Advertisement

ಹಾಂಕಾಂಗ್‌ನಲ್ಲಿ ಮಾಸ್ಕ್ ಕಡ್ಡಾಯವಲ್ಲ; ಸೋಲ್‌: ಶಾಲೆ ಮುಚ್ಚಲು ನಿರ್ಧಾರ

08:47 AM Aug 26, 2020 | Nagendra Trasi |

ಹಾಂಕಾಂಗ್‌: ವಿಶ್ವದ ಕೆಲವೊಂದು ದೇಶಗಳಲ್ಲಿ ಸೋಂಕು ಪ್ರಸರಣ ಸಾಮರ್ಥ್ಯ ಕುಂದಿದ್ದು, ದೈನಂದಿನ ಸೋಂಕು ದಾಖಲಾತಿ ಪ್ರಮಾಣವೂ ಕುಗ್ಗಿದೆ. ಇದೀಗ ಹಾಂಕಾಂಗ್‌ನಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಇಳಿಮುಖಗೊಳ್ಳುತ್ತಿದ್ದು, ಕೆಲವೊಂದು ನಿಯಮಗಳನ್ನು ಸಡಿಲಿಸಲು ನಿರ್ಧರಿಸಲಾಗಿದೆ.

Advertisement

ಈ ಹಿನ್ನೆಲೆಯಲ್ಲಿಯೇ ಹೊಟೇಲ್‌ ಗಳನ್ನು ಶುಕ್ರವಾರದಿಂದ ರಾತ್ರಿ 9 ಗಂಟೆಯವರೆಗೂ ತೆರೆಯಲು ಅವಕಾಶ ಮಾಡಿಕೊಡಲಾಗಿದ್ದು, ಈ ಹಿಂದೆ ಸಂಜೆ 6 ಗಂಟೆಯವರೆಗೆ ಮಾತ್ರ ಕಾರ್ಯಾಚರಣೆಗೆ ಅನುಮತಿ ನೀಡಲಾಗಿತ್ತು. ಇದರೊಂದಿಗೆ ಬ್ಯೂಟಿ ಸಲೂನ್‌, ಸಿನಿಮಾ ಮಂದಿರ ಸೇರಿದಂತೆ ಕೆಲ ಕ್ರೀಡಾ ಸ್ಥಳಗಳನ್ನು ಮತ್ತೆ ತೆರೆಯಲು ಅನುಮತಿ ನೀಡಲಾಗಿದ್ದು, ಇನ್ನು ಮುಂದೆ ಉದ್ಯಾನಗಳಲ್ಲಿ ವ್ಯಾಯಮ, ಅಭ್ಯಾಸಗಳನ್ನು ಮಾಡುವಾಗ ಮುಖಗವಸು ಧರಿಸುವುದು ಕಡ್ಡಾಯವಲ್ಲ ಎಂದು ಸರಕಾರ ಹೇಳಿದೆ.

ಸೋಂಕು ಪ್ರಕರಣದಲ್ಲಿ ಇಳಿಮುಖ ಕಂಡಾಗ ಕೆಲವೊಂದು ನಿಯಮಗಳಲ್ಲಿ ಸಡಿಲಿಕೆ ಮಾಡಬೇಕಾಗುತ್ತದೆ ಎಂದು ಹಾಂಕಾಂಗ್‌ ಆರೋಗ್ಯ ಸಚಿವೆ ಸೋಫಿಯಾ ಚನ್‌ ಅವರು ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಹಾಂಕಾಂಗ್‌ನಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಅತಿ ಕಠಿನ ನಿಯಮಗಳನ್ನು ಹೇರಲಾಗಿತ್ತು. ಸೋಮವಾರ ಕೇವಲ 9 ಹೊಸ ಪ್ರಕರಣಗಳು ವರದಿಯಾಗಿದ್ದು, ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಹಾಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಪಾಲಿಸಬೇಕಾದ ಕೆಲ ನಿಯಮಗಳಲ್ಲಿ ಸಡಿಲಿಕೆ ಮಾಡಲು ನಿರ್ಧರಿಸಲಾಗಿದೆ.

ಸೋಲ್‌: ಶಾಲೆ ಮುಚ್ಚಲು ನಿರ್ಧಾರ

Advertisement

ಕೋವಿಡ್ ವೈರಸ್‌ ಸೋಂಕು ಹರಡುವುದನ್ನು ತಪ್ಪಿಸುವ ಉದ್ದೇಶದಿಂದ ಸೋಲ್‌ ನಗರದಾದ್ಯಂತ ಇರುವ ಶಾಲೆಗಳನ್ನು ಮುಚ್ಚಲು ಮತ್ತು ಆನ್‌ಲೈನ್‌ ಮೂಲಕ ಪಾಠ ಮಾಡುವಂತೆ ದಕ್ಷಿಣ ಕೊರಿಯ ಆದೇಶ ನೀಡಿದೆ. ಕೋವಿಡ್ ಪ್ರಕರಣದ ಹೆಚ್ಚಳದಿಂದಾಗಿ ಮುನ್ನಚ್ಚರಿಕೆಯ ಕ್ರಮವಾಗಿ ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಸೋಲ್‌, ಇಂಚಿಯಾನ್‌ ಮತ್ತು ಜಿಯೊಂಗಿ ಪ್ರದೇಶದ ಹೈಸ್ಕೂಲ್‌ ಸೀನಿಯರ್ಗಳನ್ನು ಹೊರತುಪಡಿಸಿ ಉಳಿದೆಲ್ಲ ವಿದ್ಯಾರ್ಥಿಗಳಿಗೆ ಸೆ. 11ರ ವರೆಗೆ ಆನ್‌ಲೈನ್‌ನಲ್ಲಿ ಪಾಠ ನಡೆಸುವಂತೆ ಆದೇಶದಲ್ಲಿ ತಿಳಿಸಲಾಗಿದೆ ಎಂದು ಶಿಕ್ಷಣ ಸಚಿವಾಲಯ ಮಂಗಳವಾರ ತಿಳಿಸಿದೆ.

ಕಳೆದ ಎರಡು ವಾರಗಳಲ್ಲಿ ಗ್ರೇಟರ್‌ ಸೋಲ್‌ ನಗರದಲ್ಲಿ ಕಡಿಮೆ ಪಕ್ಷ 150 ವಿದ್ಯಾರ್ಥಿಗಳು ಮತ್ತು 43 ಶಾಲಾ ಸಿಬಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ಶಿಕ್ಷಣ ಸಚಿವ ಯೂ ಎನ್‌ ಹಾಯ್‌ ಅವರು ತಿಳಿಸಿದ್ದಾರೆ.

ಕಳೆದ ಮಾರ್ಚ್‌ ವೇಳೆ ಆರಂಭವಾಗ ಬೇಕಿದ್ದ ಸೆಮಿಸ್ಟರ್‌ ಕೋವಿಡ್ ನಿಂದಾಗಿ ಹಲವು ಬಾರಿ ಮುಂದೂಡಲ್ಪಟ್ಟಿತ್ತು. ಆದರೆ ಕೋವಿಡ್ ಹಾವಳಿ ಕಡಿಮೆ ಯಾಗುತ್ತಿದ್ದಂತೆ ಮೇ ತಿಂಗಳಲ್ಲಿ ದಕ್ಷಿಣ ಕೊರಿಯಾದ್ಯಂತ ಶಾಲೆಗಳು ಪುನರಾರಂಭಗೊಂಡಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next