Advertisement

ರಾಜಧಾನಿಗೆ ಎತ್ತಿನಹೊಳೆ, ಟಿ.ಜಿ.ಹಳ್ಳಿ ನೀರು ರವಾನೆ

06:42 AM Jan 01, 2019 | Team Udayavani |

ಬೆಂಗಳೂರು: ರಾಜಧಾನಿಯ 95 ಲಕ್ಷಕ್ಕೂ ಹೆಚ್ಚು ಜನರಿಗೆ ನೀರು ಪೂರೈಸುವ ಜಲಮಂಡಳಿಯು ಹೊಸ ವರ್ಷದಲ್ಲಿ ಎತ್ತಿನಹೊಳೆ ಯೋಜನೆಯಡಿ ಸಿಗುವ ನೀರು, ತಿಪ್ಪಗೊಂಡನಹಳ್ಳಿ ಜಲಾಶಯ ಪುನಶ್ಚೇತನಗೊಳಿಸುವುದು ಸೇರಿದಂತೆ ಒಂದಿಷ್ಟು ಹೊಸ ಯೋಜನೆಗಳನ್ನು ರೂಪಿಸಿದೆ.

Advertisement

ಎತ್ತಿನಹೊಳೆ ಯೋಜನೆಯ ಮೂಲಕ ಬೆಂಗಳೂರಿಗೆ 2.5 ಟಿಎಂಸಿ ನೀರು ಲಭ್ಯವಾಗಲಿದ್ದು, ಈ ನೀರಲ್ಲಿ 1.7 ಟಿಎಂಸಿ ನೀರನ್ನು ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಪೂರೈಸಲು ನಿರ್ಧರಿಸಲಾಗಿದೆ. ಮೊದಲ ಹಂತದ ಕಾಮಗಾರಿ 2019ರ ಏಪ್ರಿಲ್‌ಗೆ ಆರಂಭವಾಗಿ 2021ರ ಅಕ್ಟೋಬರ್‌ಗೆ ಮುಗಿಯಲಿದೆ. ಮೊದಲು ಹೂಳು ಎತ್ತಿ ಆನಂತರ ನೀರು ಸಂಸ್ಕರಣೆ ಘಟಕ, ಕೊಳಚೆ ನೀರು ಸಂಸ್ಕರಣೆ ಘಟಕ, 22 ಕಿ.ಮೀ. ವ್ಯಾಪ್ತಿಯಲ್ಲಿ ಪೈಪ್‌ಲೈನ್‌ ಅಳವಡಿಕೆ ಮಾಡಲಾಗುತ್ತಿದೆ.

ತಿಪ್ಪಗೊಂಡನಹಳ್ಳಿ ಜಲಾಶಯ ಅಭಿವೃದ್ಧಿಗೆ ಜಲಮಂಡಳಿ ಮುಂದಾಗಿದ್ದು, 286 ಕೋಟಿ ರೂ. ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ರೂಪಿಸಿದೆ. 2019ರ ಏಪ್ರಿಲ್‌ನಿಂದ ಕಾಮಗಾರಿಗೆ ಚಾಲನೆ ದೊರೆಯಲಿದೆ. ಜಲಾಶಯವು 3.3 ಟಿಎಂಸಿ ಸಾಮರ್ಥ್ಯ ಹೊಂದಿದ್ದು, ಈ ಹಿಂದೆ ಬೆಂಗಳೂರಿನ ಕುಡಿಯುವ ನೀರಿನ ಮೂಲವಾಗಿತ್ತು. ಕಲುಷಿತ ನೀರು ಹಾಗೂ ಜಲಾಶಯದಲ್ಲಿ ಹೂಳು ತುಂಬಿಕೊಂಡಿದೆ ಎಂಬ ಕಾರಣಕ್ಕೆ ಏಳೆಂಟು ವರ್ಷಗಳ ಹಿಂದೆ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು.

