Advertisement

ಕೋಟಿ ಕೋಟಿ ಖರ್ಚಾದರೂ ತುಂಬದ ನೀರು!

03:27 PM Aug 19, 2022 | Team Udayavani |

ಬಾಗಲಕೋಟೆ: ಜಿಲ್ಲೆಯಲ್ಲೇ ಅತ್ಯಂತ ದೊಡ್ಡ ಹಾಗೂ ನಿರ್ಮಾಣದಲ್ಲಿ ವಿಶಿಷ್ಟತೆಯಿಂದ ಗುರುತಿಸಿಕೊಂಡಿರುವ ತಾಲೂಕಿನ ಮುಚಖಂಡಿ ಕೆರೆ ತುಂಬಿಸಲು ಕೋಟಿ ಕೋಟಿ ಖರ್ಚಾದರೂ ಯೋಜನೆಯ ಮೂಲ ಉದ್ದೇಶವೇ ಈಡೇರಲಿಲ್ಲ.

Advertisement

ಹೀಗಾಗಿ ಇಂತಹ ಬೃಹತ್‌ ಕೆರೆಗೆ ಶತಾಯ ಗತಾಯ ನೀರು ತುಂಬಿಸಲೇಬೇಕೆಂಬ ಕಾರಣಕ್ಕೆ ಸರ್ಕಾರ ಮತ್ತೂಂದು ಯೋಜನೆ ರೂಪಿಸಿ, ಅನುಷ್ಠಾನಗೊಳಿಸಲು ಮುಂದಾಗಿದೆ. ಹೌದು, ಸುಮಾರು 721 ಎಕರೆ ವಿಸ್ತಾರ ಹೊಂದಿರುವ ಬ್ರಿಟಿಷರ ಆಡಳಿತದಲ್ಲಿ (1882)ರಲ್ಲಿ ನಿರ್ಮಾಣಗೊಂಡಿರುವ ಮುಚಖಂಡಿ ಕೆರೆ ಹಲವು ವಿಶೇಷತೆ ಹೊಂದಿದೆ.

ಕೆರೆಗೆ ಹೊಂದಿಕೊಂಡು ಐತಿಹಾಸಿಕ ಮುಚಖಂಡಿ ವೀರಭದ್ರೇಶ್ವರ ದೇವಸ್ಥಾನವಿದ್ದು, ಇಲ್ಲಿಗೆ ನಿತ್ಯವೂ ಸಾವಿರಾರು ಭಕ್ತರು ಬರುತ್ತಾರೆ. ಇನ್ನು ಮುಚಖಂಡಿ ಗ್ರಾಮ ಐತಿಹಾಸಿಕ ಹಿನ್ನೆಲೆಯಲ್ಲಿ ಹೊಂದಿದ್ದು, ನವನಗರಕ್ಕೆ ಹೊಂದಿಕೊಂಡಿದೆ.

ಇದೊಂದು ಗ್ರಾಮವಾದರೂ, ನಗರದ ವಾತಾವರಣ ಇಲ್ಲಿದೆ. ಇಡೀ ನಗರದ ಜನ, ವಾರದ ಪಿಕನಿಕ್‌ ಸ್ಪಾಟ್‌ ಆಗಿ ಈ ಸ್ಥಳ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ಸೂಕ್ತ-ಕನಿಷ್ಠ ಮೂಲಭೂತ ಸೌಲಭ್ಯಗಳೂ ಇಲ್ಲದ ಕಾರಣ, ಈಚೆಗೆ ಇಲ್ಲಿಗೆ ಪ್ರವಾಸಿಗರು ಬರುವ ಸಂಖ್ಯೆ ವಿರಳವಾಗಿದೆ.

ಗತ ವೈಭವಕ್ಕೆ ಮರು ಜೀವ !: ಮುಚಖಂಡಿ ಕೆರೆಯ ಗತ ವೈಭವ ಮರುಕಳಿಸಲು ಹಲವು ರೀತಿಯ ಪ್ರಯತ್ನ ನಡೆದಿವೆ. ಕಳೆದ 2016ರಲ್ಲಿ ಬರೋಬ್ಬರಿ 12 ಕೋಟಿ ಖರ್ಚು ಮಾಡಿ, ಹಳೆಯ ಬಾಗಲಕೋಟೆ ನಗರದ ಘಟಪ್ರಭಾ ನದಿ ಪಾತ್ರದ (ಕಾರಿಹಳ್ಳ ಬಳಿ)ಲ್ಲಿ ಜಾಕವೆಲ್‌ ನಿರ್ಮಿಸಿ, ಅಲ್ಲಿಂದ ಮುಚಖಂಡಿ ವರೆಗೆ ಒಟ್ಟು 6 ಕಿ.ಮೀ ವರೆಗೆ ಪೈಪ್‌ಲೈನ್‌ ಅಳವಡಿಸಲಾಗಿದೆ.

