ಪಾಂಡವಪುರ: ಗ್ರಾಮೀಣ ಪ್ರದೇಶದ ಜನರಿಗೆ ಸರ್ಕಾರದ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಪ್ರತಿ ಗ್ರಾಪಂ ಕಚೇರಿಯಲ್ಲಿ ರಾಜೀವ್‌ಗಾಂಧಿ ಸೇವಾ ಕೇಂದ್ರವನ್ನು ಸ್ಥಾಪಿಸಿದೆ. ಸಾರ್ವಜನಿಕರು ಇದರ ಅನುಕೂಲವನ್ನು ಪಡೆದುಕೊಳ್ಳಬೇಕು ಎಂದು ಜಿಪಂ ಸದಸ್ಯ ಸಿ.ಅಶೋಕ್ ಹೇಳಿದರು.
ತಾಲೂಕಿನ ಹೊನಗಾನಹಳ್ಳಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸಲಾಗಿರುವ ರಾಜೀವ್‌ಗಾಂಧಿ ಸೇವಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಶಾಸಕರು ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ.
ಇದೀಗ ಗ್ರಾಮದ ರಸ್ತೆ ಅಭಿವೃದ್ಧಿಗೆ ಸುಮಾರು 1.50 ಕೋಟಿ ರೂ. ಅನುದಾನ ನೀಡಿದ್ದಾರೆ. ಅಭಿವೃದ್ಧಿ ಕಾರ್ಯಕ್ಕೆ ಸಾಮಗ್ರಿಗಳ ಕೊರತೆ ಹಾಗೂ ಲಾಕ್‌ಡೌನ್‌ನಿಂದ ಕೆಲಸ ಆರಂಭಿಸಲು ಸಾಧ್ಯ ವಾಗಿಲ್ಲ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು. ಉಪವಿಭಾಗಾಧಿಕಾರಿ ವಿ.ಆರ್.ಶೈಲಜಾ ಮಾತನಾಡಿ, ನರೇಗಾ ಯೋಜನೆಯಿಂದ ಅಭಿವೃದ್ಧಿ ಕೆಲಸ ಮಾಡಿಕೊಳ್ಳಬಹುದಾಗಿದೆ.
ಈ ಯೋಜನೆಯಿಂದ ಸಮುದಾಯದ ಹಾಗೂ ವೈಯಕ್ತಿಕವಾದ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಬಹುದು. ಪ್ರತಿ ಗ್ರಾಪಂನಿಂದ ತ್ಯಾಜ್ಯ ವಿಲೇವಾರಿಗಾಗಿ ಕಸದ ಬುಟ್ಟಿ ವಿತರಣೆ ಮಾಡುತ್ತಿದ್ದಾರೆ. ಇವುಗಳನ್ನು ಸದ್ಬಳಕೆ ಮಾಡಿಕೊಳ್ಳ ಬೇಕು. ಪ್ಲಾಸ್ಟಿಕ್ ಮುಕ್ತ ಸಮಾಜಕ್ಕಾಗಿ ಎಲ್ಲರು ಮುಂದಾಗಬೇಕು ಎಂದು ಮನವಿ ಮಾಡಿದರು.
ತಾಪಂ ಇಒ ಆರ್.ಪಿ.ಮಹೇಶ್, ತಹಶೀಲ್ದಾರ್ ಪ್ರಮೋದ್ ಎಲ್.ಪಾಟೀಲ್, ತಾಪಂ ಸದಸ್ಯ ಅಲ್ಪಳ್ಳಿ ಗೋವಿಂದಯ್ಯ, ಗ್ರಾಪಂ ಅಧ್ಯಕ್ಷ ಕೃಷ್ಣೇಗೌಡ, ಉಪಾಧ್ಯಕ್ಷ ರಾಜೇಗೌಡ, ಸದಸ್ಯರಾದ ಎಚ್.ಎಲ್. ಸ್ವಾಮೀಗೌಡ, ನರಸಿಂಹೇ ಗೌಡ, ಸಿದ್ದಲಿಂಗದೇವರು, ಪ್ರಭಾಮಣಿ, ಗೌರಮ್ಮ, ಮಹದೇವಮ್ಮ, ಮಂಗಳಮ್ಮ, ಸಿದ್ದಮ್ಮ, ವರಲಕ್ಷ್ಮಿ, ಪಿಡಿಒ ತಮ್ಮಣ್ಣಗೌಡ ಇದ್ದರು.