Advertisement

ವಾರ್‌ ರೂಮ್‌ ಸ್ಥಾಪನೆ

11:17 AM Mar 20, 2020 | Suhan S |

ಬೆಂಗಳೂರು: ನಗರದಲ್ಲಿ ಕೋವಿಡ್ 19 ಮುಂಜಾಗ್ರತಾ ಕ್ರಮವಾಗಿ ಪಾಲಿಕೆ ” ಕೋವಿಡ್ 19  ವಾರ್‌ ರೂಮ್‌’ ತಂಡ ರಚನೆ ಮಾಡಿದೆ ಎಂದು ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ತಿಳಿಸಿದರು.

Advertisement

ಈ ಸಂಬಂಧ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಆಯುಕ್ತರು, ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಈ ತಂಡ ಕಾರ್ಯನಿರ್ವಹಿಸಲಿದ್ದು, ಪಾಲಿಕೆ ವ್ಯಾಪ್ತಿ ದಾಖಲಾಗುತ್ತಿರುವ ಕೋವಿಡ್ 19 ಪ್ರಕರಣಗಳನ್ನು ರಿಜಿಸ್ಟರ್‌ ಮಾಡಿಕೊಳ್ಳಲಿದೆ. ಕೋವಿಡ್ 19  ಪ್ರಕರಣ ದೃಢಪಟ್ಟ ಪ್ರದೇಶಗಳ ಬಫ‌ರ್‌ ಜೋನ್‌ಗಳಲ್ಲಿನ ಮನೆಗಳ ನಕ್ಷೆ ತಯಾರಿಸುವುದು ಮತ್ತು ಜನಸಂಖ್ಯೆ ಪಟ್ಟಿ ಸಿದ್ಧಪಡಿಸಿಕೊಂಡು, ಜಾಗೃತಿ ಮೂಡಿಸಲಿದೆ. ಬೆಂಗಳೂರು ಸ್ಮಾರ್ಟ್‌ಸಿಟಿ ಲಿ. ವ್ಯವಸ್ಥಾಪಕ ನಿರ್ದೇಶಕಿ ಹೆಪ್ಸಿ ಬಾರಾಣಿ ಕೊರ್ಲಪಾಟಿ ಅವರು ಇದರ ಮೇಲ್ವಿಚಾರಣೆ ಮಾಡಲಿದ್ದಾರೆ ಎಂದರು.

ಈ ತಂಡದ ಒಳನಿರ್ವಹಣೆಗೆ ಡಾ. ವೆಂಕಟೇಶ್‌ ಹಾಗೂ ಬಫ‌ರ್‌ಜೋನ್‌ ಭಾಗದಲ್ಲಿ ಬಿಬಿಎಂಪಿ ಜಂಟಿ ಆಯುಕ್ತ ಹಣಕಾಸು ವೆಂಕಟೇಶ್‌ ಕೆಲಸ ಮಾಡಲಿದ್ದಾರೆ. ಸಹಾಯಕರಾಗಿ ಡಾ. ಮಧು ಸೂದನ್‌ ಅವರನ್ನು ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಪಾಲಿಕೆ ತಜ್ಞ ವೈದ್ಯರ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚನೆ ಮಾಡಿಕೊಂಡಿದೆ. ಮುನ್ನೆಚ್ಚರಿಕೆ, ಸೋಂಕಿತರ ಚಿಕಿತ್ಸೆ, ಸಿಬ್ಬಂದಿಗೆ ತರಬೇತಿ, ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ತಂಡ ರಚನೆ ಮಾಡಿ ಕೊಳ್ಳುತ್ತಿದ್ದೇವೆ. ಬಿಬಿಎಂಪಿ ಕಚೇರಿಯಲ್ಲಿ ಸಭೆ, ಕಚೇರಿಗಳ ಸ್ವತ್ಛತೆ ಹಾಗೂ ಸ್ಯಾನಿಟೈಸರ್‌ ಮತ್ತು ನೆಲ ಸ್ವತ್ಛಗೊಳಿಸುವ ನಿಟ್ಟಿನಲ್ಲಿ ಡಾ. ಶೋಭಾ ಅವರು ನಿರ್ವಹಿಸಲಿದ್ದಾರೆ ಎಂದು ಹೇಳಿದರು.

