Advertisement

100 ದಿನವಾದರೂ BJP ಗಿಲ್ಲ ವಿಪಕ್ಷ ನಾಯಕ

11:51 PM Aug 27, 2023 | Team Udayavani |

ಬೆಂಗಳೂರು: ಅತ್ತ ಸಿಎಂ ಸಿದ್ದರಾಮಯ್ಯ ಸರಕಾರ ಶತಕದ ಸಂಭ್ರಮದಲ್ಲಿದ್ದರೆ, ಇತ್ತ ವಿಪಕ್ಷದಲ್ಲಿರುವ ಬಿಜೆಪಿಗೆ 100 ದಿನವಾದರೂ ನಾಯಕತ್ವದ ಕೊರತೆ ನೀಗಿಲ್ಲ. ಚುನಾವಣೆಯಲ್ಲಿ ಸೋಲೊಪ್ಪಿಕೊಂಡು ವಿಪಕ್ಷದ ಸ್ಥಾನದಲ್ಲಿ ಕೂರುವುದು ನಿಶ್ಚಿತವಾದರೂ ನಾಯಕತ್ವದ ಆಯ್ಕೆಯಲ್ಲಿ ಮಾತ್ರ ಹಿಂದೆ ಬಿದ್ದಿದೆ. ವಿಪಕ್ಷ ನಾಯಕರಿಲ್ಲದೆ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದರೆ, ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ ಸಹ ಮಂಡಿಸಿದರು. ಆರಂಭದಲ್ಲಿ ಅಧಿಕೃತ ವಿಪಕ್ಷದ ನಾಯಕರಿಲ್ಲದ ನೆಪವನ್ನೇ ದಾಳವಾಗಿಸಿಕೊಂಡ ಜೆಡಿಎಸ್‌ನ ಕುಮಾರಸ್ವಾಮಿ ಸರಕಾರದ ವಿರುದ್ಧ ಪ್ರಬಲ ಹೋರಾಟಕ್ಕಿಳಿದರು. ಇದಕ್ಕೆ ಬಿಜೆಪಿ ಕೂಡ ಅನಿವಾರ್ಯವಾಗಿ ಬೆಂಬಲಿಸಬೇಕಾಯಿತು.

Advertisement

ಸರಕಾರದ ವಿರುದ್ಧ ಸ್ಪಷ್ಟ ನಿಲುವುಗಳನ್ನು ತೆಗೆದುಕೊಳ್ಳಲಾಗದೆ ಪರಿತಪಿಸಿದ ವಿಪಕ್ಷ ಬಿಜೆಪಿ, ಜೆಡಿಎಸ್‌ನೊಂದಿಗೆ ವಿಷಯಾಧಾರಿತವಾಗಿ ಜಂಟಿ ಹೋರಾಟಕ್ಕಿಳಿಯಿತು. ಪೇ ಸಿಎಂ ಹೋರಾಟದ ಮಾದರಿಯಲ್ಲೇ ಚಲುವರಾಯಸ್ವಾಮಿ ವಿರುದ್ಧ ಪೇ ಸಿಎಸ್‌ ಹೋರಾಟ ನಡೆಯಿತು.

ಸಚಿವ ಚಲುವರಾಯಸ್ವಾಮಿ ವಿರುದ್ಧದ ಕುಮಾರಸ್ವಾಮಿ ಹೋರಾಟಕ್ಕೆ ಬಿಜೆಪಿ ಬೆಂಬಲಿಸಿದರೆ, ಡಿಸಿಎಂ ಶಿವಕುಮಾರ್‌ ವಿರುದ್ಧ ಬಿಜೆಪಿ ನಡೆಸಿದ ಪ್ರತಿಭಟನೆಗಳಿಗೆ ಜೆಡಿಎಸ್‌ ಸಾಥ್‌ ನೀಡಿತು. ವಿಧಾನಸಭೆಯಿಂದ ಬಿಜೆಪಿ 10 ಶಾಸಕರು ಅಮಾನತುಗೊಂಡಾಗ ಜಂಟಿ ಹೋರಾಟ ನಡೆಸದಿದ್ದರೂ, ಬಿಜೆಪಿಯ ಬೆನ್ನಿಗೆ ನಿಂತು ಸರಕಾರಕ್ಕೆ ಚಾಟಿ ಬೀಸಿತು. ಕುಮಾರಸ್ವಾಮಿ ವಿದೇಶ ಪ್ರವಾಸದಿಂದ ಮರಳಿದ ಅನಂತರ ಒಗ್ಗಟ್ಟು ಒಡೆದು, ಒಂಟಿ ಹೋರಾಟಗಳು ಅನಿವಾರ್ಯವಾಯಿತು. ಅಷ್ಟರಲ್ಲಿ ವಿಪಕ್ಷ ನಾಯಕರ ಆಯ್ಕೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯ ಕೂಗು ಜೋರಾಗಿ, ವರಿಷ್ಠರ ಭೇಟಿಗಾಗಿ ರಾಜ್ಯ ಬಿಜೆಪಿ ನಾಯಕರ ದಿಲ್ಲಿ ಪರೇಡ್‌ ಕೂಡ ಚುರುಕಾಗಿತ್ತು.

ಬಿಎಸ್‌ವೈ ನಾಯಕತ್ವಕ್ಕೆ ಬಹುಪರಾಕ್‌
ಅ. 15ರ ಅನಂತರ ವಿಪಕ್ಷ ನಾಯಕರ ಆಯ್ಕೆಯಾಗಲಿದೆ ಎಂದು ಆಶಾವಾದ ವ್ಯಕ್ತಪಡಿಸಿದ್ದರಾದರೂ ಇದುವರೆಗೆ ನಾಯಕರ ಆಯ್ಕೆಯಾಗಿಲ್ಲ. ಸದ್ಯಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಅವರನ್ನೇ ನಾಯಕತ್ವ ವಹಿಸಿಕೊಳ್ಳುವಂತೆ ಹಲವು ಮುಖಂಡರು ಮುಗಿ ಬಿದ್ದಿದ್ದು, ಅಂತೂ ರಾಜ್ಯ ಬಿಜೆಪಿಯು ವಿಧಾನಸಭೆ, ವಿಧಾನ ಪರಿಷತ್ತಿನಲ್ಲಿ ನಾಯಕತ್ವವಿಲ್ಲದೆ 100 ದಿನಗಳನ್ನು ತಳ್ಳಿದೆ.

Advertisement

Udayavani is now on Telegram. Click here to join our channel and stay updated with the latest news.

Next