Advertisement

ಈ ಪೈಪ್‌ಲೈನ್‌ ಅಳವಡಿಸಲೂ ಹಲವು ರೀತಿಯ ಎಡುರು-ತೊಡರು ಬಂದಾಗ ಅವುಗಳನ್ನು ನಿವಾರಿಸಿಕೊಂಡು, ಪೈಪ್‌ಲೈನ್‌ ಕಾಮಗಾರಿ ಪೂರ್ಣಗೊಳಿಸಿ ನೀರು ತುಂಬಿಸಲು ಆರಂಭಿಸಲಾಗಿದೆ. 250 ಎಂಎಂ ವ್ಯಾಸದ ಪೈಪ್‌ಲೈನ್‌ಗಳಿದ್ದು, ಕಳೆದ 2017ರಿಂದ ಕೆರೆ ನೀರು ತುಂಬಿಸಲು ಆರಂಭಿಸಲಾಗಿದೆ. ಪ್ರತಿದಿನವೂ 250 ಎಚ್‌ಪಿ ವಿದ್ಯುತ್‌ ಪಂಪಸೆಟ್‌ ಮೂಲಕ ನೀರು ಎತ್ತಿ, ಕೆರೆಗೆ ತುಂಬಿಸಲಾಗುತ್ತಿದೆ. ಆದರೆ, 721 ಎಕರೆ ವಿಸ್ತಾರದ ಈ ಕೆರೆ, ಈ ವರೆಗೂ ತುಂಬಿಲ್ಲ. ಕಳೆದ 2019ರಲ್ಲಿ ಅಷ್ಟೊಂದು ದೊಡ್ಡ ಪ್ರವಾಹ ಬಂದರೂ, ಕೆರೆಯ ಜಲಾನಯನ ಪ್ರದೇಶ (ನೈಸರ್ಗಿಕವಾಗಿ ಮಳೆ ನೀರು ಹರಿದು ಬರುವ ಪ್ರದೇಶ) ಒತ್ತುವರಿಯಾಗಿದೆ.

ಈ ಪ್ರದೇಶದಲ್ಲಿ ಒಡ್ಡು ನಿರ್ಮಾಣ, ರೈಲ್ವೆ ಟ್ರ್ಯಾಕ್‌ ನಿರ್ಮಾಣದಿಂದ ನೀರು ಹರಿದು ಬರುತ್ತಿಲ್ಲ. ಹೀಗಾಗಿ ಕೃತಕವಾಗಿ ನೀರು ತುಂಬಿಸುವುದು ಅನಿವಾರ್ಯ. ಹೀಗಾಗಿಯೇ 12 ಕೋಟಿ ವೆಚ್ಚದ ಯೋಜನೆ ರೂಪಿಸಿ, ಅನುಷ್ಠಾನಗೊಳಿಸಿದರೂ ಅದು ಪೂರ್ಣ ಪ್ರಮಾಣದಲ್ಲಿ ಸಾಕಾರಗೊಂಡಿಲ್ಲ.

