ಮಂಗಳೂರು: ಕರಾವಳಿಯ ಜೀವನಾಡಿ ನೇತ್ರಾವತಿಗೆ ಆತಂಕ ತರಿಸುವ ಎತ್ತಿನಹೊಳೆ ನೀರಾವರಿ ಯೋಜನೆಯ ವಿರುದ್ಧ ಕಾನೂನು ಹೋರಾಟ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಗುರುವಾರ ವಿಚಾರಣೆ ಆರಂಭವಾಗಲಿದೆ.
ಎತ್ತಿನಹೊಳೆ ಯೋಜನೆಯ ವಿರುದ್ಧ ಪರಿಸರವಾದಿಗಳು ಸಲ್ಲಿಸಿದ್ದ ಎರಡು ಅರ್ಜಿಗಳನ್ನು ಹಸಿರು ನ್ಯಾಯ ಪೀಠ (ಎನ್‌ಜಿಟಿ)ವು ಮೇಯಲ್ಲಿ ವಜಾಗೊಳಿಸಿ ತೀರ್ಪು ನೀಡಿತ್ತು. ಎನ್‌ಜಿಟಿ ಪೀಠದ ತೀರ್ಪು ಪ್ರಶ್ನಿಸಿ ಪರಿಸರ ಹೋರಾಟಗಾರ ಕೆ.ಎನ್. ಸೋಮಶೇಖರ್ ಒಂದು ತಿಂಗಳ ಹಿಂದೆಯಷ್ಟೇ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿರುವ ನ್ಯಾಯಪೀಠವು ಈ ಬಗ್ಗೆ ಗುರುವಾರ ವಿಚಾರಣೆ ಆರಂಭಿಸಲಿದೆ. ಇದರೊಂದಿಗೆ ಪಶ್ಚಿಮ ಘಟ್ಟದ ಜೀವ ವೈವಿಧ್ಯಕ್ಕೆ ಧಕ್ಕೆಯುಂಟು ಮಾಡುತ್ತಿರುವ ಎತ್ತಿನಹೊಳೆ ನೀರಾವರಿ ಯೋಜನೆಯ ವಿರುದ್ಧ ಸರ್ವೋಚ್ಚ ನ್ಯಾಯಾಲಯ ದಲ್ಲಿ ಮಹತ್ವದ ಕಾನೂನು ಹೋರಾಟ ಪ್ರಾರಂಭವಾಗಲಿದೆ.
ಎತ್ತಿನಹೊಳೆ ಕಾಮಗಾರಿಗೆ ಸಂಬಂಧಿಸಿದಂತೆ ಅರಣ್ಯ ತೆರವಿಗೆ ಅವಕಾಶ ನೀಡಿರುವುದನ್ನು ಪ್ರಶ್ನಿಸಿ ಎನ್‌ಜಿಟಿ ಮುಂದೆ ಸೋಮಶೇಖರ್ ಮತ್ತು ಸಕಲೇಶಪುರದ ವಕೀಲ ಕಿಶೋರ್ ಕುಮಾರ್ ಅರ್ಜಿ ಸಲ್ಲಿಸಿದ್ದರು. ಕುಡಿಯುವ ನೀರಿನ ಯೋಜನೆಯಾಗಿರುವ ಹಿನ್ನೆಲೆಯಲ್ಲಿ ಇತರ ಆಕ್ಷೇಪಗಳು ಪರಿಗಣನೆಗೆ ಬರುವುದಿಲ್ಲವಾದ್ದರಿಂದ ಅರ್ಜಿ ಮತ್ತು ಮೇಲ್ಮನವಿ ಅರ್ಜಿಯನ್ನು ತಿರಸ್ಕರಿಸುವುದಾಗಿ ನ್ಯಾಯಪೀಠ ಮೂರು ತಿಂಗಳ ಹಿಂದೆ ಆದೇಶ ಹೊರಡಿಸಿತ್ತು. ಎನ್‌ಜಿಟಿ ನೀಡಿರುವ ಈ ತೀರ್ಪನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟಿನ ಮೊರೆಹೋಗಿದ್ದಾರೆ.
ಈ ಬಗ್ಗೆ “ಉದಯವಾಣಿ’ ಜತೆಗೆ ಮಾತನಾಡಿದ ಅರ್ಜಿದಾರ ಕೆ.ಎನ್. ಸೋಮಶೇಖರ್, ಎನ್‌ಜಿಟಿ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು, ಇದರ ವಿಚಾರಣೆ ಗುರುವಾರದಿಂದ ಆರಂಭವಾಗಲಿದೆ. ಎನ್‌ಜಿಟಿಗೆ ಸಲ್ಲಿಸಿರುವ ಅರ್ಜಿಗೆ ಪೂರಕವಾಗಿ ತೀರ್ಪು ಬಾರದ ಹಿನ್ನೆಲೆಯಲ್ಲಿ ಈ
ವಿಚಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಎತ್ತಿನಹೊಳೆ ಯೋಜನೆಯ ಮೂಲಕ ಪಶ್ಚಿಮ ಘಟ್ಟಕ್ಕೆ ಆಗುತ್ತಿರುವ ಹಾನಿ ಮತ್ತು ಯೋಜನೆಯ ನಿಗೂಢತೆಯ ವಿರುದ್ಧ ಕಾನೂನು ಹೋರಾಟವನ್ನು ಸುಪ್ರೀಂ ಕೋರ್ಟ್‌ನಲ್ಲಿ ನಡೆಸಲಾಗುವುದು ಎಂದಿದ್ದಾರೆ.