ಪ್ರತಿಯೊಂದು ತಂಡ ಒಬ್ಬ ತಜ್ಞ ವೈದ್ಯರ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ತಂಬಾಕು ಮುಕ್ತ ಆಂದೋಲನ, ಎಚ್‌ಐವಿ ಸೇರಿದಂತೆ ವಿವಿಧ ವಿಚಾರಗಳ ಜಾಗೃತಿ ಮೂಡಿಸುತ್ತಿರುವ ವೈದ್ಯರ ಸೇರ್ಪಡೆ ಮಾಡಲಾಗಿದೆ.

ವಲಯಕ್ಕೊಂದು ಕ್ಷಿಪ್ರ ಸ್ಪಂದನಾ ತಂಡ ಟೀಂ: ಎಂಟು ವಲಯಗಳಿಗೆ ಒಂದರಂತೆ ಕ್ಷಿಪ್ರ ಸ್ಪಂದನಾ ತಂಡ ರೆಸ್ಪಾನ್ಸ್‌ ಟೀಂ (ರಚನೆ ಮಾಡಲಾಗುವುದು. ಈ ತಂಡ ಆಯಾ ವಲಯದ ಆರೋಗ್ಯಾಧಿಕಾರಿ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದೆ. ಈ ತಂಡ ತಮ್ಮ ವಲಯದಲ್ಲಿ ಕೋವಿಡ್ 19 ಸೋಂಕು ಪ್ರಕರಣ ದೃಢಪಟ್ಟರೆ ಆ ಪ್ರದೇಶದ ಮೂರು ಕಿ.ಮೀ ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಪರೀಕ್ಷೆ ನಡೆಸಲಿದ್ದಾರೆ. 14 ದಿನ ಎಲ್ಲ ಕುಟುಂಬ ಸದಸ್ಯರ ಮೇಲೆ ನಿಗಾ ವಹಿಸಲಿದೆ.

Advertisement

 ನಾಲ್ಕು ತಂಡಗಳ ಕರ್ತವ್ಯ :

1.ಕಣ್ಗಾವಲು ಪಡೆ (ಸರ್ವೇಲೆನ್ಸ್‌ ಟೀಂ) :  ಕೋವಿಡ್ 19 ಸೋಂಕು ಪತ್ತೆಯಾದ ವ್ಯಕ್ತಿಯ ಪ್ರಾಥಮಿಕ ಹಾಗೂ ಪರೋಕ್ಷ ಸಂಪರ್ಕ ಪತ್ತೆ ಮಾಡುವುದು. ಸೋಂಕಿತ ವ್ಯಕ್ತಿ ಯಾವ ಹೋಟೆಲ್‌, ಕಚೇರಿಗೆ ಭೇಟಿ ನೀಡಿದ್ದಾನೆಯೇ , ಯಾವ ವಾಹನದಲ್ಲಿ ಪ್ರಯಾಣಿಸಿದ್ದಾನೆ,ಯಾವಾಗ ನಗರಕ್ಕೆ ಬಂದರು ಎಂಬ ಮಾಹಿತಿ ಸಂಗ್ರಹ.