ಕಳೆದ ವರ್ಷ ಉತ್ತಮ ಮಳೆ ಹಾಗೂ ಎತ್ತಿನ ಹೊಳೆ ಯೋಜನೆಯಿಂದ ನೀರು ತರಲು ಸರ್ಕಾರ ಚಿಂತನೆ ನಡೆಸಿರುವುದರಿಂದ ಜಲಾಶಯ ಅಭಿವೃದ್ಧಿಗೆ ಜಲಮಂಡಳಿ ಮುಂದಾಗಿದೆ. ತಿಪ್ಪಗೊಂಡನಹಳ್ಳಿ ಜಲಾಶಯ ಅಭಿವೃದ್ಧಿಯಿಂದ ಬೆಂಗಳೂರಿನ ಬಹುಪಾಲು ಕುಡಿಯುವ ನೀರಿನ ಸಮಸ್ಯೆಗೆ ಕಡಿವಾಣ ಬೀಳಲಿದೆ. ಒಂದೆಡೆ ನಗರದ ಜನಸಂಖ್ಯೆ ಹೆಚ್ಚಳವಾಗಿ ಜಲಮಂಡಳಿಯ ಸೇವೆ ದಿನದಿಂದ ದಿನದಕ್ಕೆ ವಿಸ್ತರಣೆಗೊಳ್ಳುತ್ತಿದೆ. ಮುಂದೆ ನೀರಿನ ಕೊರತೆ ಉಂಟಾಗಬಹುದು. ಈ ಕಾರಣಕ್ಕಾಗಿ ಜಲಮಂಡಳಿ ಸಹ ಹೆಚ್ಚಿನ ಆಸಕ್ತಿ ವಹಿಸಿ ಈ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿದೆ.

ಸಿಬ್ಬಂದಿ ನೇಮಕಾತಿಗೂ ಕ್ರಮ: ಈ ಮಧ್ಯೆ, ಕಳೆದ ವರ್ಷ ಜಲಮಂಡಳಿಯ 256 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಈ ವರ್ಷ ಜನವರಿ ಅಂತ್ಯಕ್ಕೆ ನೇಮಕಾತಿ ಪರೀಕ್ಷೆ ನಡೆಯಲಿದೆ. ಮೇ ತಿಂಗಳ ಒಳಗೆ ಪ್ರಕ್ರಿಯೆ ಮುಕ್ತಾಯಗೊಂಡು ಹುದ್ದೆಗಳು ಭರ್ತಿಯಾಗಲಿವೆ. ಕಳೆದ ವರ್ಷ ಮೇ ತಿಂಗಳಲ್ಲಿ ಕಾವೇರಿ ವಿಭಾಗ, ತ್ಯಾಜ್ಯ ನೀರು, ನಿರ್ವಹಣಾ ವಿಭಾಗಗಳ ಮುಖ್ಯ ಅಭಿಯಂತರು ಹಾಗೂ ಸಹಾಯಕ ಅಭಿಯಂತರರು ಸೇರಿ 21 ಅಧಿಕಾರಿಗಳು ನಿವೃತ್ತಿ ಹೊಂದಿದ್ದಾರೆ.

Advertisement

ಈ ಪರಿಣಾಮ ಹಾಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಮೇಲೆ ಒತ್ತಡ ಹೆಚ್ಚಾಗಿತ್ತು. ಅಲ್ಲದೆ, ಇಂಜಿನಿಯರಿಂಗ್‌, ಮೀಟರ್‌ ರೀಡಿಂಗ್‌, ಕಚೇರಿ ನಿರ್ವಹಣೆ ವಿಭಾಗಗಳಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ದೈನಂದಿನ ಕೆಲಸ-ಕಾರ್ಯಗಳಿಗೆ ತೊಂದರೆಯಾಗುತ್ತಿದ್ದ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿದ್ದವು. ಇವಕ್ಕೆಲ್ಲ ಈ ವರ್ಷ ಆಗುವ ನೇಮಕಾತಿಗಳಿಂದ ಮುಕ್ತಿ ಸಿಗಲಿದೆ.

ಜತೆಗೆ, ನಗರದ ಕೆರೆಗಳ ಸುತ್ತಲ ಅಪಾರ್ಟ್‌ಮೆಂಟ್‌ ಹಾಗೂ ಕಟ್ಟಡಗಳಿಂದ ನೇರವಾಗಿ ಕೊಳಚೆ ನೀರು ಕೆರೆಗೆ ಹರಿಯುತ್ತಿದ್ದು, ಅದಕ್ಕೆ, ಕಡಿವಾಣ ಹಾಕಲು ಜಲಮಂಡಳಿ ಮುಂದಾಗಿದೆ. ಕೆರೆಗಳ ಬಳಿ ವರ್ಷಾಂತ್ಯಕ್ಕೆ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಸ್ಥಾಪಿಸುವುದು ಹಾಗೂ ಅಪಾರ್ಟ್‌ಮೆಂಟ್‌ಗಳು ಕಡ್ಡಾಯವಾಗಿ ಎಸ್‌ಟಿಪಿ ಅಳವಡಿಸಿಕೊಳ್ಳುವಂತೆ ಕ್ರಮ ಜರುಗಿಸಲು ಜಲಮಂಡಳಿ ಮುಂದಾಗಿದೆ.

