Advertisement
ಇದರೊಂದಿಗೆ ಆಟೋ ಮತ್ತು ಟ್ಯಾಕ್ಸಿ ಚಾಲಕರು ನಿಟ್ಟುಸಿರುಬಿಟ್ಟಿದ್ದಾರೆ. ಈ ಸಂಬಂಧ ಆದೇಶ ಹೊರಡಿಸಿರುವ ಸಾರಿಗೆ ಇಲಾಖೆ, ಉದ್ದೇಶಿತ ಬೈಕ್ ಟ್ಯಾಕ್ಸಿ ಯೋಜನೆ ರದ್ದುಗೊಳಿಸಿರುವುದಕ್ಕೆ ಹಲವು ಕಾರಣಗಳನ್ನು ನೀಡಿದೆ. ಯೋಜನೆ ಹೆಸರಿನಲ್ಲಿ ದುರುಪಯೋಗ ಆಗುತ್ತಿದ್ದು, ಕೆಲವು ಖಾಸಗಿ ಆ್ಯಪ್ ಆಧಾರಿತ ಸಂಸ್ಥೆಗಳು, ಮೋಟಾರು ವಾಹನ ಕಾಯ್ದೆ ಮತ್ತು ಅದರಡಿ ರಚಿತವಾದ ನಿಯಮಗಳನ್ನು ಉಲ್ಲಂಘಿಸುತ್ತಿವೆ. ವಿಶೇಷವಾಗಿ ಸಾರಿಗೆಯೇತರ ದ್ವಿಚಕ್ರ ವಾಹನಗಳನ್ನು ಸಾರಿಗೆ ವಾಹನಗಳನ್ನಾಗಿ ಉಪಯೋಗಿಸುತ್ತಿರುವುದು ಕಂಡುಬಂದಿದೆ. ಇದು ಸಾರಿಗೆ ನಿಯಮಗಳ ಸ್ಪಷ್ಟ ಉಲ್ಲಂಘನೆ ಆಗಿದೆ ಎಂದು ಉಲ್ಲೇಖೀಸಲಾಗಿದೆ.
Related Articles
Advertisement
ಬಿಜೆಪಿ ಆಡಳಿತದಲ್ಲಿ ಜಾರಿಗೊಂಡಿದ್ದ ಯೋಜನೆ: ಎಲೆಕ್ಟ್ರಿಕ್ ಬೈಕ್‌ಗಳನ್ನು ಉತ್ತೇಜಿಸಲು ಹಾಗೂ ಮೊದಲ ಮತ್ತು ಕೊನೆಯ ಗಮ್ಯದ ನಡುವೆ ಸಂಪರ್ಕ (ಫಸ್ಟ್ ಆ್ಯಂಡ್ ಲಾಸ್ಟ್ ಮೈಲ್ ಕನೆಕ್ಟಿವಿಟಿ) ಕಲ್ಪಿಸುವ ಉದ್ದೇಶದಿಂದ 2021ರಲ್ಲಿ ಬಿಜೆಪಿ ಸರ್ಕಾರ ಈ ಯೋಜನೆ ಜಾರಿಗೊಳಿಸಿತ್ತು. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುವುದರ ಜತೆಗೆ ಸಾಕಷ್ಟು ಯುವಕರಿಗೆ ಉದ್ಯೋಗ ಕೂಡ ಸೃಷ್ಟಿಯಾಗಿತ್ತು. ಇಲಾಖೆಯು ಈ ಬೈಕ್ ಟ್ಯಾಕ್ಸಿಗಳಿಗೆ ದರದ ಜತೆಗೆ ಕಾರ್ಯಾಚರಣೆ ವ್ಯಾಪ್ತಿಯನ್ನೂ 10 ಕಿ. ಮೀ.ವರೆಗೆ ನಿಗದಿಪಡಿಸಿತ್ತು. ಇದರ ಬೆನ್ನಲ್ಲೇ ಯೋಜನೆ ದುರುಪಯೋಗದ ಬಗ್ಗೆ ವ್ಯಾಪಕ ಆರೋಪಗಳು ಕೂಡ ಕೇಳಿ ಬಂದಿದ್ದವು. ಇದಕ್ಕೆ ಪೂರಕವಾಗಿ ಇತ್ತೀಚಿನ ದಿನಗಳಲ್ಲಿ ರಸ್ತೆಗಿಳಿಯುತ್ತಿರುವ ದ್ವಿಚಕ್ರ ವಾಹನಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಕಂಡಬಂದಿದ್ದನ್ನು ಗಮನಿಸಬಹುದು. ಸಾಮಾನ್ಯವಾಗಿ ಈ ಬೈಕ್ ಸವಾರರು ಆ್ಯಪ್ ಆಧಾರಿತ ಸೇವೆಗಳಾದ ಒಲಾ, ರ್ಯಾಪಿಡೊದಂತಹ ಅಗ್ರಿಗೇಟರ್ ಕಂಪನಿಗಳೊಂದಿಗೆ ಲಿಂಕ್ ಮಾಡಿಕೊಂಡು, ಸೇವೆ ಸಲ್ಲಿಸುತ್ತಿದ್ದಾರೆ.
ಇ-ಬೈಕ್ ಟ್ಯಾಕ್ಸಿ ರದ್ದುಗೊಳಿಸಿದ ಸಾರಿಗೆ ಇಲಾಖೆ ಕ್ರಮ ಸ್ವಾಗತಾರ್ಹ. ಈ ಮೂಲಕ ಸರ್ಕಾರವು ಆಟೋ, ಟ್ಯಾಕ್ಸಿ ಚಾಲಕರ ಪರವಾಗಿ ನಿಂತಿದೆ. ಇದಕ್ಕಾಗಿ ಚಾಲಕರ ಪರವಾಗಿ ಸರ್ಕಾರಕ್ಕೆ ಧನ್ಯವಾದಗಳು. –ತನ್ವೀರ್ ಪಾಷ, ಒಲಾ-ಉಬರ್ ಟ್ಯಾಕ್ಸಿ ಚಾಲಕರ ಸಂಘ