Advertisement

NEETಲೋಪ: ಸುಪ್ರೀಂ ತರಾಟೆ; ತಪ್ಪಾಗಿದ್ದರೆ ಒಪ್ಪಿಕೊಳ್ಳಿ : ಎನ್‌ಟಿಎಗೆ ತಾಕೀತು

01:13 AM Jun 19, 2024 | Team Udayavani |

ಹೊಸದಿಲ್ಲಿ: ನೀಟ್‌-ಯುಜಿ ಅಕ್ರಮದ ವಿಚಾರಣೆ ವೇಳೆ ಮಂಗಳವಾರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯನ್ನು ಸರ್ವೋಚ್ಚ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.

Advertisement

“ನೀಟ್‌-ಯುಜಿ 2024 ಪರೀಕ್ಷೆ ಸಂದರ್ಭ ಸಾಸಿವೆ ಕಾಳಿನಷ್ಟು ಲೋಪ ಆಗಿದ್ದರೂ ಆ ಕುರಿತು ಸಮಗ್ರ ತನಿಖೆ ನಡೆಸಬೇಕು. ಪರೀಕ್ಷೆಗಾಗಿ ವಿದ್ಯಾರ್ಥಿಗಳು ಭಾರೀ ಪರಿಶ್ರಮ ನಡೆಸಿರುತ್ತಾರೆ ಎಂಬುದನ್ನು ನಾವು ಮರೆಯುವ ಹಾಗಿಲ್ಲ. ಒಂದು ವೇಳೆ ನಿಮ್ಮಿಂದ ತಪ್ಪಾಗಿದ್ದರೆ ಒಪ್ಪಿಕೊಳ್ಳಿ’ ಎಂದು ಎನ್‌ಟಿಎಗೆ ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ.

ನೀಟ್‌ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಕೃಪಾಂಕಕ್ಕೆ ತಕರಾರು, ಮೇ ತಿಂಗಳಿನಲ್ಲಿ ನಡೆದ ಪರೀಕ್ಷೆಯನ್ನು ರದ್ದು ಪಡಿಸ ಬೇಕು ಎಂದು ಕೋರಿ ಸಲ್ಲಿಕೆ ಯಾದ ಅರ್ಜಿಗಳ ವಿಚಾ ರಣೆ ವೇಳೆ ನ್ಯಾ| ವಿಕ್ರಮ್‌ ನಾಥ್‌ ಹಾಗೂ ಎಸ್‌.ವಿ.ಎನ್‌. ಭಟ್ಟಿ ಅವರಿದ್ದ ಸುಪ್ರೀಂ ಕೋರ್ಟ್‌ನ ರಜಾಕಾಲದ ಪೀಠವು ಹೀಗೆ ಅಭಿಪ್ರಾಯಪಟ್ಟಿದೆ.

ಲಕ್ಷಾಂತರ ಮಂದಿ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಶ್ರಮಿ ಸಿರುತ್ತಾರೆ. ಅದನ್ನು ಎನ್‌ಟಿಎ ನಿರ್ಲಕ್ಷಿಸಬಾರದು. ಸಕಾಲಿಕ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ ನ್ಯಾಯಪೀಠವು ಮುಂದಿನ ವಿಚಾರಣೆಯನ್ನು ಜು. 8ಕ್ಕೆ ನಿಗದಿಪಡಿಸಿತು ಮತ್ತು 2 ವಾರಗಳ ಒಳಗೆ ಕೇಂದ್ರ ಸರಕಾರ ಮತ್ತು ಎನ್‌ಟಿಎ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ನಿರ್ದೇಶಿಸಿತು.

