Advertisement

ರಾಜ್ಯದಲ್ಲಿ ಭಾರತೀಯ ಕೌಶಲ್ಯ ಸಂಸ್ಥೆ ಸ್ಥಾಪನೆ

12:56 PM Feb 23, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ “ಭಾರತೀಯ ಕೌಶಲ್ಯ ಸಂಸ್ಥೆ’ (ಐಐಎಸ್‌) ಸ್ಥಾಪಿಸುವ ಚಿಂತನೆ ಇದ್ದು, ಈ ಕುರಿತ ಪ್ರಸ್ತಾವನೆ ಕೇಂದ್ರದ ಮುಂದಿದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್‌ ಹೆಗಡೆ ತಿಳಿಸಿದರು.

Advertisement

ನಗರದ ಅಪೆಕ್ಸ್‌ ಹೈ-ಟೆಕ್‌ ಸಂಸ್ಥೆಯಲ್ಲಿ ಗುರುವಾರ ಜೆಎಸ್‌ಎಸ್‌ನ ವಿವಿಧ ತರಬೇತಿ ಸಂಸ್ಥೆಗಳ ಆಡಳಿತ ಮಂಡಳಿಯೊಂದಿಗೆ ಹಮ್ಮಿಕೊಂಡಿದ್ದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿ, ಮುಂಬೈನಲ್ಲಿ ಟಾಟಾ ಗ್ರೂಪ್‌ ಸಹಯೋಗದಲ್ಲಿ ಭಾರತೀಯ ಕೌಶಲ್ಯ ಸಂಸ್ಥೆ ನಿರ್ಮಿಸಲು ಉದ್ದೇಶಿಸಲಾಗಿದೆ.

ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಖಾಸಗಿ ಸಹಭಾಗಿತ್ವದಲ್ಲಿ ಐಐಎಸ್‌ ಸ್ಥಾಪಿಸುವ ಪ್ರಸ್ತಾವನೆ ಇದೆ. ಇದಕ್ಕಾಗಿ ಅತ್ಯಂತ ಮುಂದುವರಿದ ಕೌಶಲ್ಯ ತರಬೇತಿ ನೀಡುವ ನುರಿತ ಸಂಸ್ಥೆಗಳ ಹುಡುಕಾಟ ನಡೆದಿದೆ. ಈ ಸಂಸ್ಥೆಯಿಂದ ಸೈಬರ್‌ ಸೆಕ್ಯುರಿಟಿ, ಇಂಡಸ್ಟ್ರಿಯಲ್‌ ಎಲೆಕ್ಟ್ರಾನಿಕ್ಸ್‌ ಆಂಡ್‌ ಅಟೋಮೇಷನ್‌, ಇಂಧನ ದಕ್ಷತೆ ಸೇರಿದಂತೆ ಹಲವು ಮುಂದುವರಿದ ಕೋರ್ಸ್‌ಗಳಿಗೆ ಸಂಬಂಧಿಸಿದ ತರಬೇತಿ ನೀಡಲಾಗುವುದು ಎಂದು ಹೇಳಿದರು. 

ಇದಲ್ಲದೆ, ಪ್ರಾದೇಶಿಕ ಕೌಶಲ್ಯಗಳ ವಿಶ್ಲೇಷಣೆ ಮಾಡಿ, ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ. ವರದಿ ಬಂದ ನಂತರ ಅದಕ್ಕೆ ಪೂರಕವಾದ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಅನಂತಕುಮಾರ್‌ ಹೆಗಡೆ ತಿಳಿಸಿದರು. 

ರಾಜ್ಯದಲ್ಲಿ ರೇಷ್ಮೆ ಸೇರಿದಂತೆ ಹತ್ತಾರು ಪ್ರಕಾರದ ಪ್ರಾದೇಶಿಕ ಕೌಶಲ್ಯಗಳಿವೆ. ನೇಕಾರರ ಸಂಖ್ಯೆ ಸಾಕಷ್ಟು ಕಡಿಮೆ ಆಗಿದೆ. ಆದರೆ, ಮಾರುಕಟ್ಟೆಯಲ್ಲಿ ಆ ನೇಕಾರರ ಉತ್ಪನ್ನಗಳಿಗೆ ಬೇಡಿಕೆ ಇದೆ. ಈ ಅಂತರವನ್ನು ಹೋಗಲಾಡಿಸಲು ಪ್ರಾದೇಶಿಕ ಕೌಶಲ್ಯಗಳ ಕುರಿತು ಅಧ್ಯಯನ ಮಾಡಿ, ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಆ ವರದಿ ಆಧರಿಸಿ ಆಯಾ ಪ್ರಾದೇಶಿಕ ಕೌಶಲ್ಯಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು. 

