ಮೈಸೂರು: ಬಸವಣ್ಣನವರು ಸಮಾನತೆಗಾಗಿ ಹೋರಾಟ ಮಾಡಿದ್ದರು. ಆದರೆ ಇಂದಿಗೂ ಸಮಾಜದಲ್ಲಿ ಸಮಾನತೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಇಂದಿಗೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇಂದಿಗೂ ಬಸವಣ್ಣನವರ ಕಲ್ಪನೆಯ ಸಮಾಜ ನಿರ್ಮಾಣವಾಗಿಲ್ಲ. ಬಸವ ತತ್ವ ಪರಿಪಾಲಕರು ಬಸವಣ್ಣನವರ ಸಮಸಮಾಜ ನಿರ್ಮಾಣಕ್ಕೆ ಬದ್ದರಾಗಿ ಕಾರ್ಯ ಪ್ರವೃತ್ತರಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾಮಠದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳು ಹಾಗು ಬಸವ ಬಳಗಗಳ ಒಕ್ಕೂಟದ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಯಕ ಸಮಾಜ ನಿರ್ಮಾಣಕ್ಕೆ ಬಸವಣ್ಣನವರು ಶ್ರಮಿಸಿದರು. ಕಾಯಕ ತತ್ವದ ಜೊತೆಗೆ ದಾಸೋಹ ತತ್ವ ಪ್ರತಿಪಾದಿಸಿದ್ದರು. ಬದುಕಿನ ಎಲ್ಲಾ ಆಯಾಮಗಳಲ್ಲಿ ಬಸವಣ್ಣನವರ ಆದರ್ಶ ರೂಢಿಸಿಕೊಳ್ಳಬೇಕು. ನಮ್ಮ ಎಲ್ಲಾ ಸಮಸ್ಯೆಗಳಿಗೆ ವಚನ ಸಾಹಿತ್ಯದಲ್ಲಿ ಉತ್ತರವಿದೆ. ಬಸವಾದಿ ಪ್ರಮುಖರ ಆದರ್ಶಗಳನ್ನು ರೂಢಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದರು.
ಇದನ್ನೂ ಓದಿ:ಪಾಠವಿಲ್ಲ, ಪರೀಕ್ಷೆಯಿಲ್ಲ, ಶಿಕ್ಷಕರಿಲ್ಲ.. ದಂಪತಿ ಆರಂಭಿಸಿದ ಈ ಶಿಕ್ಷಣ ವ್ಯವಸ್ಥೆಯೇ ವಿಭಿನ್ನ ಮತ್ತು ವಿಶೇಷ.!
ಸುತ್ತೂರು ಮಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ, ಸಚಿವ ಎಸ್ ಟಿ ಸೋಮಶೇಖರ್, ಶಾಸಕ ಎಲ್ ನಾಗೇಂದ್ರ, ಮೇಯರ್ ಶಿವಕುಮಾರ್ ಸೇರಿದಂತೆ ಮತ್ತಿತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.