ಮುಂಜಾನೆ ಎದ್ದು ತೋಟಕ್ಕೆ ಹೋಗುವುದು ಕೃಷಿಕರ ಅಭ್ಯಾಸ. ಹಾಗೇ ತೋಟದ ಕಡೆ ಹೊರೆಟು ಒಂದಷ್ಟು ಸುತ್ತಿಕೊಂಡು ತೋಟದ ಮಧ್ಯಭಾಗದಲ್ಲಿರುವ ಹಾಸು ಕಲ್ಲಿನ ಮೇಲೆ ಕುಳಿತುಕೊಂಡೆ. ಆಗ ತಾನೇ ಸೂರ್ಯ ಮೆಲ್ಲನೆ ಕೆಂಪೆರುತ್ತಿದ್ದ. ಮಧ್ಯಮ ಗಾತ್ರದ ಹಕ್ಕಿಯೊಂದು ಹಾರಿ ಬಂದು ನೆಲವನ್ನು ಹೊಕ್ಕಿತು. ನಾನು ಕುಳಿತಿದ್ದ ಜಾಗದಿಂದ ಸುಮಾರು ಹತ್ತು ಹೆಜ್ಜೆ ದೂರದಲ್ಲಿ ಕುಳಿತು ಉಪೋ.. ಉಪೋ.. ಎಂದು ಕೂಗುತ್ತ ಮೈ ಕೊಡವಿ ತನ್ನ ನೀಳವಾದ ಕೊಕ್ಕಿನಿಂದ ನೆಲವನ್ನು ಕುಕ್ಕುತ್ತ ಹುಳು ಹುಪ್ಪಟೆಗಳನ್ನು ಆಯ ತೊಡಗಿತು.
ಯುವಕರು ತಮ್ಮ ತಲೆ ಕೂದಲನ್ನು ಮುಳ್ಳಿನ ರೀತಿ ಮಾಡಿಕೊಳ್ಳಲು ಬೇರೆ ಬೇರೆ ರೀತಿಯ ಸರ್ಕಸ್ ಮಾಡುವುದುಂಟು. ಆದರೆ ಈ ಹಕ್ಕಿಗೆ ಪ್ರಕೃತಿ ನೈಸರ್ಗಿಕವಾಗಿಯೇ ಕೊಡುಗೆ ನೀಡಿದೆ. ತಲೆಯ ಮೇಲೆ ಅರಳಿದ ಹೂವಿನಂತೆ ಕಾಣುವ ಕಿರೀಟವನ್ನು ಹೊತ್ತು ಅಡ್ಡಾಡುತ್ತಿದ್ದ ಹಕ್ಕಿಯೇ ಚಂದ್ರ ಮುಕುಟ. ಅಬ್ಟಾ ಇದು ಎಂತಹ ಹಕ್ಕಿ. ನೋಡಲು ಸ್ವಪ್ನ ಸುಂದರಿಯಂತೆ ಕಾಣುತ್ತ ಎಳೆ ಬಿಸಿಲಿಗೆ ಪುಕ್ಕಗಳಿಂದ ಕೂಡಿದ ಕಿರೀಟವು ವಜ್ರ ಮುಕುಟದಂತೆ ಗೋಚರಿಸುತ್ತಿತ್ತು. ಪುಟ್ಟದಾದ ಕಾಲುಗಳಲ್ಲಿ ಜಿಗಿಯುತ್ತ ಮುಂದೆ ಮುಂದೆ ಸಾಗ ತೊಡಗಿತ್ತು. ಈ ಹಕ್ಕಿ ಬಹುಪಾಲು ಮರಕುಡುಕವನ್ನು ಹೋಲುತ್ತದೆ. ಮರಕುಟಿಕ ಇದರ ಸಹೋದರ. ಇವೆರೆಡೂ ಒಂದೇ ಕುಟುಂಬಕ್ಕೆ ಸೇರಿದ ಹಕ್ಕಿಗಳಾಗಿವೆ. ಚಂದ್ರ ಮುಕುಟವನ್ನು ಆಂಗ್ಲ ಭಾಷೆಯಲ್ಲಿ ಹೂಪು ಎಂದು ಕರೆಯುತ್ತಾರೆ. ಈ ಹಕ್ಕಿ ಉಪುಪಿಡೆ ಕುಟುಂಬದಲ್ಲಿ ಲಭ್ಯವಿರುವ ಏಕೈಕ ಪ್ರಭೇದವಾಗಿದೆ.
