Advertisement

ಚಿತ್ತಾಪುರ: ಶಾಲೆ ತೆರೆದು 55 ವರ್ಷ ಕಳೆದರೂ ಇಲ್ಲಿ ದೈಹಿಕ ಶಿಕ್ಷಕರೇ ಇಲ್ಲ!

11:23 AM Aug 30, 2022 | Team Udayavani |

ವಾಡಿ (ಚಿತ್ತಾಪುರ): ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷ ಪೂರ್ಣಗೊಂಡಿದ್ದು, ಸರ್ಕಾರ ಅಮೃತ ಮಹೋತ್ಸವದ ಸಂಭ್ರಮದಲ್ಲಿ ತೇಲಾಡುತ್ತಿದೆ. ಇದೇ ಸ್ವಾತಂತ್ರ್ಯ ಭಾರತದ ಗ್ರಾಮವೊಂದರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ ಮಕ್ಕಳು ಸತತ 55 ವರ್ಷಗಳಿಂದ ದೈಹಿಕ ಶಿಕ್ಷಕಣದಿಂದ ವಂಚಿತರಾಗಿ ಕ್ರೀಡಾಕೂಟಗಳಿಂದ ದೂರ ಉಳಿದಿದ್ದಾರೆ. 1967ರಲ್ಲಿ ಪಾಠ ಆರಂಭಿಸಿದ ಈ ಶಾಲೆಯ ಮಕ್ಕಳು, ಪ್ರಸಕ್ತ 2022 ನೇ ಸಾಲಿನ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ತಾಲೂಕು ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸ್ವಾತಂತ್ರ್ಯದ ಭಾವ ಮೆರೆದಿರುವ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಚಿತ್ತಾಪುರ ತಾಲೂಕಿನ ಕೊಂಚೂರು ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇಂದಿಗೂ ದೈಹಿಕ ಶಿಕ್ಷಕರ ನೇಮಕವಿಲ್ಲ. ಆಟದ ಮೈದಾನ ಕೊರತೆಯಿದ್ದರೂ ಯಾರೂ ಗಮನ ಹರಿಸಿಲ್ಲ. 1967ರಲ್ಲಿ ಕೊಂಚೂರಿಗೆ ಶಾಲೆ ಮಂಜೂರಾಗಿದ್ದು, ಸದ್ಯ ಒಂದರಿಂದ ಎಂಟನೇ ತರಗತಿ ವರೆಗೆ ಶಾಲೆ ನಡೆಯುತ್ತಿದೆ. 176 ಮಕ್ಕಳ ದಾಖಲಾತಿ ಹೊಂದಿದ್ದು, ದೈಹಿಕ ಶಿಕ್ಷಕ ಹೊರೆತುಪಡಿಸಿ 7 ಜನ ಶಿಕ್ಷಕರಿದ್ದಾರೆ. ಶಾಲಾ ಕಟ್ಟಡವೂ ಸುಸಜ್ಜಿತವಾಗಿದೆ. ಶಾಲೆ ತೆರೆದು 55 ವರ್ಷ ಕಳೆದರೂ ಶಿಕ್ಷಣ ಇಲಾಖೆ ಮಾತ್ರ ದೈಹಿಕ ಶಿಕ್ಷಕರ ನೇಮಕ ಮಾಡಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಇತ್ತೀಚೆಗೆ ಮುಖ್ಯಶಿಕ್ಷಕರಾಗಿ ಬಡ್ತಿ ಪಡೆದು ಕೊಂಚೂರು ಶಾಲೆಗೆ ಬಂದಿರುವ ಶಿಕ್ಷಕ ಭೋಜಪ್ಪ ಎಸ್.ಜೇವುರಶೆಟ್ಟಿ ಅವರು ಇದೇ ಮೊದಲ ಬಾರಿಗೆ ಮಕ್ಕಳ ಹೆಸರುಗಳನ್ನು ನಾಲವಾರ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ನೀಡುವ ಮೂಲಕ ಇತಿಹಾಸ ಬರೆದಿದ್ದಾರೆ. ಬಾಲಕರ ಖೋಖೋ ಮತ್ತು ಬಾಲಕಿಯರ ಖೋಖೋ ಪಂದ್ಯಗಳಲ್ಲಿ ಪಾಲ್ಗೊಂಡು ಮಕ್ಕಳಿಗೆ ಪ್ರೋತ್ಸಾಹ ನೀಡಿದ್ದಾರೆ. ಸೋಲು ಗೆಲುವಿಗೆ ತಲೆಕೆಡಿಸಿಕೊಳ್ಳದೆ ಆಟದಲ್ಲಿ ಭಾಗವಹಿಸಿದ್ದ ಹರ್ಷ ಮಕ್ಕಳಲ್ಲಿ ಕಂಡು ಬಂದಿತು. ಅದಾಗ್ಯೂ ಬಾಲಕರ ಖೋಖೋ ಸ್ಪರ್ಧೇಯಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕ್ರೀಡಾಕೂಟದ ಮುಖವನ್ನೇ ನೋಡದ ಈ ಶಾಲೆಯ ಮಕ್ಕಳು ಶಿಕ್ಷಕ ಭೋಜಪ್ಪ ಅವರ ಇಚ್ಚಾಶಕ್ತಿಯಿಂದ ಕ್ರೀಡಾ ಮೈದಾನದಲ್ಲಿ ಮಿಂಚಿದ್ದಾರೆ. ಪ್ರಶಸ್ತಿ ಪದಕ ಪಡೆದು ಗೆಲುವಿನ ನಗೆ ಬೀರಿದ್ದಾರೆ. ಶಿಕ್ಷಣ ಇಲಾಖೆ ಇನ್ನಾದರೂ ಕಣ್ತೆರೆದು ನೋಡುವ ಮೂಲಕ ಕೊಂಚೂರು ಶಾಲೆಗೆ ದೈಹಿಕ ಶಿಕ್ಷಕರನ್ನು ನೇಮಿಸುವ ಮೂಲಕ ಮಕ್ಕಳಿಗೆ ನ್ಯಾಯ ಒದಗಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

