Advertisement
ಹಲವು ದೇಶಗಳು ಈಗಾಗಲೇ ರಷ್ಯಾ ವಿರುದ್ಧ ಆರ್ಥಿಕ ದಿಗ್ಬಂಧನವನ್ನು ಹೇರಿದ್ದು, ಹೊಸ ಸೇರ್ಪಡೆಯೆಂಬಂತೆ ಐರೋಪ್ಯ ಒಕ್ಕೂಟ ಶನಿವಾರ ಪುತಿನ್ ಸರಕಾರದ ವಿರುದ್ಧ ಮತ್ತಷ್ಟು ನಿರ್ಬಂಧಗಳನ್ನು ಹೇರುವುದಾಗಿ ಘೋಷಿಸಿದೆ. ರಷ್ಯಾ ಅಧ್ಯಕ್ಷ ಪುತಿನ್ ಅವರು ಉಕ್ರೇನ್ ಮೇಲಿನ ಕ್ರೌರ್ಯ ವನ್ನು ಮುಂದುವರಿಸಿದ್ದೇ ಆದಲ್ಲಿ 4ನೇ ಹಂತದ ನಿರ್ಬಂಧಕ್ಕೆ ಎಲ್ಲ ಸಿದ್ಧತೆ ನಡೆಸಿದ್ದೇವೆ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಹೇಳಿದ್ದಾರೆ. ಯುದ್ಧ ಆರಂಭವಾದಾಗಿನಿಂದಲೂ ಐರೋಪ್ಯ ಒಕ್ಕೂಟವು ರಷ್ಯಾವನ್ನು ಗುರಿಯಾಗಿಸಿಕೊಂಡು ಆ ದೇಶದ ಹಣಕಾಸು ವ್ಯವಸ್ಥೆ ಹಾಗೂ ಕೋಟ್ಯಧಿಪತಿ ಉದ್ಯಮಿಗಳ ಮೇಲೆ ಆರ್ಥಿಕ ದಿಗ್ಬಂಧನವನ್ನು ವಿಧಿಸಿದೆ. ಈ ವಾರದ ಆರಂಭದಲ್ಲಿ, ಒಕ್ಕೂಟದ ಕೆಲವು ದೇಶಗಳು ರಷ್ಯಾದ 160 ವ್ಯಕ್ತಿಗಳ ಮೇಲೆ ಹಾಗೂ ರೇಡಿಯೋ ಸಂವಹನ ತಂತ್ರಜ್ಞಾನದ ಮೇಲೆ ನಿರ್ಬಂಧ ವಿಧಿಸಲು ಒಪ್ಪಿಗೆಯನ್ನು ನೀಡಿವೆ. ಒಟ್ಟಾರೆಯಾಗಿ, ರಷ್ಯಾದ 862 ವ್ಯಕ್ತಿಗಳು ಮತ್ತು 53 ಸಂಸ್ಥೆಗಳು “ದಿಗ್ಬಂಧನದ ಬಿಸಿ’ಯನ್ನು ಎದುರಿಸುತ್ತಿವೆ. ಈ ನಿರ್ಬಂಧಗಳು ಈಗಾಗಲೇ ರಷ್ಯಾದ ಆರ್ಥಿಕತೆಗೆ ದೊಡ್ಡ ಮಟ್ಟಿಗಿನ ಪೆಟ್ಟು ನೀಡಲಾರಂಭಿಸಿವೆ.
ಪಾಶ್ಚಾತ್ಯ ದೇಶಗಳ ಆರ್ಥಿಕ ದಿಗ್ಬಂಧನದಿಂದ ನಲುಗಿ ಹೋಗಿರುವ ರಷ್ಯಾ, ಈಗ ಗೇಮ್‌ಗಳು, ಸಿನೆಮಾಗಳು, ಟಿವಿ ಶೋಗಳ ಪೈರಸಿಯನ್ನು ಕಾನೂನುಬದ್ಧಗೊಳಿಸಲು ಮುಂದಾಗಿದೆ. ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ನಿಯಮಗಳನ್ನು ಸಡಿಲಿಕೆ ಮಾಡಲು ಪುತಿನ್ ಸರಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ. ಇದರಿಂದಾಗಿ ಇತರ ಯಾವುದೇ ದೇಶಗಳ (ಆರ್ಥಿಕ ದಿಗ್ಬಂಧನ ಹೇರಿರುವ) ಬೌದ್ಧಿಕ ಆಸ್ತಿಯನ್ನು ರಷ್ಯಾದ ಕಂಪೆನಿಗಳು ಬಳಸಿಕೊಂಡರೂ, ಅದಕ್ಕಾಗಿ ಹಣ ಪಾವತಿಸಬೇಕಾದ ಹೊಣೆಗಾರಿಕೆಯಿಂದ ಕಂಪೆನಿಗಳು