ಬೆಂಗಳೂರು: ರಾಜ್ಯದಲ್ಲಿ ವ್ಯವಸ್ಥಿತ, ಕಾನೂನು ಬದ್ಧ ಗಣಿಗಾರಿಕೆ, ಪರವಾನಿಗೆ, ತರಬೇತಿಗಾಗಿ ಜಾರ್ಖಂಡ್ ಮಾದರಿಯಲ್ಲಿ ಗಣಿ ವಿಶ್ವವಿದ್ಯಾಲಯ ರಚನೆ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದು ಗಣಿ ಹಾಗೂ ಭೂ ವಿಜ್ಞಾನ ಸಚಿವ ಮುರುರೇಶ್ ನಿರಾಣಿ ತಿಳಿಸಿದರು.
ನಿಯಮ 68ರ ಅಡಿಯಲ್ಲಿ ಪ್ರತಿಪಕ್ಷದ ನಾಯಕರು ಪ್ರಸ್ತಾಪಿಸಿದ್ದ ಶಿವಮೊಗ್ಗ ಸ್ಫೋಟಕದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ವತಿಯಿಂದ ಉತ್ತರ ನೀಡಿದ ಅವರು, ಗಣಿಗಾರಿಕೆಯಲ್ಲಿ ಬಹುತೇಕರು ಅನಕ್ಷರಸ್ಥರಿದ್ದಾರೆ. ಗಣಿಗಾರಿಕೆ, ಗಣಿ ಪರವಾನಿಗೆ, ನವೀಕರಣ ಸೇರಿದಂತೆ ಅನೇಕ ಅಂಶಗಳ ಕುರಿತಾದ ವೈಜ್ಞಾನಿಕ ಮಾಹಿತಿ ಅವರಲ್ಲಿಲ್ಲ. ಹೀಗಾಗಿ ವೈಜ್ಞಾನಿಕ, ಕಾನೂನಾತ್ಮಕವಾಗಿ ಗಣಿಗಾರಿಕೆ ನಡೆಸುವ, ಗಣಿ ಕಾರ್ಮಿಕರಿಗೆ ತರಬೇತಿ ನೀಡಲು ಅನುಕೂಲ ಆಗುವಂತೆ ಜಾರ್ಖಂಡ್ ಮಾದರಿಯಲ್ಲಿ ಗಣಿ ವಿಶ್ವವಿದ್ಯಾಲಯ ಸ್ಥಾಪಿಸುವ ಕುರಿತಾಗಿ ಮುಖ್ಯಮಂತ್ರಿಯವರೊಂದಿಗೆ ಚರ್ಚೆ ಮಾಡಲಾಗಿದೆ ಎಂದರು.
ಖನಿಜ ಅಭಿವೃದ್ಧಿ ನಿಧಿ ಮತ್ತು ಗಣಿಗಳಿಂದ ಬರುವ ಬಡ್ಡಿ ಹಣವನ್ನು ಬಳಸಿ ಈ ವಿಶ್ವವಿದ್ಯಾಲಯ ನಿರ್ಮಿಸುವ ಆಲೋಚನೆಯನ್ನು ಹೊಂದಲಾಗಿದೆ. ಸರ್ಕಾರದ ಹಣವನ್ನು ಇದಕ್ಕೆ ಬಳಸುವುದಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ:ಚಿತ್ರದುರ್ಗ: ಎಸಿಎಫ್ ಶ್ರೀನಿವಾಸ್ ಮನೆ ಮೇಲೆ ಎಸಿಬಿ ದಾಳಿ: ನಗದು, ಚಿನ್ನಾಭರಣ ಜಪ್ತಿ
ಕಟ್ಟಡ ನಿರ್ಮಾಣ ಕಾರ್ಯಕ್ಕೆ ಮರಳು ಮತ್ತು ಜಲ್ಲಿ ಅವಶ್ಯಕವಾಗಿದೆ. ಕಾನೂನು ವ್ಯಾಪ್ತಿಯಲ್ಲಿ ಇವುಗಳ ಸಾಗಣೆಗೆ ಅನುಮತಿ ನೀಡಲಾಗುವುದು. ಗ್ರಾಮಗಳಲ್ಲಿನ ಹಳ್ಳಗಳಿಂದ ಮರಳನ್ನು ಬಂಡಿ ಮತ್ತು ಟ್ರ್ಯಾಕ್ಟರ್ ಗಳಲ್ಲಿ ಸಾಗಿಸಿದರೆ, ಆಯಾ ಗ್ರಾಮ ಪಂಚಾಯಿತಿ ಅಥವಾ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ನಿಗದಿ ಪಡಿಸಿರುವ ತೆರಿಗೆ ಮಾತ್ರ ವಿಧಿಸಲಾಗುತ್ತದೆ. ಟಿಪ್ಪರ್ ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮರಳು ಸಾಗಿಸಿದರೆ ದಂಡ ಮತ್ತು ರಾಜಸ್ವ ಸಂಗ್ರಹಿಸಲಾಗುವುದು ಎಂದರು.