ಹಾಸನ/ಮಂಗಳೂರು: ಮುಂದಿನ ಮುಂಗಾರಿನಲ್ಲಿ ಎತ್ತಿನ ಹೊಳೆ ಯೋಜನೆಯಿಂದ ನೀರೆತ್ತಿ ಕೆರೆಗಳಿಗೆ ಹರಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯಿಂದ ಮುಂದಿನ ಮುಂಗಾರು ಹಂಗಾಮಿನಲ್ಲಿ ನಾಲೆಗಳಲ್ಲಿ ನೀರು ಹರಿಸಿ ಅರಸೀಕೆರೆ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದರು.
ಕಾಂಗ್ರೆಸ್ ಸರಕಾರ ಗೃಹ ಜ್ಯೋತಿ ಕಾರ್ಯಕ್ರಮದ ಮೂಲಕ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುತ್ತಿದೆ. ಜತೆಗೆ ಈಗ ವಿದ್ಯುತ್ ದರವನ್ನೂ ಇಳಿಸಿದೆ. ದೇಶದಲ್ಲಿ ಯಾವುದಾದರೂ ಸರಕಾರ ವಿದ್ಯುತ್ ದರ ಇಳಿಸಿದೆಯೇ ? ಆದರೆ ಬಿಜೆಪಿ ಸರಕಾರದಲ್ಲಿ ವಿದ್ಯುತ್ ದರ ಏರಿಸಲಾಗಿತ್ತು ಎಂದರು.
ದೇವರ ಹೆಸರಲ್ಲಿ ನಾವು ರಾಜಕಾರಣ ಮಾಡುವುದಿಲ್ಲ. ಹೆಚ್ಚು ಆದಾಯವಿರುವ ದೇವಾಲಯಗಳ ಶೇ.10ರಷ್ಟು ಆದಾಯವನ್ನು ಆದಾಯವಿಲ್ಲದ ದೇವಾಲಯಗಳಿಗೆ ನೀಡಲು ಸರಕಾರ ನಿರ್ಧರಿಸಿದೆ. ಸಣ್ಣ ದೇವಾಲಯಗಳ ಅರ್ಚಕರು ಆದಾಯವಿಲ್ಲ ಸಹಾಯ ಮಾಡಿ ಎಂದು ಕೇಳಿದ್ದರು. ಈ ಹಿನ್ನಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದರು.