Advertisement

NEET ಪ್ರಶ್ನೆಪತ್ರಿಕೆ ಸೋರಿಕೆ, ಅಕ್ರಮ ಆರೋಪ: ಎನ್‌ಟಿಎಗೆ ಸುಪ್ರೀಂ ತರಾಟೆ

10:02 PM Jun 11, 2024 | Team Udayavani |

ಹೊಸದಿಲ್ಲಿ: “ಪರೀಕ್ಷೆಯ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ. ನಮಗೆ ಇದಕ್ಕೆ ಸೂಕ್ತ ಉತ್ತರ ಬೇಕು.’ -ನೀಟ್‌-ಯುಜಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ವೇಳೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದ್ದು ಹೀಗೆ.

Advertisement

ಅವ್ಯವಹಾರ ಆರೋಪ ಹಿನ್ನೆಲೆಯಲ್ಲಿ ಹೊಸದಾಗಿ ನೀಟ್‌-ಯುಜಿ ಪರೀಕ್ಷೆಯನ್ನು ನಡೆಸಬೇಕೆಂದು ಕೋರಿ 10 ನೀಟ್‌ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾ| ವಿಕ್ರಮ್‌ ನಾಥ್‌ ಮತ್ತು ನ್ಯಾ| ಅಹ್ಸಾನುದ್ದೀನ್‌ ಅಮಾನುಲ್ಲಾ ಅವರನ್ನೊಳಗೊಂಡ ನ್ಯಾಯಪೀಠವು ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ಎನ್‌ಟಿಎ ಹಾಗೂ ಕೇಂದ್ರ ಸರಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ. ಇದೇ ವೇಳೆ ಎಂಬಿಬಿಎಸ್‌, ಬಿಡಿಎಸ್‌ ಮತ್ತು ಇತರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯುತ್ತಿರುವ ಕೌನ್ಸೆಲಿಂಗ್‌ ಪ್ರಕ್ರಿಯೆಗೆ ತಡೆಯಾಜ್ಞೆ ತರಲು ನ್ಯಾಯಪೀಠ ನಿರಾಕರಿಸಿದೆ. ಜತೆಗೆ ವಿಚಾರಣೆಯನ್ನು ಜು. 8ಕ್ಕೆ ಮುಂದೂಡಿದೆ.

ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮ ಆರೋಪಗಳ ಬಗ್ಗೆ ವಾದ ಆಲಿಸಿದ ನ್ಯಾಯಪೀಠವು ಎನ್‌ಟಿಎಯ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೆ, “ಇದೇನೂ ಸರಳ ವಿಚಾರವಲ್ಲ. ನೀವು ಪರೀಕ್ಷೆಯ ಪಾವಿತ್ರ್ಯವನ್ನೇ ಹಾಳು ಮಾಡಿದ್ದೀರಿ. ನಮಗೆ ಉತ್ತರ ಬೇಕು’ ಎಂದಿತು. ಜತೆಗೆ ಬಿಹಾರದಲ್ಲಿ ಪರೀಕ್ಷಾ ಅಕ್ರಮ ನಡೆದಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಬಿಹಾರ ಸರಕಾರಕ್ಕೂ ನೋಟಿಸ್‌ ಜಾರಿ ಮಾಡಿತು.

ಏನಿದು ವಿವಾದ?

– ನೀಟ್‌-ಯುಜಿಯಲ್ಲಿ 67 ಅಭ್ಯರ್ಥಿಗಳು 720ರ ಪೂರ್ಣಾಂಕಗಳೊಂದಿಗೆ ಅಗ್ರ ಸ್ಥಾನ ಪಡೆದಿದ್ದರು.

Advertisement

– ನೀಟ್‌ ಅಂಕ ನೀತಿಯ ಪ್ರಕಾರ ಇಷ್ಟು ಜನರಿಗೆ ಅಗ್ರಸ್ಥಾನ, ಮತ್ತಿಬ್ಬರಿಗೆ 719, 718 ಅಂಕ ಬರುವ ಸಾಧ್ಯತೆ ಇಲ್ಲ ಎನ್ನುವುದು ಬಹುತೇಕರ ವಾದ.

– ಪರೀಕ್ಷೆಯ ಬಹುತೇಕ ಟಾಪರ್‌ಗಳು ಒಂದೇ ಪರೀಕ್ಷಾ ಕೇಂದ್ರಕ್ಕೆ ಸೇರಿದವರು ಎಂಬ ಆರೋಪ.

– ಹೀಗಾಗಿ ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆಯಾಗಿರಬಹುದು ಎಂಬ ಅನುಮಾನ.

– ಆಯ್ದ 1,563 ವಿದ್ಯಾರ್ಥಿಗಳಿಗೆ ನಿರಂಕುಶವಾಗಿ ಕೃಪಾಂಕ ನೀಡಲಾಗಿದೆ ಎಂಬ ಆರೋಪ.

– ರಾಜಸ್ಥಾನದಲ್ಲಿ ಮೊದಲೇ ಅಂಕಗಳನ್ನು ಗುರುತಿಸಿದ್ದ ಪ್ರಶ್ನೆಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ಹಂಚಿ, ವಾಪಸ್‌ ಪಡೆಯಲಾಗಿತ್ತು ಎಂಬ ಆರೋಪ.

Advertisement

Udayavani is now on Telegram. Click here to join our channel and stay updated with the latest news.

Next