ಮುಕ್ತಗೊಳ್ಳುತ್ತವೆ. ಈಗಾಗಲೇ ಪ್ರಮುಖ ಹಾಲಿವುಡ್ ಸ್ಟುಡಿಯೋಗಳು ರಷ್ಯಾದ ಥಿಯೇಟರ್‌ಗಳಲ್ಲಿ ತಮ್ಮ ಸಿನೆಮಾಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಘೋಷಿಸಿವೆ. ಈಗ ಪೈರಸಿ ಕಾನೂನು ಸಡಿಲಿಕೆಯಾಗುವ ಕಾರಣ, ರಷ್ಯನ್ನರು ಯಾವುದೇ ಹಾಲಿವುಡ್ ಸಿನೆಮಾವನ್ನು ಪೈರಸಿ ಮಾಡಲು ಸರಕಾರವೇ ಅವಕಾಶ ಮಾಡಿಕೊಟ್ಟಂತಾಗಲಿದೆ. ಸಿನೆಮಾ ಮಾತ್ರವಲ್ಲದೇ ಬೇರೆ ಬೇರೆ ಸರಕುಗಳಿಗೂ ಈ ನಿಯಮ ಅನ್ವಯವಾಗಲಿದೆ. ಪೂರ್ವ ಮರಿಯುಪೋಲ್ ರಷ್ಯಾ ವಶಕ್ಕೆ
ಉಕ್ರೇನ್‌ನ ಪೂರ್ವವಲಯದಲ್ಲಿರುವ ಮರಿಯುಪೋಲ್ ಬಂದರು ನಗರಿಯ ಪೂರ್ವ ಭಾಗವಿಡೀ ರಷ್ಯಾ ಸೈನ್ಯದ ಪಾಲಾಗಿದೆ ಎಂದು ಮೂಲಗಳು ತಿಳಿಸಿವೆ. ಉಕ್ರೇನ್ ಸರಕಾರವೂ ಇದನ್ನು ಸ್ಪಷ್ಟಪಡಿಸಿದ್ದು, ಈ ಕುರಿತಂತೆ ಪ್ರಕಟನೆೆಯನ್ನೂ ಹೊರಡಿಸಿದೆ. “ಮರಿಯುಪೋಲ್ ನಗರದ ಉತ್ತರ ಭಾಗಕ್ಕೂ ರಷ್ಯಾ ಸೈನಿಕರು ಲಗ್ಗೆ ಯಿಡುತ್ತಿದ್ದಾರೆ. ಮಿಖಾಯಿಲೊ- ಕೋಟ್ಸುಬೈನ್‌ಸ್ಕೆ, ಝುಕೋಲ್ಟಾ, ಮುಂತಾದ ಕಡೆ ರಷ್ಯಾ ಸೈನಿಕರು ಹೊರಟಿದ್ದಾರೆ” ಎಂದಿದೆ.
Related Articles
Advertisement
ನಮ್ಮಲ್ಲಿ ಹೂಡಿಕೆ ಮಾಡಿ: ರಷ್ಯಾ ಆಹ್ವಾನಪಾಶ್ಚಾತ್ಯ ರಾಷ್ಟ್ರಗಳಿಂದ ತೀವ್ರ ಆರ್ಥಿಕ ದಿಗ್ಬಂಧನಕ್ಕೆ ಒಳಗಾಗಿರುವ ರಷ್ಯಾ, ಈಗ ಭಾರತ ಸೇರಿದಂತೆ ವಿವಿಧ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ತನ್ನಲ್ಲಿ ಹೂಡಿಕೆ ಮಾಡುವಂತೆ ಆಹ್ವಾನ ನೀಡಿದೆ. ಈ ನಿಟ್ಟಿನಲ್ಲಿ, ಭಾರತಕ್ಕೊಂದು ಸಂದೇಶ ಕಳುಹಿಸಿರುವ ರಷ್ಯಾ, ತನ್ನಲ್ಲಿನ ತೈಲ ಹಾಗೂ ನೈಸರ್ಗಿಕ ಅನಿಲ ವಲಯದಲ್ಲಿ ಹೂಡಿಕೆ ಮಾಡುವಂತೆ ಕೇಳಿಕೊಂಡಿದೆ. ಏಷ್ಯಾದ 3ನೇ ಅತೀ ದೊಡ್ಡ ಆರ್ಥಿಕ ಶಕ್ತಿಯೆನಿಸಿಕೊಂಡಿರುವ ಭಾರತಕ್ಕೂ ತಮ್ಮ ವಾಣಿಜ್ಯ ವ್ಯಾಪ್ತಿಯನ್ನು ವಿಸ್ತರಿಸಲು ರಷ್ಯಾದ ಕಂಪೆನಿಗಳು ಉತ್ಸುಕವಾಗಿವೆ ಎಂದು ಪುತಿನ್ ಸರಕಾರ ತಿಳಿಸಿದೆ. 