್ಯ. ಈ ಕುರ್ತಿ ಎವರ್‌ಗ್ರೀನ್‌, ಎವರ್‌ ಕೂಲ್‌ ಅನ್ನಲು ಇದಕ್ಕಿಂತ ಕಾರಣ ಬೇಕೇ?

ಕಸ್ಟಮೈಸ್ಡ್ ಕುರ್ತಿ
ರೆಡಿಮೇಡ್‌ ಕುರ್ತಿಯನ್ನೇ ಖರೀದಿಸಬೇಕೆಂದಿಲ್ಲ. ಮೀಟರ್‌ ಲೆಕ್ಕದಲ್ಲಿ ಬಟ್ಟೆ ಖರೀದಿಸಿ, ತಮಗೆ ಬೇಕಾದಂತೆ ಹೊಲಿಸಿಕೊಳ್ಳಬಹುದು. ಶರ್ಟ್‌ ಪೀಸ್‌ನಿಂದ ಸ್ಟೈಲಿಶ್‌ ಕುರ್ತಿಗಳನ್ನು ಹೊಲಿಸಿಕೊಳ್ಳುವುದೂ ಟ್ರೆಂಡ್‌!

ಕುರ್ತಿ ಟಿಪ್ಸ್‌
-ಜಾರ್ಜೆಟ್‌, ಸಿಲ್ಕ್, ಸ್ಯಾಟಿನ್‌, ವೆಲ್ವೆಟ್‌ ಬಟ್ಟೆಯ ಕುರ್ತಿಗಳನ್ನು ಪಾರ್ಟಿವೇರ್‌ ಆಗಿ ತೊಡಬಹುದು.
– ಸಿಂಪಲ್‌ ಕುರ್ತಿ ಜೊತೆಗೆ ಮರದ ಬಳೆ, ಸಿಂಗಲ್‌ ನೆಕ್‌ಪೀಸ್‌ ಧರಿಸಿದರೆ ಚೆನ್ನ.
-ಪಾರ್ಟಿವೇರ್‌ ಕುರ್ತಿಗೆ ಕೊಲ್ಹಾಪುರಿ ಚಪ್ಪಲಿ, ಎದ್ದು ಕಾಣುವಂಥ ಕಿವಿಯೋಲೆ ಧರಿಸಿ.
-ಇಂಡಿ ವೆಸ್ಟರ್ನ್ ಕುರ್ತಿ, ಧೋತಿ ಸ್ಟೈಲ್‌, ಕುರ್ತಿ-ಜ್ಯಾಕೆಟ್‌, ಕೇಪ್‌ ಸ್ಲಿàವ್‌ ಕುರ್ತಿಗಳು ಕಾಲೇಜು ಯುವತಿಯರಿಗೆ ಸೂಟ್‌ ಆಗುತ್ತವೆ.
-ಕುರ್ತಿ ಜೊತೆಗೆ ಬೇರೆ ಬೇರೆ ರೀತಿಯಲ್ಲಿ ಮಿಕ್ಸ್‌ ಅಂಡ್‌ ಮ್ಯಾಚ್‌ ಟ್ರೈ ಮಾಡಿ.

– ಅದಿತಿಮಾನಸ ಟಿ. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next