“ನಮ್ಮೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಒಮ್ಮೆಯೂ ಶಿಕ್ಷಣ ಇಲಾಖೆಯಿಂದ ನಡೆಸಲಾಗುವ ಕ್ರೀಡಾಕೂಟದಲ್ಲಿ ಭಾಗವಹಿಸಿಲ್ಲ ಎಂಬ ಸಮಾಚಾರ ಕೇಳಿ ಬೇಸರವಾಯಿತು. 55 ವರ್ಷದ ನಂತರ ಇದೇ ಮೊದಲ ಸಲ ಕ್ರೀಡೆಯಲ್ಲಿ ಭಾಗವಹಿಸಿ ಮಕ್ಕಳು ಪ್ರತಿಭೆ ಮೆರೆದಿದ್ದಾರೆ. ಇದಕ್ಕೆಲ್ಲ ಮುಖ್ಯಶಿಕ್ಷಕ ಭೋಜಪ್ಪ ಅವರೇ ಪ್ರಮುಖ ಕಾರಣವಾಗಿದೆ. ಈ ವಿಷಯವನ್ನು ಶಾಸಕ ಪ್ರಿಯಾಂಕ್ ಖರ್ಗೆ ಅವರ ಗಮನಕ್ಕೆ ತಂದಿದ್ದೇವೆ. ಪರಿಣಾಮ ಶಾಸಕರು ಕೊಂಚೂರಿಗೆ ಪ್ರೌಢ ಶಾಲೆ ಮಂಜೂರು ಮಾಡಿಸಿದ್ದಾರೆ. ಮುಂದಿನ ವರ್ಷ ತರಗತಿಗಳು ಶುರುವಾಗುತ್ತವೆ.”ರುದ್ರುಮುನಿ ಮಠಪತಿ. ಕೊಂಚೂರು ಗ್ರಾಮದ ಯುವ ಮುಖಂಡ.

-ವರದಿ: ಮಡಿವಾಳಪ್ಪ ಹೇರೂರ

Advertisement
Advertisement

Udayavani is now on Telegram. Click here to join our channel and stay updated with the latest news.

Next