1991ರಲ್ಲಿ ಸೋವಿಯತ್ ಒಕ್ಕೂಟ ಪತನಗೊಂಡ ಅನಂತರ ರಷ್ಯಾ ಆರ್ಥಿಕ ಹಿನ್ನಡೆಗೆ ಒಳಗಾಗಿತ್ತು. ಇತ್ತೀಚೆಗೆ, ಅದು ಉಕ್ರೇನ್‌ನ ಮೇಲೆ ಯುದ್ಧ ಸಾರಿದ ಮೇಲೆ ಅನೇಕ ರಾಷ್ಟ್ರಗಳು ಆರ್ಥಿಕ ದಿಗ್ಬಂಧನ ಹೇರಿವೆ. ಹಾಗಾಗಿ ರಷ್ಯಾ ಭಾರತದ ಕಡೆ ಕೈ ಚಾಚಿದೆ. 4 ಸಾವಿರ ಕೋಟಿ ರೂ. ಮೌಲ್ಯದ ಹಡಗು ವಶಕ್ಕೆ
ರಷ್ಯಾಕ್ಕೆ ಸೇರಿದ ಸುಮಾರು 4,452 ಸಾವಿರ ಕೋಟಿ ರೂ. ಮೌಲ್ಯದ ದೈತ್ಯ ಐಶಾರಾಮಿ ಹಡಗನ್ನು ಇಟಲಿ ವಶಕ್ಕೆ ಪಡೆದುಕೊಂಡಿದೆ. ಇದು ರಷ್ಯಾದ ಕುಬೇರರಾದ ಆ್ಯಂಡ್ರೆ ಮೆಲಿ°ಚೆಂಕೋ ಅವರಿಗೆ ಸೇರಿದ್ದೆನ್ನಲಾಗಿದೆ. ಹಡಗು ವಶಪಡಿಸಿಕೊಂಡಿರುವ ಬಗ್ಗೆ ಇಟಲಿಯ ಪ್ರಧಾನಿ ಮರಿಯೊ ಡ್ರಾ ಅವರ ಕಚೇರಿಯ ಅಧಿಕಾರಿಗಳು ಖಾತ್ರಿ ಪಡಿಸಿದ್ದಾರೆ. ವಶಪಡಿಸಿಕೊಂಡಿರುವ ಹಡಗು ವಿಶ್ವದ ಅತೀ ದೊಡ್ಡ ಪ್ರವಾಸಿಗರ ಹಡಗಾಗಿದ್ದು, ಇದನ್ನು ಉತ್ತರ ಇಟಲಿಯ ಟ್ರೈಸ್ಟೆ ಎಂಬ ಬಂದರಿನಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ. ಸಮರಾಂಗಣದಲ್ಲಿ
– ಕೀವ್‌ನಲ್ಲಿ ಮುಂದುವರಿದ ರಷ್ಯಾ ಕಾರ್ಯಾಚರಣೆ. ಕ್ಷಿಪಣಿ ದಾಳಿಯ ಮೂಲಕ ಕೀವ್ ವಾಯುನೆಲೆ ಧ್ವಂಸ.
– ಮರಿಯುಪೋಲ್ ನಗರದ ಹೊರವಲಯದಲ್ಲಿರುವ, 80 ನಾಗರಿಕರು ವಾಸ ಮಾಡುತ್ತಿದ್ದ ಮಸೀದಿಯ ಮೇಲೆ ದಾಳಿ
– ರಷ್ಯಾ ಮೇಲೆ ಮತ್ತಷ್ಟು ಆರ್ಥಿಕ ದಿಗ್ಬಂಧನಗಳನ್ನು ಹೇರಲು ಐರೋಪ್ಯ ಒಕ್ಕೂಟ ನಿರ್ಧಾರ.
ತನ್ನ ಮೇಲಿನ ನಿರ್ಬಂಧಗಳು ಹೆಚ್ಚಿದರೆ
– ಬಾಹ್ಯಾಕಾಶ ನಿಲ್ದಾಣ ಸಂಪೂರ್ಣವಾಗಿ ನಾಶ ಮಾಡುವುದಾಗಿ ರಷ್ಯಾ ಎಚ್ಚರಿಕೆ.
– ರಷ್ಯಾಕ್ಕೆ ನಾಗರಿಕ ವಿಮಾನಸೇವೆಗಳನ್ನು ರದ್ದುಗೊಳಿಸಿದ ಕಜಕಿಸ್ಥಾನ ಹಾಗೂ ಥಾಯ್ಲೆಂಡ್.
– ಮಿಕೋಲಾಯಿವ್‌ನಲ್ಲಿರುವ ಕ್ಯಾನ್ಸರ್ ಆಸ್ಪತ್ರೆ ಮೇಲೆ ರಷ್ಯಾ ವೈಮಾನಿಕ ದಾಳಿ ನಡೆಸಿದೆ ಎಂದು ಆರೋಪಿಸಿದ ಉಕ್ರೇನ್.
– ಉಕ್ರೇನ್‌ನ ಪೂರ್ವವಲಯದಲ್ಲಿರುವ ಮರಿಯೊ ಪೋಲ್ ಬಂದರು ನಗರಿಯ ಪೂರ್ವ ಭಾಗವಿಡೀ ರಷ್ಯಾ ಸೈನ್ಯದ ಪಾಲಾಗಿದ್ದು, ನಗರದ ಉತ್ತರದ ಕಡೆ ರಷ್ಯಾ ಸೇನೆ ಹೆಜ್ಜೆ.