ಏನಿದು ವಿವಾದ?
ಮೇ 5ರಂದು ಎನ್‌ಟಿಎ ನೀಟ್‌-ಯುಜಿ ಪರೀಕ್ಷೆ ನಡೆಸಿತ್ತು. ದೇಶಾದ್ಯಂತ 4,750 ಪರೀಕ್ಷಾ ಕೇಂದ್ರಗಳಲ್ಲಿ 24 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಜೂ. 4ರಂದು ಫ‌ಲಿತಾಂಶ ಪ್ರಕಟವಾಗಿತ್ತು. ಒಟ್ಟು 67 ಮಂದಿಗೆ ಪೂರ್ಣ 720 ಅಂಕಗಳು ಬಂದಿದ್ದವು. ಇವರಲ್ಲಿ ಹರಿಯಾಣದ ಒಂದೇ ಕೇಂದ್ರದ 6 ವಿದ್ಯಾರ್ಥಿಗಳಿದ್ದರು. ಇದು ಬಹಿರಂಗವಾಗುತ್ತಿದ್ದಂತೆ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಅನುಮಾನ ಹುಟ್ಟಿಕೊಂಡಿತ್ತು. ಬಳಿಕ ಬಿಹಾರ ಮತ್ತು ಇತರ ಕೆಲವೆಡೆ ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆಯಾದ ಆರೋಪಗಳು ಕೇಳಿ ಬಂದವು. ಕೃಪಾಂಕದ ಬಗ್ಗೆ ಅಪಸ್ವರ ಎತ್ತಿದ ಬೆನ್ನಲ್ಲೇ ಜೂ. 10ರಂದು ವಿದ್ಯಾರ್ಥಿಗಳು ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಿದ್ದರು.

Advertisement

30 ಲಕ್ಷ ರೂ. ಆಮಿಷ!
30 ಲಕ್ಷ ರೂ. ನೀಡಿದರೆ ನೀಟ್‌ ಪ್ರಶ್ನೆಪತ್ರಿಕೆ ಒದಗಿ ಸುವ ಆಮಿಷವನ್ನು ಕೆಲವು ವಿದ್ಯಾರ್ಥಿಗಳಿಗೆ ಒಡ್ಡಲಾಗಿತ್ತು ಎಂದು ಬಿಹಾರ ಪೊಲೀಸರು ತಿಳಿಸಿದ್ದಾರೆ. ಮೂವರು ವಿದ್ಯಾರ್ಥಿಗಳು ಪರೀಕ್ಷೆಗೆ ಮುನ್ನ ಪ್ರಶ್ನೆ ಪತ್ರಿಕೆ ಪಡೆದುಕೊಂಡಿದ್ದು, ಒಬ್ಬ ವಿದ್ಯಾರ್ಥಿ ಇದನ್ನು ಒಪ್ಪಿ ಕೊಂಡಿದ್ದಾನೆಂದು ಪೊಲೀಸರು ಹೇಳಿದ್ದಾರೆ.

ಎನ್‌ಟಿಎ ಆಮೂಲಾಗ್ರ ಸುಧಾರಣೆ?
ನೀಟ್‌ ಅಕ್ರಮ ಆರೋಪದಿಂದ ಮುಜುಗರಕ್ಕೆ ಒಳಗಾಗಿರುವ ಕೇಂದ್ರ ಸರಕಾರವು ಎನ್‌ಟಿಎಯಲ್ಲಿ ಆಮೂಲಾಗ್ರ ಸುಧಾರಣೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ಈ ಸಂಬಂಧ ಪರೀಕ್ಷಾ ನಿರ್ವಹಣೆಯನ್ನು ಉತ್ತಮಗೊಳಿಸಲು ಉನ್ನತ ಮಟ್ಟದ ಸಮಿತಿ ರಚಿಸುವ ಸಾಧ್ಯತೆಯಿದೆ.

ನೀಟ್‌ ಪರೀಕ್ಷೆಯಲ್ಲಿ 24 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದ್ದರೂ ಪ್ರಧಾನಿ ಮೋದಿ ಎಂದಿನಂತೆ ತಮ್ಮ ಮೌನ ಮುಂದುವರಿಸಿದ್ದಾರೆ. ಬಿಜೆಪಿ ಆಡಳಿತದಲ್ಲಿರುವ ಬಿಹಾರ, ಹರಿಯಾಣ, ಗುಜರಾತ್‌ಗಳು ಪ್ರಶ್ನೆಪತ್ರಿಕೆ ಸೋರಿಕೆಯ ಕೇಂದ್ರ ಸ್ಥಾನಗಳಾಗಿವೆ.
-ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next