ಈ ಪ್ರಭೇದದಲ್ಲಿ ಒಂಭತ್ತು ಬಗೆಯ ಉಪಪ್ರಭೇದಗಳನ್ನು ಕಾಣಬಹುದಾಗಿದೆ. ಇವುಗಳ ಪೈಕಿ ಬಹುಪಾಲು ಪ್ರಭೇದಗಳು ಆಫ್ರಿಕಾ, ಯುರೋಪ್ ಹಾಗೂ ಏಷ್ಯಾ ಖಂಡಗಳಲ್ಲಿ ವಾಸಿಸುತ್ತವೆ. ಇವುಗಳು ಉಪೋ…ಉಪೋ… ಎಂದು ಕೂಗುವುದರಿಂದಲೇ ಹೂಪೋ ಎಂದು ಲ್ಯಾಟಿನ್ ಹಾಗೂ ಆಂಗ್ಲ ಭಾಷೆಗಳಲ್ಲಿ ಹೆಸರು ಬಂದಿದೆ ಎನ್ನಲಾಗಿದೆ. ಹಕ್ಕಿಯ ಶಿರದ ಮೇಲೆ ಚಂದ್ರನನ್ನು ಹೋಲುವ ಬೀಸಣಿಗೆಯ ಆಕಾರವನ್ನು ಹೊಂದಿರುವುದರಿಂದಲೇ ಚಂದ್ರ ಮುಕುಟ ಎಂಬ ನಾಮಧೇಯ ಈ ಹಕ್ಕಿಗೆ ಲಭಿಸಿದೆ. ಈ ರಚನೆಯು ವಿಶೇಷ ಮತ್ತು ವಿಭಿನ್ನವಾದದ್ದು. ಕಂದು ಹಾಗೂ ಕಪ್ಪು ಮಿಶ್ರಿತ ಗರಿಗಳಿಂದ ಕೂಡಿದ ರಚನೆಯು ಹಕ್ಕಿಗೊಂದು ಸೊಬಗನ್ನು ಕೊಟ್ಟಿದೆ. ವಿಶೇಷವೆಂದರೆ, ಈ ಹಕ್ಕಿ ತನ್ನ ಆವಶ್ಯಕತೆಗೆ ತಕ್ಕಂತೆ ಕಿರೀಟವನ್ನು ಬಾಚಿದ ಕೂದಲಂತೆ ತಗ್ಗಿಸಿಕೊಳ್ಳುತ್ತದೆ. ಹಾಗೇ ಮತ್ತೆ ಕಿರೀಟದಂತೆ ಅರಳಿಸಿಕೊಳ್ಳುತ್ತದೆ.
ತನ್ನ ದಿನಚರಿಯ ಹೆಚ್ಚು ಸಮಯವನ್ನು ನೆಲದಲ್ಲಿಯೇ ಕಳೆಯುತ್ತ ಆಹಾರವನ್ನು ಹುಡುಕುತ್ತದೆ. ಅವಶ್ಯಕತೆಯ ಬಹುಪಾಲು ಆಹಾರವನ್ನು ನೆಲದಲ್ಲಿಯೇ ಹೆಕ್ಕುವುದರಿಂದ ನೆಲಕುಟಿಕ ಎಂತಲೂ ಕರೆಯಲಾಗುತ್ತದೆ. ಈ ಹಕ್ಕಿ ಹೆಚ್ಚಾಗಿ ಹುಲ್ಲುಗಾವಲುಗಳಿರುವ ಪ್ರದೇಶಗಳು, ತೋಟಗಳು, ಗುಡ್ಡಗಾಡುಗಳು ಹಾಗೂ ಬಯಲುಸೀಮೆಯ ಹಳ್ಳಿಗಳ ಹೊಲಗಳ ಬಯಲಿನಲ್ಲಿ ಕಂಡುಬರುತ್ತವೆ. ನೋಡುವುದಕ್ಕೆ ಮಧ್ಯಮ ಗಾತ್ರದ ಹಕ್ಕಿಯಂತೆ ಕಾಣುವ ಚಂದ್ರಮುಕುಟವು ಕೆಂಪು ಮಣ್ಣಿನ ಬಣ್ಣವನ್ನು ಹೋಲುತ್ತದೆ. ತನ್ನ ಎರಡೂ ರೆಕ್ಕೆಯ ಮೇಲೆ ಝೀಬ್ರಾ ಪಟ್ಟಿಯಂತೆ ಕಪ್ಪು ಮತ್ತು ಬಿಳಿ ಬಣ್ಣದ ಪಟ್ಟಿಗಳು ಹಕ್ಕಿಯನ್ನು ಇನ್ನಷ್ಟು ಶೃಂಗಾರಗೊಳಿಸುತ್ತದೆ.