ಮತ್ತೂಂದು ಯೋಜನೆಗೆ ಅಸ್ತು: ಮುಚಖಂಡಿ ಕೆರೆಗೆ ಘಟಪ್ರಭಾ ನದಿುಂದ ನೀರು ತುಂಬಿಸುವ 2ನೇ ಹಂತದ ಯೋಜನೆಗೆ ರಾಜ್ಯ ಸರ್ಕಾರ ಜುಲೈ 22ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಒಟ್ಟು 49 ಕೋಟಿ ಮೊತ್ತದ ಈ ಯೋಜನೆ ಸಾಕಾರಗೊಂಡು, ಇನ್ನು ಮುಂದಾದರೂ ಕೆರೆಯಂಗಳ ತುಂಬಿಕೊಳ್ಳಲಿ ಎಂಬುದು ಜನರ ಆಶಯ. ಈಗಾಗಲೇ ಮೊದಲನೇ ಹಂತದಲ್ಲಿ ಮುಚಖಂಡಿ ಸಣ್ಣ ನೀರಾವರಿ ಕೆರೆಗೆ ನೀರು ತುಂಬಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಕೆರೆಯ ಪ್ರಸ್ತುತ ನೀರು ಸಂಗ್ರಹಣ ಸಾಮರ್ಥ್ಯವು 452.8 ಎಂಸಿಎಫ್‌ಟಿ ಆಗಿದ್ದು, ಮೊದಲನೇ ಹಂತದ ಕಾಮಗಾರಿಯಿಂದ ಕೇವಲ 58 ಎಂಸಿಎಫ್ಟಿ ನೀರನ್ನು ತುಂಬಿಸಲು ಮಾತ್ರ ಸಾಧ್ಯವಾಗಿದೆ. ಇದನ್ನು ಮೂರು ಪಟ್ಟು ಹೆಚ್ಚಿಸಲು ಉದ್ದೇಶಿಸಲಾಗಿದೆ ಎನ್ನಲಾಗಿದೆ.

480 ಹೆಕ್ಟೇರ್‌ ಭೂಮಿಗೆ ನೀರುಣಿಸುವ, ಕೆರೆಗೆ 2ನೇ ಹಂತದಲ್ಲಿ ನೀರು ತುಂಬಿಸಲು ಕಾಲುವೆ ನಿರ್ಮಿಸಿ, ಕೆರೆಗೆ ನೀರು ತುಂಬಿಸುವುದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಅಭಿವೃದ್ಧಿ ವೃದ್ಧಿಯಾಗಲಿದೆ.ನವನಗರ ಸೀಮಿಕೇರಿ, ಮುಚಖಂಡಿ ತಾಂಡಾ ಅಲ್ಲದೆ ನೀರಲಕೆರಿ, ಸೂಳಿಕೇರಿ, ಕಗಲಗೊಂಬ ಮತ್ತು ಕಟಗೇರಿ ಗ್ರಾಮಗಳ ಭೂಮಿಗೆ ಪರೋಕ್ಷವಾಗಿ ನೀರಾವರಿ ಒದಗಿಸಲು ಮತ್ತು ಆ ಭಾಗದಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ನವನಗರಕ್ಕೆ ಹೊಂದಿಕೊಂಡಿರುವ ಐತಿಹಾಸಿಕ ಕೆರೆ ಪೂರ್ಣ ಪ್ರಮಾಣದಲ್ಲಿ ತುಂಬಿಸಬೇಕು ಎಂಬ ಆಶಯವಿತ್ತು. ಈಗಾಗಲೇ ಇರುವ ಯೋಜನೆಯ ಪೈಪ್‌ಲೈನ್‌ ಚಿಕ್ಕದಾಗಿದ್ದು, ದೊಡ್ಡ ಕೆರೆ ತುಂಬಿಸಲು ಸಾಧ್ಯವಿಲ್ಲ. ಹೀಗಾಗಿ 49 ಕೋಟಿ ಮೊತ್ತದಲ್ಲಿ 2ನೇ ಹಂತದ ಯೋಜನೆ ಕೈಗೊಂಡು, ಕೆರೆ ತುಂಬಿಸಲು ಹೊಸ ಯೋಜನೆ ರೂಪಿಸಲಾಗಿತ್ತು. ಇದಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಅಲ್ಲದೇ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆಯ ಮುಂಭಾಗದ ಉದ್ಯಾನವನ ಸ್ವತ್ಛತೆ, ಪಿಚ್ಚಿಂಗ್‌ ನಿರ್ಮಾಣ ಸಹಿತ ಹಲವು ಕಾಮಗಾರಿ ಕೈಗೊಂಡಿದ್ದು, ಇಡೀ ಮುಚಖಂಡಿ ಕೆರೆಯಂಗಳ ಚಿಕ್ಕ ಪ್ರವಾಸಿ ತಾಣವಾಗಿ ರೂಪಿಸುವ ಕನಸಿದೆ. -ಡಾ|ವೀರಣ್ಣ ಚರಂತಿಮಠ, ಶಾಸಕ

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next