2.ಕಂಟೈನ್ಮೆಂಟ್‌ ಟೀಂ: ಕಂಟೈನ್ಮೆಂಟ್‌ ಟೀಂ (ಅಪಾಯಕಾರಿ ಸನ್ನಿವೇಶ ನಿಭಾಯಿಸುವ ತಂಡ) ಪಾಲಿಕೆಯ ಎಂಟು ವಲಯದಲ್ಲಿ ರಚನೆ ಮಾಡಿ ರ್ಯಾಪಿಡ್‌ ರೆಸ್ಪಾನ್ಸ್‌ ಟೀಂಗಳೊಂದಿಗೆ ಸಮನ್ವಯದೊಂದಿಗೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸಲಿದೆ. ಈ ತಂಡ ವಲಯದ ರ್ಯಾಪಿಡ್‌ ರೆಸ್ಪಾನ್ಸ್‌ ಟೀಂಗೆ ಸೂಚನೆ ನೀಡಲಿದೆ. ಸೋಂಕು ಕಾಣಿಸಿಕೊಂಡವರ ಚಿಕಿತ್ಸೆ, ಆ ಪ್ರದೇಶದಲ್ಲಿ ಬಗ್ಗೆ ನಿಗಾವಹಿಸುವ ಕೆಲಸ ಮಾಡಲಿದ್ದು, ಡಾ. ಸುರೇಶ್‌ ಇದರ ನೇತೃತ್ವ .

3. ಮಾಹಿತಿ ಮತ್ತು ವಿದ್ಯುನ್ಮಾನ ಕೋಶ: ದೃಢಪಟ್ಟ ಕೋವಿಡ್ 19  ಪ್ರಕರಣಗಳ ಬಗ್ಗೆ ಮಾಧ್ಯಮಗಳಿಗೆ ಕಾಲಕಾಲಕ್ಕೆ ಮಾಹಿತಿ ನೀಡುವುದು, ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ, ಸುಳ್ಳು ವದಂತಿ ಕಡಿವಾಣ, ಬಿಬಿಎಂಪಿ ಹಾಗೂ ಸರ್ಕಾರದ ಸಲಹೆ ಸೂಚನೆಗಳನ್ನು ಸಾರ್ವಜನಿಕರಿಗೆ ಮುಟ್ಟಿಸುವುದು.

  1. ತರಬೇತಿ ತಂಡ: ಕೋವಿಡ್ 19 ಸೋಂಕಿತರಿಗೆ ಹೇಗೆ ಚಿಕಿತ್ಸೆ ನೀಡಬೇಕು. ಚಿಕಿತ್ಸೆ ನೀಡುವ ಮುನ್ನ ವೈದ್ಯರು ಮತ್ತು ನರ್ಸ್‌ಗಳು ತೆಗೆದುಕೊಳ್ಳಬೇಕಾಗಿರುವ ಮುನ್ನೆಚ್ಚರಿಕೆ ಕ್ರಮಗಳು ಕುರಿತು ಈ ತಂಡ ತರಬೇತಿ ನೀಡಲಿದೆ. ಡಾ. ಕಲಾವತಿ ಅವರಿಗೆ ಇದರ ಜವಾಬ್ದಾರಿ

10 ಸಾವಿರ ವಿದ್ಯಾರ್ಥಿ ನರ್ಸ್‌ ಪಡೆಗೆ ಸಿದ್ಧತೆ: ಮುಂದಿನ ದಿನಗಳಲ್ಲಿ ವೈರಸ್‌ನಿಂದ ಎದುರಾಗಬಹುದಾದ ಅನಾಹುತ ತಪ್ಪಿಸಲು ಪಾಲಿಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಆರೋಗ್ಯ ವಿಭಾಗ ನಗರದ ವಿವಿಧ ನರ್ಸಿಂಗ್‌ ಕಾಲೇಜಿನ ವಿದ್ಯಾರ್ಥಿಗಳನ್ನು ಕೋವಿಡ್ 19  ಚಿಕಿತ್ಸೆಗೆ ಬಳಕೆಗೆ ತಯಾರಿ ಮಾಡಿಕೊಳ್ಳಲಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೂ ಕೋವಿಡ್ 19 ಮುಂಜಾಗ್ರತೆಯ ಬಗ್ಗೆ ತರಬೇತಿ ನೀಡಲು ಡಾ.ಸತಿ ಮತ್ತು ಪಾಟಿಲ್‌ ಅವರನ್ನು ನೇಮಕ ಮಾಡಲಾಗಿದೆ ಎಂದು ಆಯುಕ್ತರು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next