ಕಯ್ಯೂರು-ಚೀಮೇನಿ, ಬದಿಯಡ್ಕ, ಬಂದಡ್ಕ, ಕುತ್ತಿಕ್ಕೋಲ್, ದೇಲಂಪಾಡಿ, ಕಾರಡ್ಕ, ಕಾಂಞಂಗಾಡ್, ನೀಲೇಶ್ವರ, ಕುಂಬಾxಜೆ, ತೃಕ್ಕರಿಪುರ, ಮುಳಿಯಾರು, ಚೆಂಗಳ, ಪೈವಳಿಕೆ, ಪುತ್ತಿಗೆ, ಎಣ್ಮಕಜೆ, ಮಂಜೇಶ್ವರ, ಮಂಗಲ್ಪಾಡಿ, ವರ್ಕಾಡಿ ಮೊದಲಾದ ಪಂಚಾಯತ್‌ಗಳಲ್ಲಿರುವ ಬಾವಿಗಳಲ್ಲಿ ಅರ್ಧ ಮೀಟರ್‌ನಷ್ಟು ನೀರು ಕುಸಿದಿದೆ. ಕೋಡೋಂ – ಬೇಳೂರು, ವೆಸ್ಟ್ ಎಳೇರಿ, ಈಸ್ಟ್ ಎಳೇರಿ ಮೊದಲಾದ ಪಂಚಾಯತ್‌ಗಳಲ್ಲಿನ 40 ಬಾವಿಗಳಲ್ಲಿ ಎರಡು ಮೀಟರ್‌ನಷ್ಟು ನೀರಿನ ಮಟ್ಟ ಏರಿದೆ.
ಕಾಸರಗೋಡು: ಸಾಕಷ್ಟು ಮಳೆ ಸುರಿಯು ತ್ತಿದ್ದರೂ ಕಾಸರಗೋಡು ಜಿಲ್ಲೆಯಲ್ಲಿ ಶೇ. 40ರಷ್ಟು ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಕೆಲವೆಡೆ ಎರಡು ಮೀಟರ್‌ನಷ್ಟು ನೀರು ಕುಸಿದಿದೆ.
ಜಿಲ್ಲೆಯ ಅಂತರ್ಜಲ ಇಲಾಖೆ 66 ಬಾವಿಗಳಲ್ಲಿ ನಡೆಸಿದ ಸಂಶೋಧನೆಯಿಂದ 40 ಶೇ. ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ ಎಂದು ಕಂಡುಕೊಳ್ಳಲು ಸಾಧ್ಯವಾಗಿದೆ. ಭಾರೀ ಮಳೆಯಾದ ಜೂನ್ 10ರಿಂದ ಜುಲೈ 10ರ ವರೆಗಿನ ಒಂದು ತಿಂಗಳ ಕಾಲಾವಧಿಯಲ್ಲಿ ಅರ್ಧದಷ್ಟು ಬಾವಿಗಳಲ್ಲಿ ಜಲ ಮಟ್ಟ ಕುಸಿದಿದೆ. ಅದೇ ಸಂದರ್ಭದಲ್ಲಿ ಶೇ. 60ರಷ್ಟು ಬಾವಿಗಳಲ್ಲಿ ನಿರೀಕ್ಷೆಯಂತೆ ಅಂತರ್ಜಲ ಮಟ್ಟ ಏರಿದೆ. 26 ವೀಕ್ಷಣೆಯ ಬಾವಿಗಳಲ್ಲಿ ಅರ್ಧ ಮೀಟರ್‌ನಷ್ಟ ನೀರಿನ ಪ್ರಮಾಣ ಕುಸಿದಿದ್ದರೆ, ನಾಲ್ಕು ಬಾವಿಗಳಲ್ಲಿ ಎರಡು ಮೀಟರ್‌ನಷ್ಟು ಕಡಿಮೆಯಾಗಿದೆ.
ನೆರೆ ಬಂದಿದ್ದರೂ ಭೂಮಿಯೊಳಗೆ ಇಳಿಯುವ ನೀರಿನ ಪ್ರಮಾಣ ಕಡಿಮೆ ಎಂಬುದಾಗಿ ಈ ಅಂಕಿಅಂಶ ಸೂಚಿಸುತ್ತಿದೆ ಎಂದು ಅಂತರ್ಜಲ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಚೀಮೇನಿ, ದೇಲಂಪಾಡಿ, ಚೆಂಗಳ, ಕಿನಾನೂರು-ಕರಿಂದಳಂ ಪಂಚಾಯತ್‌ಗಳಲ್ಲಿರುವ ವೀಕ್ಷಣೆಯ ಬಾವಿಗಳಲ್ಲಿ ಭಾರೀ ಮಳೆ ಸುರಿದರೂ ನೀರಿನ ಪ್ರಮಾಣ ಇಳಿದಿರುವುದು ಕಂಡು ಬಂದಿದೆ.
ಜೂನ್ ತಿಂಗಳಲ್ಲಿ ಒಟ್ಟು 1,142.37 ಮಿಲಿಮೀಟರ್ ಮಳೆಯಾಗಿದೆ. ಕಳೆದ ವರ್ಷಕ್ಕೆ ತುಲನೆ ಮಾಡಿದರೆ ಈ ಬಾರಿ ಮಳೆಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಆದರೆ ಈ ಮಳೆಯಿಂದಾಗಿ ಜಿಲ್ಲೆಯ ಒಟ್ಟು ಬಾವಿಗಳ ಅರ್ಧದಷ್ಟು ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಳಕ್ಕೆ ಯಾವುದೇ ನೆರವಾಗಿಲ್ಲ. ಸುರಿದ ಮಳೆ ನೀರು ತೋಡು, ಚರಂಡಿ ಮೂಲಕ ಹರಿದು ಹೋಗುತ್ತಿದೆ. ಮಳೆ ನಿಂತ ದಿನಗಳಿಂದ ನೀರಿನ ಸಮಸ್ಯೆಗೆ ಕಾರಣವಾಗಲಿದೆ ಎಂದು ಶಂಕಿಸಲಾಗಿದೆ.
ಇಳಿಯದೆ ಹರಿದು ಹೋಗುವುದೇ ಕಾರಣ
ಮಳೆ ನೀರು ಭೂಮಿಯೊಳಗೆ ಇಳಿಯಬೇಕಾದರೆ ಇಂಗು ಗುಂಡಿಗಳ ನಿರ್ಮಾಣವಾಗಬೇಕು. ಈ ಮೂಲಕ ಭೂಮಿಯೊಳಗೆ ನೀರು ಇಳಿದು ಅಂತರ್ಜಲ ಮಟ್ಟದಲ್ಲಿ ಏರಿಕೆಯಾಗಲಿದೆ. ಬದಲಾದ ಕೃಷಿ ವಿಧಾನ, ಹೆಚ್ಚುತ್ತಿರುವ ಕಟ್ಟಡಗಳಿಂದಾಗಿ ನೀರು ಭೂಮಿಯೊಳಗೆ ಇಳಿಯದೆ ಹರಿದು ಹೋಗುತ್ತಿರುವುದರಿಂದ ಇಂತಹ ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ಅಂತರ್ಜಲ ಇಲಾಖೆಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.