ಜೇವರ್ಗಿ: ಜಗತ್ತಿನಲ್ಲಿ ಬದುಕಲು ಕೇವಲ ಶಿಕ್ಷಣ ಸಾಕಾಗುತ್ತದೆ, ಆದರೆ ಬಾಳಲು ಶಿಕ್ಷಣದ ಜತೆಗೆ ಸಂಸ್ಕಾರವೂ ಅವಶ್ಯಕವಾಗಿದೆ ಎಂದು ಕಡಕೋಳ ಮಡಿವಾಳೇಶ್ವರ ಮಠದ ಶ್ರೀ ಡಾ|ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ನುಡಿದರು.
ತಹಶೀಲ್ದಾರ್ ಕಚೇರಿ ಎದುರಿಗಿರುವ ಶ್ರೀ ಗಂಗಾಧರೇಶ್ವರ ಗ್ರಾಮೀಣಾಭಿವೃದ್ಧಿ ವಿದ್ಯಾವರ್ಧಕ ಸಂಘದ ಶ್ರೀಮಹಾಲಕ್ಷ್ಮೀ ಮಹಿಳಾ ಕಲಾ ಮತ್ತು ವಾಣಿಜ್ಯ ಪದವಿ ಮಹಾ ವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ವಾರ್ಷಿಕ ಸ್ನೇಹ ಸಮ್ಮೇಳನ, ಸಾಧಕರ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಉಪನ್ಯಾಸಕರ ಮಾರ್ಗದರ್ಶನದಲ್ಲಿ ಮುನ್ನಡೆದರೆ ಯಶಸ್ಸು ಕಾಣಲು ಸಾಧ್ಯ. ವಿದ್ಯಾರ್ಥಿ ಜೀವನ ಸುಂದರ ಹಾಗೂ ಮೌಲ್ಯಭರಿತವಾಗಿರುತ್ತದೆ. ಇಂತಹ ಮೌಲ್ಯಯುತ ಜೀವನವನ್ನು ಸರಿಯಾಗಿ ಅನುಭವಿಸಿ ನಿಮ್ಮ ಬಗ್ಗೆ ಕನಸು ಕಟ್ಟಿಕೊಂಡಿರುವ ತಂದೆ-ತಾಯಿಗೆ ಹೆಸರು ತನ್ನಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಮಾಜಿ ಸದಸ್ಯ ಬಸವರಾಜ ಪಾಟೀಲ ನರಿಬೋಳ, ಸೋಲನ್ನು ಮೆಟ್ಟಿ ನಿಂತು ಯಶಸ್ಸನ್ನು ಗಳಿಸುವ ಸಂಕಲ್ಪ ಕೈಗೊಂಡಾಗ ಮಾತ್ರ ಸಾಧನೆ ಸಾಧ್ಯ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಡಾ.ಧರ್ಮಣ್ಣ ಬಡಿಗೇರ ಅಧ್ಯಕ್ಷತೆ, ಸಂಸ್ಥೆ ಅಧ್ಯಕ್ಷೆ ಮಂಜುಳಾ ಬಡಿಗೇರ ನೇತೃತ್ವ ವಹಿಸಿದ್ದರು. ಪಿಎಸ್‌ಐ ಸಂಗಮೇಶ ಅಂಗಡಿ, ಪ್ರಾಚಾರ್ಯರಾದ ವೆಂಕಟರಾವ ಮುಜುಮದಾರ, ಅಮೀನಪ್ಪ ಹೊಸಮನಿ, ಶ್ರೀಶೈಲ ಖಣದಾಳ, ಸಂಜುಕುಮಾರ ಪವಾರ, ಈಶ್ವರ ಹಿಪ್ಪರಗಿ, ಕುಮಾರಿ ಶೃತಿ, ನಿಂಗಮ್ಮ ಹಳಿಮನಿ, ಸೈದಪ್ಪ ಇಜೇರಿ, ಶ್ರೀಹರಿ ಕರಕಿಹಳ್ಳಿ ಆಗಮಿಸಿದ್ದರು.
ಪುರಸಭೆ ಉಪಾಧ್ಯಕ್ಷ ಗುರುಶಾಂತಯ್ಯ ಹಿರೇಮಠ, ಜಿಪಂ ಮಾಜಿ ಸದಸ್ಯ ಚಂದ್ರಶೇಖರ ಹರನಾಳ, ತಾಪಂ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ ಆಂದೋಲಾ, ಶಂಕರ ಕಟ್ಟಿಸಂಗಾವಿ ಅವರಿಗೆ ಸಮಾಜ ಸೇವಾ ರತ್ನ, ಉಪನ್ಯಾಸಕ ಗೋವಿಂದರಾಜ ಆಲ್ದಾಳ, ಪ್ರಾಚಾರ್ಯ ಮಹ್ಮದ್ ಅಲ್ಲಾವುದ್ದೀನ್ ಸಾಗರ, ಶಿಕ್ಷಕ ಎಸ್.ಕೆ.ಬಿರಾದಾರ ಅವರಿಗೆ ಶಿಕ್ಷಣ ಸೇವಾ ರತ್ನ, ಮೋನಪ್ಪ ಬಡಿಗೇರ ಇಜೇರಿ ಅವರಿಗೆ ರೈತ ರತ್ನ, ಪತ್ರಕರ್ತ ಪ್ರಕಾಶ ಆಲಬಾಳ ಅವರಿಗೆ ಮಾಧ್ಯಮ ರತ್ನ, ಭೀಮರಾಯ ಭಜಂತ್ರಿ, ಮಲ್ಲೇಶಿ ಭಜಂತ್ರಿ ಅವರಿಗೆ ಸಂಗೀತ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.