ವಿಜಯಪುರ: ಪದೇ ಪದೇ ನನ್ನ ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ನಮ್ಮದೇ ಪಕ್ಷದ ಶಾಸಕರಾದ ಎಂ.ಬಿ. ಪಾಟೀಲ ತಾವಿನ್ನೂ ಜಲ ಸಂಪನ್ಮೂಲ ಖಾತೆ ಸಚಿವರೆಂಬ ಭ್ರಮೆಯಲ್ಲಿದ್ದಾರೆ. ಅವರಿಗೆ ನಿಜಕ್ಕೂ ಬಿಜೆಪಿ ಸರ್ಕಾರದಲ್ಲಿ ಪ್ರಭಾವ ಬೀರುವ ಶಕ್ತಿ ಇದ್ದರೆ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಮಾಡಿಸಿ ಕೊಡಲಿ, ನಾನೇ ಅವರ ಪ್ರತಿಮೆ ಸ್ಥಾಪಿಸುತ್ತೇನೆ ಎಂದು ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಸವಾಲು ಹಾಕಿದ್ದಾರೆ.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಎಂ.ಬಿ. ಪಾಟೀಲ ಹೆಸರು ಪ್ರಸ್ತಾಪಿಸದೇ ವಾಗ್ಧಾಳಿ ನಡೆಸಿದ ಅವರು, ಮುಖ್ಯಮಂತ್ರಿ ಕಚೇರಿಯಿಂದ ನನ್ನ ಇಂಡಿ ಕ್ಷೇತ್ರದ ಕೆರೆ ತುಂಬುವ ಯೋಜನೆಗೆ ಅನುಮತಿ, ಅನುದಾನ ಸಿಗುವ ಮಾಹಿತಿ ಪಡೆದು ಸಭೆಗೆ ಮುನ್ನವೇ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಸಂಜೆ ವೇಳೆಗೆ ಸರ್ಕಾರ ಅನುದಾನ ಘೋಷಿಸುತ್ತಲೇ ತಮ್ಮಿಂದಲೇ ಆಯ್ತು ಎಂಬಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ನಾನು ಪ್ರತಿನಿಧಿಸುವ ಇಂಡಿ ತಾಲೂಕಿನ ಕೆರೆ ತುಂಬುವ ಯೋಜನೆಗೆ ಅನುದಾನ ಸಿಕ್ಕಿದೆ ಎಂಬಂತೆ ಸಾರ್ವಜನಿಕಾಗಿ ಬಿಂಬಿಸುತ್ತಿದ್ದಾರೆ.
ತಮ್ಮನ್ನು ತಾವು ಇನ್ನೂ ಜಲ ಸಂಪನ್ಮೂಲ ಸಚಿವರೆಂದೇ ಭಾವಿಸಿದ್ದು ಅಂಥ ಭ್ರಮೆಯಲ್ಲೇ ಜೀವಿಸುತ್ತಿದ್ದಾರೆ. ಅವರ ಹೇಳಿಕೆ ರಾಜಕೀಯ ಸಣ್ಣತನದ ಪ್ರತೀಕ ಎಂದು ಕಿಡಿಕಾರಿದರು. ಬಿಜೆಪಿ ವಕ್ತಾರರಂತೆ ವರ್ತಿಸುತ್ತಿರುವ ಬಬಲೇಶ್ವರ ಶಾಸಕರು ಸ್ವಪಕ್ಷೀಯ ಕಾಂಗ್ರೆಸ್ ಶಾಸಕರು. ನಾವೆಲ್ಲ ವಿಕ್ಷದಲ್ಲಿದ್ದೇವೆ ಎಂಬುದನ್ನು ಮರೆತು, ತಾವಿನ್ನೂ ಸಚಿರಾಗಿದ್ದೇವೆ ಎಂಬಂತೆ ವರ್ತಿಸುತ್ತಿದ್ದಾರೆ. ಇವರ ವರ್ತನೆ ವಿರುದ್ಧ ಪಕ್ಷದ ನಾಯಕರಿಗೆ ದೂರು ನೀಡಿದ್ದೇನೆ. ಪದೇ ಪದೇ ಅವರು ನನ್ನ ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಲೇ ಇದ್ದಾರೆ. ಕಳೆದ ಮೂರು ದಶಕಗಳಿಂದ ರಾಜಕೀಯದಲ್ಲಿರುವ ನನಗೂ ರಾಜಕೀಯ ಮಾಡುವುದು ಗೊತ್ತಿದೆ. ರಾಜಕೀಯವಾಗಿ ನಾವೆಲ್ಲ ಪ್ರಬುದ್ಧರಾಗಬೇಕಾದ ಸಂದರ್ಭದಲ್ಲಿ ಕೀಳು ಮಟ್ಟದ ಪ್ರಚಾರದ ವರ್ತನೆ ತೋರುತ್ತಿದ್ದಾರೆ. ನನ್ನ ತಾಳ್ಮೆ ಹಾಗೂ ಸಹನೆಯನ್ನು ಪರೀಕ್ಷಿಸುವ ಕೆಲಸ ಮುಂದುವರಿಸಿದರೆ ನಾನೂ ನನ್ನ ವರಸೆ ತೋರಿಸಲು ಸಿದ್ಧ ಎಂದೂ ಗುಡುಗಿದ್ದಾರೆ.