ಈ ವರ್ಷ ನೀರು ಸೋರಿಕೆ ಪ್ರಮಾಣವನ್ನು ಇನ್ನಷ್ಟು ಕಡಿಮೆ ಮಾಡಿ, ಆ ನೀರನ್ನು 110 ಹಳ್ಳಿಗಳ ಫ‌ಲನಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು. ಕೆರೆಗಳಿಗೆ ತ್ಯಾಜ್ಯ ನೀರು ಸೇರುವುದನ್ನು ತಪ್ಪಿಸಲು ಕೆರೆಗಳ ಬಳಿ ಎಸ್‌ಟಿಪಿ ಸ್ಥಾಪಿಸುವ ಯೋಜನೆ ಇದೆ. ಜತೆಗೆ ತಿಪ್ಪಗೊಂಡನಹಳ್ಳಿ ಜಲಾಶಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದು ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಹೇಳುತ್ತಾರೆ.

2007ರಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಸೇರಿದ 110 ಹಳ್ಳಿಗಳಿಗೆ ಕಾವೇರಿ ನೀರು ಒದಗಿಸುವ ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಯೋಜನೆಯನ್ನು ಜಲಮಂಡಳಿ ಹಾಕಿಕೊಂಡಿತ್ತು. ಆದರೆ, ಈ ಯೋಜನೆಯಲ್ಲಿ ನೀರು ಪೂರೈಕೆ ಕಾಮಗಾರಿಯನ್ನು 2019ರ ಡಿಸೆಂಬರ್‌ ಒಳಗೆ ಮುಗಿಸಲಾಗುವುದು. ಮೊದಲು ಈ ಭಾಗಗಳಿಗೆ ಪೈಪ್‌ಲೈನ್‌ ಸೋರಿಕೆ ತಡೆಯಿಂದ ಬಂದ ನೀರನ್ನು ಹಂಚಲಾಗುತ್ತದೆ. 2020ರ ವೇಳೆಗೆ ಒಳಚರಂಡಿ ಕಾಮಗಾರಿ ಮುಕ್ತಾಯಗೊಳ್ಳಬಹುದು. ಈ ಹಳ್ಳಿಗಳಲ್ಲಿ ಜಲಮಂಡಳಿಯ ಕಚೇರಿ ಹಾಗೂ ಸಿಬ್ಬಂದಿ ನೇಮಕ ಮಾಡುವ ಅವಶ್ಯಕತೆ ಬೀಳಲಿದೆ.

ಸೋರಿಕೆ ಪ್ರಮಾಣ 35%ಗೆ ಇಳಿಕೆ: ನೂರಾರು ಕಿ.ಮೀ ದೂರದಿಂದ ರಾಜಧಾನಿಗೆ ಕಾವೇರಿ ನೀರು ಹರಿದು ಬರುತ್ತಿದ್ದು, ಮಾರ್ಗ ಮಧ್ಯೆ ನೀರಿನ ಸೋರಿಕೆ ಪ್ರಮಾಣ ಸಾಕಷ್ಟಿದೆ. 2018 ಆರಂಭದಲ್ಲಿ ಶೇ.39 ಇದ್ದ ಸೋರಿಕೆ ಪ್ರಮಾಣವನ್ನು ಪ್ರಸ್ತುತ ಶೇ.37ಕ್ಕೆ ಇಳಿಸಲಾಗಿದೆ. ಈ ಬಾರಿ ಜೈಕಾ ಸಂಸ್ಥೆಯ ಸಹಕಾರದೊಂದಿಗೆ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಸೋರಿಕೆ ಪ್ರಮಾಣವನ್ನು ಶೇ.35ಕ್ಕೆ ಇಳಿಸುವ ಗುರಿ ಇಟ್ಟುಕೊಂಡಿದೆ.

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next