Advertisement
2022ರಲ್ಲಿ ಬಿಬಿಎಂಪಿ ಬೀದಿ ಬದಿ ವ್ಯಾಪಾರಿಗಳ ಸರ್ವೇ ಕಾರ್ಯಕ್ಕೆ ಮುಂದಾಗಿತ್ತು, ಟೆಂಡರ್ ಕರೆದು ಸರ್ವೇ ಕಾರ್ಯ ಕೆಲಸ ನಿಗದಿ ಪಡಿಸಿತ್ತು. ಆದರೆ ಈ ಪ್ರಕ್ರಿಯೆಗೆ ಬೀದಿ ಬದಿ ವ್ಯಾಪಾರಿಗಳ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಪಾಲಿಕೆ ಸಿಬ್ಬಂದಿಯಿಂದ ಸಮೀಕ್ಷೆ ನಡೆಸುವ ಬದಲಿಗೆ ಖಾಸಗಿ ಏಜೆನ್ಸಿ ಮೂಲಕ ಸಮೀಕ್ಷೆಗೆ ಮುಂದಾಗಿದ್ದದು ನಿಯಮ ಉಲ್ಲಂಘನೆ ಆಗಲಿದೆ ಎಂದು ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳು ಅಪಸ್ವರ ಎತ್ತಿದ್ದವು.
Related Articles
Advertisement
ಸರ್ವೇಯಿಂದ ಹಲವರು ಹೊರಗೆ: ಈ ಹಿಂದೆ ಪಾಲಿಕೆ ನಡೆಸಿದ ಸರ್ವೇಯಲ್ಲಿ ತಳ್ಳುವಗಾಡಿ, ತರಕಾರಿ, ಹೂವು-ಹಣ್ಣು ವ್ಯಾಪಾರಿಗಳನ್ನು ಪರಿಗಣಿಸಿಯೇ ಇಲ್ಲ. ಬೆಳಗ್ಗೆ 5 ರಿಂದ ಸಂಜೆ 5ರ ತನಕ ಮಾತ್ರ ಪಾಲಿಕೆ ಅಧಿಕಾರಿಗಳು ಸರ್ವೇ ನಡೆಸಿದ್ದರು. ಬೆಳಗ್ಗೆ 3 ಗಂಟೆಗೆ ಕೆ.ಆರ್.ಮಾರುಕಟ್ಟೆ ಮತ್ತು ಕಲಾಸಿಪಾಳ್ಯ ಮಾರುಕಟ್ಟೆಗಳು ತೆರೆದಿರುತ್ತವೆ. ಸಂಜೆ ಬಳಿಕ ಚಾಟ್ಸ್ ಅಂಗಡಿಗಳು ಆರಂಭವಾಗುತ್ತದೆ. ಆದರೆ ಇವರನ್ನು ಸರ್ವೇಯಲ್ಲಿ ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎಂದು ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟದ ಕಾನೂನು ಸಲಹೆಗಾರ ವಿನಯ್ ಶ್ರೀನಿವಾಸ್ ದೂರುತ್ತಾರೆ.
ಬೆಳಗಿನ ಜಾವ ಮತ್ತು ಸಂಜೆ ವೇಳೆ ವ್ಯಾಪಾರ ಮಾಡುವವರು ರಾಜಧಾನಿಯಲ್ಲಿ ಇದ್ದಾರೆ. ಇವರಲ್ಲಿ ಹಲವು ಮಂದಿ ಸರ್ವೇಯಿಂದ ದೂರ ಉಳಿದಿದ್ದಾರೆ. ಆ ಹಿನ್ನೆಲೆಯಲ್ಲಿ ವ್ಯಾಪಾರ ನಿಯಂತ್ರಣ ಕಾಯ್ದೆ 2014ರ ನಿಯಮದ ಅಡಿಯಲ್ಲಿ ಹೊಸದಾಗಿ ಸರ್ವೇ ನಡೆಸಬೇಕು ಎಂದು ಆಗ್ರಹಿಸುತ್ತಾರೆ.
26 ಸಾವಿರ ಮಂದಿಗೆ ಗುರುತಿನ ಚೀಟಿ: 2017-18ರಲ್ಲಿ ರಾಜ್ಯವ್ಯಾಪಿ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ನಡೆದಿತ್ತು. ರಾಜ್ಯವ್ಯಾಪಿ ಸುಮಾರು 2.5 ಲಕ್ಷ ಜನರು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ ಸರ್ಕಾರ 1.21 ಲಕ್ಷ ಮಂದಿಗೆ ಗುರುತಿನ ಚೀಟಿ ನೀಡಿತ್ತು. ಹಾಗೆಯೇ ಬೆಂಗಳೂರಿನಲ್ಲಿ 63 ಸಾವಿರ ಮಂದಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದು, ಕೇವಲ 25 ಸಾವಿರ ಮಂದಿಗೆ ಗುರುತಿನ ಚೀಟಿ ನೀಡಿತ್ತು ಎಂದು ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಉಪಾಧಕ್ಷ ದೊಡ್ಡಣ್ಣ ದೂರುತ್ತಾರೆ. ಕೋವಿಡ್ ನಂತರ ಹಲವು ಮಂದಿ ವ್ಯಾಪಾರಿಗಳು ಊರು ಸೇರಿದ್ದಾರೆ. ಇನ್ನೂ ಕೆಲವು ಮಂದಿ ಹೊಸದಾಗಿ ವ್ಯಾಪಾರ ಆರಂಭಿಸಿದ್ದಾರೆ. ಪಿಎಂ ಸ್ವ ನಿಧಿಯೋಜನೆಯಡಿ ಹಲವರುಸವಲತ್ತು ಪಡೆದಿದ್ದಾರೆ. ಅವರ ಸಮೀಕ್ಷೆ ಕೂಡ ನಡೆಯಬೇಕು ಎಂದು ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಮೊಹಮ್ಮದ್ ಸ್ಮೈಲ್ ಒತ್ತಾಯಿಸುತ್ತಾರೆ.
ಸವಲತ್ತುಗಳು ಬೀದಿ ಬದಿ ವ್ಯಾಪಾರಿಗಳ ಕೈತಪ್ಪಿ ಹೋಗಿವೆ. ಹೀಗಾಗಿ ಸರ್ವೇಗೆ ಮುಂದಾಗಬೇಕು. ಯಾವುದೇ ಕಾರಣಕ್ಕೂ ಸರ್ವೇಯನ್ನು ಖಾಸಗಿ ಸಂಸ್ಥೆಗಳಿಗೆ ನೀಡಬಾರದು. ●ರಂಗಸ್ವಾಮಿ, ಅಧ್ಯಕ್ಷರು ಕರ್ನಾಟಕ ಬೀದಿ ಬದಿ ಸಂಘಟನೆಗಳ ಒಕ್ಕೂಟ
-ದೇವೇಶ ಸೂರಗುಪ್ಪ