ಬೀದರ: ಜಿಲ್ಲೆಯ ಜನರ ಬಹು ನಿರೀಕ್ಷಿತ ಕೇಂದ್ರೀಯ ಪೆಟ್ರೋಕೆಮಿಕಲ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಶಿಕ್ಷಣ ಕೇಂದ್ರ(ಸಿಪೆಟ್) ಸ್ಥಾಪನೆ ಕನಸು ನನಸಾಗುವ ಕಾಲ ಸನ್ನಿಹಿತವಾಗಿದ್ದು, ಅ.18ರಂದು ಔರಾದ ತಾಲೂಕಿನ ಬಲ್ಲೂರ್ ಬಳಿ ಸಿಎಂ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಮೂಲಕ ಗಡಿ ನಾಡಿನಲ್ಲಿ ಶೈಕ್ಷಣಿಕ, ಔದ್ಯೋಗಿಕ ಬೆಳವಣಿಗೆಗೆ ಪೂರಕವಾಗಬಲ್ಲ ಯೋಜನೆ ಜಾರಿಗೆ ವೇಗ ಸಿಕ್ಕಂತಾಗಿದೆ.
ಜನ ಸಂಕಲ್ಪ ಯಾತ್ರೆ ಹಿನ್ನೆಲೆ ಅ.18ರಂದು ಜಿಲ್ಲೆಯ ಪ್ರವಾಸ ಕೈಗೊಂಡಿರುವ ಸಿಎಂ ಬೊಮ್ಮಾಯಿ ಅವರು ಮಹತ್ವಕಾಂಕ್ಷಿ ಸಿಪೆಟ್ ಯೋಜನೆಗೆ ಭೂಮಿಪೂಜೆ ನೆರವೇರಿಸಲಿದ್ದು, ಡಿಸಿ ಗೋವಿಂದರೆಡ್ಡಿ ಮತ್ತು ಎಸ್‌ಪಿ ಕಿಶೋರ ಬಾಬು ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆಗೆ ಸಜ್ಜಾಗಿದ್ದಾರೆ.
ಕೇಂದ್ರ ಸಚಿವರಾಗಿದ್ದ ದಿ. ಅನಂತಕುಮಾರ ಬೀದರಗೆ ಘೋಷಿಸಿದ್ದ ಐಐಟಿ ಮಾದರಿ ಸಿಪೆಟ್ ಕೇಂದ್ರ ಹುಬ್ಬಳ್ಳಿಗೆ ಸ್ಥಳಾಂತರ ಯತ್ನ ನಡೆದಿದ್ದವು. ಆದರೆ ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಸಚಿವ ಭಗವಂತ ಖೂಬಾ ನೇಮಕವಾಗುತ್ತಿದ್ದಂತೆ ಪ್ರತಿಷ್ಠಿತ ಸಿಪೆಟ್ ಕೇಂದ್ರವನ್ನು ತವರು ಜಿಲ್ಲೆಯಲ್ಲಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ಕಾರ್ಯಕ್ಕೆ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಸಾಥ್ ನೀಡಿದ್ದರು.
ಪ್ಲಾಸ್ಟಿಕ್-ಪಾಲಿಮರ್ ಉದ್ಯಮಕ್ಕೆ ಅವಶ್ಯವಾದ ವೃತ್ತಿ ಕೌಶಲ ತರಬೇತಿ ಒದಗಿಸುವುದು ಸಿಪೆಟ್ ಸಂಸ್ಥೆಯ ಉದ್ದೇಶ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಶೇ.50 (90 ಕೋಟಿ ರೂ.) ಅಂದಾಜು ವೆಚ್ಚದಲ್ಲಿ ಸ್ಥಾಪನೆಯಾಗುವ ಸಿಪೆಟ್ ಕೇಂದ್ರಕ್ಕೆ ಒಟ್ಟು 10 ಎಕರೆ ಜಮೀನು ಅಗತ್ಯವಿದ್ದು, ಈ ಕೇಂದ್ರದಲ್ಲಿ ಸುಮಾರು 8300 ಚದರ ಅಡಿಯಲ್ಲಿ ಕಾಲೇಜು ಕಟ್ಟಡ, ಲ್ಯಾಬೋರೊಟರಿಸ್, ಸಿಬ್ಬಂದಿಗಳ ವಸತಿ ಗೃಹ, 3600 ಚದರ ಅಡಿಯಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಸತಿ ಗೃಹ ನಿರ್ಮಿಸುವ ಯೋಜನೆ ರೂಪಿಸಲಾಗಿದೆ.