ತಮ್ಮಿಂದಲೇ ನನ್ನ ಕ್ಷೇತ್ರದ ನೀರಾವರಿ ಸೌಲಭ್ಯ ಆಯ್ತು ಎಂದಾದರೆ, ತಮ್ಮದೇ ಸಂಸ್ಥೆಯಿಂದ ಡಾ| ಫ.ಗು. ಹಳಕಟ್ಟಿ ಸಂಸ್ಥೆ ಕುರಿತಾಗಿ ಸಲ್ಲಿಸಿದ ಬೇಡಿಕೆಯನ್ನು ಈಡೇರಿಸಿಕೊಳ್ಳುವಲ್ಲಿ ಏಕೆ ಸಾಧ್ಯವಾಗಲಿಲ್ಲ. ನಾನು ಅಸಾಧ್ಯ ಎಂಬುದನ್ನು ಸಾಧ್ಯವಾಗಿಸಿ ತೋರಿಸಿದ ಛಲಗಾರ. ಕ್ಷೇತ್ರದ ಜನರು ನನ್ನನ್ನು ತಮ್ಮ ಸೇವೆಗೆ ಆಯ್ಕೆ ಮಾಡಿಕೊಂಡಿದ್ದು, ಅವರ ಆಶಯಕ್ಕೆ ತಕ್ಕಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಂಕಣ ತೊಟ್ಟಿದ್ದೇನೆ. ಒಂದೊಮ್ಮೆ ಇವರಿಗೆ ನಿಜಕ್ಕೂ ಬಿಜೆಪಿ ಸರ್ಕಾರದಲ್ಲಿ ತಮ್ಮ ಪ್ರಭಾವ ಬೀರಿ ಯೋಜನೆ ಮಂಜೂರು ಮಾಡಿಸುವ ಶಕ್ತಿ ಇದ್ದರೆ ರೇವಣಸಿದ್ದೇಶರ ಏತ ನೀರಾವರಿ ಯೋಜನೆಗೆ ಅನುದಾನ ತಂದು ತೋರಿಸಲಿ. ಆಗ ನಾನೇ ಹೆದ್ದಾರಿ ಪಕ್ಕದಲ್ಲಿ ಅವರ ಪ್ರತಿಮೆ ಸ್ಥಾಪಿಸುತ್ತೇನೆ. ಇಲ್ಲವೇ ತಮ್ಮದೇ ಕ್ಷೇತ್ರದಲ್ಲಿ ನನ್ನಂತೆ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿ ತೋರಿಸಲಿ. ಅವರಂತೆ ನಾನು ಬಬಲೇಶ್ವರ ಕ್ಷೇತ್ರದಲ್ಲಿ ಕೈಹಾಕಿದರೆ ಏನಾದೀತು ಎಂಬುದನ್ನು ಅರಿತು ವರ್ತಿಸಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲೆಯ ನೀರಾವರಿ ಯೋಜನೆಗಳ ವಿಷಯದಲ್ಲಿ ರಾಜಾರಾಮ ದುದೆ, ಸುಂಗದಿ ಮುರಿಗೆಪ್ಪ ಅವರಂಥ ಹಲವು ನಾಯಕರ ಪರಿಶ್ರಮದಿಂದ ಜನ್ಮತಳೆದ ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಸ್ತು ಎಂದು, ಚಾಲನೆ ನೀಡಿದ್ದು ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ ಅವರು. ಆದರೆ ನಮ್ಮ ಪಕ್ಷದ ಶಾಸಕರು ಇಡಿ ಯೋಜನೆ ತಮ್ಮಿಂದಲೇ ಆಗಿದೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯನ್ನು ಎಲ್ಲ ಶಾಸಕರು, ಜನಪ್ರತಿನಿಧಿಗಳು ಇವರಿಗೇನು ಗುತ್ತಿಗೆ ನೀಡಿದ್ದೇವೆಯೇ ಎಂದು ಕಿಡಿ ಕಾರಿದರು.