ಸುಬ್ರಹ್ಮಣ್ಯ: ನಾಗಾರಾಧನೆಯ ಮೂಲ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದಲ್ಲಿ ಬುಧವಾರ ದ್ರವ್ಯ ಕಲಶಾಭಿಷೇಕ ನಡೆಯಿತು. ದೇಗುಲದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯರು ಬೆಳಗ್ಗೆ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಸ್ಥಳ ಶುದ್ಧಿ ನಡೆಸಿದ ಬಳಿಕ ಶ್ರೀ ಸುಬ್ರಹ್ಮಣ್ಯ ದೇವರಿಗೆ ವಿವಿಧ ರೂಪದ ದ್ರವ್ಯಗಳ ಅಭಿಷೇಕ ನಡೆಸಲಾಯಿತು. ಬಳಿಕ ಹೋಮ ನೆರವೇರಿತು. ಆ ಬಳಿಕ ಸೇವಾ ಪ್ರಸಾದ ವಿತರಿಸಲಾಯಿತು. ಮಧ್ಯಾಹ್ನ ಮಹಾಪೂಜೆ ಮೊದಲು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರ ಮುಂದೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬೆಳಗ್ಗೆ ದ್ರವ್ಯಕಲಶಾಭಿಷೇಕ ನಡೆದ ಹಿನ್ನೆಲೆಯಲ್ಲಿ ಭಕ್ತರಿಗೆ 8.45ಕ್ಕೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಬಳಿಕ ಎಂದಿನಂತೆ ಭಕ್ತರು ದೇವರ ದರ್ಶನ ಪಡೆದು ನಿತ್ಯ ನಡೆಯುವ ಸೇವೆಗಳನ್ನು ಸಲ್ಲಿಸಿದರು.
ಶೃಂಗೇರಿ ಮಠದಲ್ಲಿ ಆಶ್ಲೇಷಾ ಬಲಿ ನೆರವೇರುವ ಮಂಟಪದಲ್ಲಿ ದೇಗುಲದ ವತಿಯಿಂದ ಆಶ್ಲೇಷಾ ಪೂಜೆಯನ್ನು ಮೊದಲ ಬಾರಿಗೆ ಸಂಜೆ ನೆರವೇರಿಸಲಾಯಿತು. ದೇಗುಲದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯರು ಪೂಜಾ ವಿಧಿವಿಧಾನ ನೆರವೇರಿಸಿ ಪ್ರಸಾದ ವಿತರಿಸಿದರು.
ಕುಕ್ಕೆ ಮುಜರಾಯಿ ಇಲಾಖೆಯ ಆಗಮ ಪಂಡಿತರಾದ ವಿದ್ವಾನ್ ಶಿವಕುಮಾರ್, ಸುಬ್ರಹ್ಮಣ್ಯ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಎಚ್. ರವೀಂದ್ರ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಕೃಷ್ಣಮೂರ್ತಿ ಭಟ್, ಮಹೇಶ್ ಭಟ್ ಕರಿಕ್ಕಳ, ರಾಜೀವಿ ರೈ, ದಮಯಂತಿ ಕೂಜುಗೋಡು, ಮಾಧವ ಡಿ., ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವಿಮಲಾ ರಂಗಯ್ಯ, ದೇಗುಲದ ಶಿಷ್ಟಾಚಾರ ಅಧಿಕಾರಿ ಗೋಪಿನಾಥ ನಂಬೀಶ, ಬಾಲಸುಬ್ರಹ್ಮಣ್ಯ ಭಟ್, ಪದ್ಮನಾಭ ಶೆಟ್ಟಿಗಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಬಿ ವೆಂಕಟೇಶ್, ಷಣ್ಮುಖ ಹೆಬ್ಟಾರ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಶಿವರಾಮ ರೈ, ಮೋಹನ ದಾಸ್ ರೈ, ಮಾಲಿನಿ ಲೋಕೇಶ್ ಮೊದಲಾದವರು ಉಪಸ್ಥಿತರಿದ್ದರು.
ಜು. 4ರಂದು ಸಾಯಂಕಾಲ ದೇವಸ್ಥಾನದ ವತಿಯಿಂದ ಆಶ್ಲೇಷಾ ಬಲಿ ನಡೆದ ಬಳಿಕ ಜು. 5ರಿಂದ ಹೆಚ್ಚುವರಿಯಾಗಿ ಸಾಯಂಕಾಲದ ವೇಳೆ ಕೂಡ ಆಶ್ಲೇಷಾ ಬಲಿ ಸೇವೆ ದೇಗುಲದಲ್ಲಿ ನಡೆಯಲಿದೆ. ಈ ಹಿಂದೆ ಬೆಳಗ್ಗೆ ಮಾತ್ರ ಆಶ್ಲೇಷಾ ಸೇವೆ ದೇಗುಲದಲ್ಲಿ ನಡೆಯುತ್ತಿತ್ತು. ಭಕ್ತರ ಅನುಕೂಲತೆಗಾಗಿ ದೇಗುಲದ ಆಡಳಿತ ಮಂಡಳಿ ಪ್ರಶ್ನೆಯಲ್ಲಿ ಪರಿಹಾರ ಕ್ರಮಗಳನ್ನು ಕಂಡುಕೊಂಡು ಈ ವ್ಯವಸ್ಥೆಯನ್ನು ಜಾರಿಗೆ ತಂದಿದೆ.