ಕಳೆದ ಮಾರ್ಚ್‌ನಲ್ಲಿ ಸಿಪೆಟ್‌ನ ಮಹಾನಿರ್ದೇಶಕ ಶಿಶಿರ್ ಸಿನ್ಹಾ ನೇತೃತ್ವದ ಅಧಿಕಾರಿಗಳ ತಂಡ ಸಿಪೆಟ್ ಕೇಂದ್ರಕ್ಕಾಗಿ ಬೀದರ- ಔರಾದ ರಾಷ್ಟ್ರೀಯ ಹೆದ್ದಾರಿಯ ಬಲ್ಲೂರ ಗ್ರಾಮದ ಬಳಿ ಗುರುತಿಸಿದ್ದ 10 ಎಕರೆ ಜಮೀನು ಪರಿಶೀಲಿಸಿ ಒಪ್ಪಿಗೆ ಸೂಚಿಸಿದ್ದು, ಜಿಲ್ಲಾಧಿಕಾರಿಗಳು ಕೇಂದ್ರಕ್ಕಾಗಿ ಭೂಮಿ ಮಂಜೂರು ಮಾಡಿ ಆದೇಶಿಸಿದ್ದರು. ಜತೆಗೆ ಪ್ರಸಕ್ತ ಬಜೆಟ್‌ನಲ್ಲಿ ಕೇಂದ್ರದ ಸಹಯೋಗದಲ್ಲಿ 90 ಕೋಟಿ ರೂ. ವೆಚ್ಚದಲ್ಲಿ “ಸಿಪೆಟ್’ ಆರಂಭಿಸುವ ಕುರಿತು ಸಿಎಂ ಘೋಷಿಸಿದ್ದರು.
ಇನ್ನು ಸಿಪೆಟ್ ಕೇಂದ್ರವನ್ನು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಆರಂಭಿಸಲು ಕೇಂದ್ರದ ರಸಗೊಬ್ಬರ ಮತ್ತು ರಾಸಾಯನಿಕ ಸಚಿವಾಲಯ ಚಿಂತನೆ ನಡೆಸಿದ್ದು, ಸದ್ಯ ಭಾಲ್ಕಿ ತಾಲೂಕಿನ ಹಾಲಹಳ್ಳಿಯ ಗುಲ್ಬರ್ಗಾ ವಿವಿಯ ಸ್ನಾತಕೋತ್ತರ ಕೇಂದ್ರದ ಕಟ್ಟಡದಲ್ಲಿ ಚಟುವಟಿಕೆ ನಡೆಸಲು ತೀರ್ಮಾನಿಸಿದೆ. ಸಿಪೆಟ್ ಸಂಸ್ಥೆಯ ಹಿರಿಯ ಅಧಿಕಾರಿಗಳ ತಂಡ ಈ ಸ್ಥಳವನ್ನು ಸಹ ಈಗಾಗಲೇ ಪರಿಶೀಲನೆ ನಡೆಸಿದೆ.
ರಾಜ್ಯದ 2ನೇ ಸಿಪೆಟ್ ಕೇಂದ್ರ
ಕೇಂದ್ರ ಸರ್ಕಾರದ ಅಂಗ ಸಂಸ್ಥೆಯಾದ ಸಿಪೆಟ್ ಮೂಲಕ ಪ್ಲಾಸ್ಟಿಕ್ ಆಧಾರಿತ ಕೋರ್ಸ್‌ಗಳನ್ನು ನೀಡಿ ಯುವಕರಲ್ಲಿ ವೃತ್ತಿ ಕೌಶಲ ಹೆಚ್ಚಿಸುವುದರ ಜತೆಗೆ ಸ್ವಾವಲಂಬಿಗಳನ್ನಾಗಿ ಮಾಡಲಾಗುತ್ತದೆ. ಪರಿಸರ ಸ್ನೇಹಿ ಮಾದರಿಯಲ್ಲಿ ತ್ಯಾಜ್ಯ ಸಂಸ್ಕರಿಸುವ ಮತ್ತು ಮರು ಬಳಸುವ ಕೌಶಲ್ಯ ತರಬೇತಿ ನೀಡಲಾಗುತ್ತದೆ. ಉದ್ಯಮ ಸ್ಥಾಪಿಸಿ, ಹೇಗೆ ಉದ್ಯೋಗ ಸೃಷ್ಟಿ ಮಾಡಬೇಕೆಂಬುದನ್ನು ಕಲಿಸಿ ಕೊಡಲಿದೆ ಸಿಪೆಟ್. ಈ ಕೇಂದ್ರದಿಂದ ಪ್ರತಿವರ್ಷ ಸುಮಾರು 2000 ಯುವಕರಿಗೆ ಉದ್ಯೋಗ ಆಧಾರಿತ ತರಬೇತಿ ನೀಡಲಾಗುತ್ತದೆ. ರಾಜ್ಯದ ಮೈಸೂರು ಸೇರಿ ದೇಶದಲ್ಲಿ 40 ಸಂಸ್ಥೆಗಳಿದ್ದು, ಬೀದರ ರಾಜ್ಯದ ಎರಡನೇ ಸಂಸ್ಥೆಯಾಗಲಿದೆ.
*ಶಶಿಕಾಂತ ಬಂಬುಳಗೆ