ಈ ಹಕ್ಕಿಯು ಕೊಂಚ ಸೋಂಬೇರಿ. ತನ್ನ ಸಂತಾನೋತ್ಪತ್ತಿಯ ಸಂದರ್ಭದಲ್ಲಿ ಬೇರೆಲ್ಲ ಪಕ್ಷಿಗಳಿಗಿಂತ ವಿಭಿನ್ನವಾದದ್ದು. ಇತರ ಹಕ್ಕಿಗಳಂತೆ ತನ್ನ ಶ್ರಮ ವ್ಯಹಿಸಿ ಗೂಡನ್ನಾಗಲಿ ಇತರ ಆವಾಸ ಸ್ಥಾನಗಳನ್ನಾಗಲಿ ನಿರ್ಮಿಸುವುದಿಲ್ಲ. ಬದಲಾಗಿ ಈಗಾಗಲೇ ಸಿದ್ಧವಿರುವಂತಹ ಮರದ ಪೊಟರೆಗಳು, ಪಾಳು ಬಿದ್ದ ಮನೆಗಳು, ಕಲ್ಲಿನ ಸಂಧಿಗಳು ಹೀಗೆ ತನ್ನ ಸುರಕ್ಷತೆಗೆ ಸರಿಹೊಂದುವ ಸ್ಥಳಗಳನ್ನು ಆರಿಸಿಕೊಂಡು ಹುಲ್ಲು ಕಸ ಕಡ್ಡಿಗಳನ್ನು ಬಳಸಿ ಮೆತ್ತನೆಯ ಹಾಸಿಗೆಯನ್ನು ಮಾತ್ರ ಸಿದ್ಧಪಡಿಸಿಕೊಳ್ಳುತ್ತದೆ.
ಗಂಡು ಹಕ್ಕಿಯು ಹೆಣ್ಣು ಹಕ್ಕಿಯ ಜತೆ ಸಂಪರ್ಕ ಸಾಧಿಸಲು ಇತರ ಗಂಡು ಹಕ್ಕಿಗಳೊಂದಿಗೆ ಹೋರಾಟ ಮಾಡಬೇಕು. ಕಾಳಗದಲ್ಲಿ ಗೆದ್ದ ಗಂಡುಹಕ್ಕಿ ಹೆಣ್ಣಕ್ಕಿಯೊಂದಿಗೆ ಸಂಪರ್ಕಿಸುತ್ತದೆ. ಸಾಮಾನ್ಯವಾಗಿ ಫೆಬ್ರವರಿ ಹಾಗೂ ಮೇ ತಿಂಗಳಲ್ಲಿ ಈ ಹಕ್ಕಿ ಮೊಟ್ಟೆಯನ್ನು ಇಡುವುದು ವಾಡಿಕೆ. ಮೊಟ್ಟೆ ಇಟ್ಟ 18 ದಿನಗಳ ಬಳಿಕ ಮರಿಗಳಾಗುತ್ತವೆ. ಮರಿಗಳ ಸಂಪೂರ್ಣ ಜವಾಬ್ದಾರಿಯನ್ನು ಗಂಡು ಹಕ್ಕಿ ತೆಗೆದುಕೊಂಡು, ರೆಕ್ಕೆ ಪುಕ್ಕ ಬಂದು ಹಾರುವವರೆಗೂ ಜತೆಯಲ್ಲಿ ಇರಬೇಕಾದ ಕಟ್ಟಲೆ ಅವುಗಳದ್ದು.
ಈ ಹಕ್ಕಿಗಳ ಹಾರಾಟವನ್ನು ವೀಕ್ಷಿಸುವುದು ಕಣ್ಣಿಗೊಂದು ಹಬ್ಬ. ಎರಡು ರೆಕ್ಕೆಗಳನ್ನು ಬಿಚ್ಚಿ ನಭಕ್ಕೆ ಹಾರಿದರೆ ಕಪ್ಪು ಬಿಳಿಯ ಚಂದ್ರಿಕೆಯಂತೆ ಕಾಣುತ್ತದೆ. ಹಾರುವಾಗ ನೋಡಲು ಒಂದು ದೊಡ್ಡ ಚಿಟ್ಟೆಯಂತೆ ಕಾಣುವ ಈ ಹಕ್ಕಿಯು ವಲಸೆ ಪ್ರಿಯ ಎಂದು ಹೇಳಬಹುದು. ಭಾರತದ ಅತ್ಯಂತ ಶೀತ ಪ್ರದೇಶವಾದ ಹಿಮಾಲಯದಲ್ಲಿಯೂ ಇವುಗಳ ಹಾರಾಟವು ದಾಖಲೆಯಾಗಿದೆ ಎಂಬುದು ಅಚ್ಚರಿಯಾಗುತ್ತದೆ.
- ಸಂತೋಷ್ ಇರಕಸಂದ್ರ
ತುಮಕೂರು