Advertisement

ಕೆಲಸ ಕಲ್ಪಿಸುವುದು ಮುಖ್ಯ: ನಮ್ಮಲ್ಲಿ ಸಾಕಷ್ಟು ತಂತ್ರಜ್ಞಾನವಿದೆ. ಆದರೆ, ಅದನ್ನು ಜನರ ಬಳಿ ತೆಗೆದುಕೊಂಡು ಹೋಗುವ ಕೆಲಸ ಆಗಬೇಕಿದೆ. ಈ ಪ್ರಕ್ರಿಯೇ ಕೌಶಲ್ಯಾಭಿವೃದ್ಧಿ. ತಂತ್ರಜ್ಞಾನ ಇನ್‌ಕುಬೇಷನ್‌ಗಿಂತ ಕೌಶಲ್ಯ ಇನ್‌ಕುಬೇಷನ್‌ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟ ಅವರು, ಇದುವರೆಗೆ ಎಷ್ಟು ಜನರಿಗೆ ಕೆಲಸ ನೀಡಿದ್ದೇವೆ ಎನ್ನುವುದಕ್ಕಿಂತ ಮುಂದೆ ಎಷ್ಟು ಜನರಿಗೆ ಉದ್ಯೋಗ ಕಲ್ಪಿಸಲಿದ್ದೇವೆ ಎನ್ನುವುದು ಮುಖ್ಯ. ನಮ್ಮ ಯೋಜನೆಗಳು ಈ ನಿಟ್ಟಿನಲ್ಲಿ ಇರಬೇಕು ಎಂದು ಸಲಹೆ ಮಾಡಿದರು.

ಬರೀ ಕೆಳಹಂತದ ಕೌಶಲ್ಯಗಳ ತರಬೇತಿಗೆ ಸೀಮಿತವಾಗದೆ, ಮುಂದುವರಿದ ಕೌಶಲ್ಯ ಕೋರ್ಸ್‌ಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ನ್ಯಾನೊ, ಸೈಬರ್‌ ಸೆಕ್ಯುರಿಟಿ ಸೇರಿದಂತೆ ಅನೇಕ ವಲಯಗಳು ಈಗಲೂ ನಿರ್ಲಕ್ಷ್ಯಕ್ಕೊಳಪಟ್ಟಿವೆ ಎಂದು ಹೇಳಿದರು. ಇದಕ್ಕೂ ಮುನ್ನ ಅಪೆಕ್ಸ್‌ ಹೈ-ಟೆಕ್‌ ತರಬೇತಿ ಸಂಸ್ಥೆಯ ಕೌಶಲ್ಯ ತರಬೇತಿ ಕಾರ್ಯಕ್ರಮಗಳ ಕ್ಯಾಲೆಂಡರ್‌ ಬಿಡುಗಡೆ ಮಾಡಿದರು. 

ಉದ್ಯೋಗ ಇದೆ; ಆಕಾಂಕ್ಷಿಗಳಿಲ್ಲ!: 22 ಸಾವಿರ ಹುದ್ದೆಗಳು ಲಭ್ಯ ಇವೆ. ಆದರೆ, ಅಭ್ಯರ್ಥಿಗಳೇ ಇಲ್ಲ! ಹೌದು, ದೇಶದಲ್ಲಿ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಆದರೆ, ಸ್ವೀಡನ್‌ಗೆ ತರಬೇತಿ ಮತ್ತು ಉದ್ಯೋಗಕ್ಕಾಗಿ 22 ಸಾವಿರ ಯುವತಿಯರ ಅವಶ್ಯಕತೆ ಇದ್ದು, ಅರ್ಹ ಅಭ್ಯರ್ಥಿಗಳು ಸಿಗುತ್ತಿಲ್ಲ ಎಂದು ಸಚಿವ ಅನಂತಕುಮಾರ್‌ ಹೆಗಡೆ ತಿಳಿಸಿದರು.

ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದ ಕಾರ್ಯಕ್ರಮದಡಿ ಸ್ವೀಡನ್‌ನೊಂದಿಗೆ ಒಂಡಂಬಡಿಕೆಯೊಂದನ್ನು ಮಾಡಿಕೊಳ್ಳಲಾಗಿದೆ. ಅದರಂತೆ ಸ್ವೀಡನ್‌ನಲ್ಲಿ ಕೌಶಲ್ಯ ತರಬೇತಿ ಜತೆಗೆ ಅಲ್ಲಿಯೇ ಉದ್ಯೋಗ ನೀಡಲಾಗುತ್ತದೆ. ಆದರೆ, ನಮ್ಮಲ್ಲಿ ಅಷ್ಟೊಂದು ಅಭ್ಯರ್ಥಿಗಳು ಸಿಗುತ್ತಿಲ್ಲ. ಐಟಿಐ ಅಥವಾ ತತ್ಸಮಾನ ಕೋರ್ಸ್‌ಗಳನ್ನು ಪೂರೈಸಿದ ಅಭ್ಯರ್ಥಿಗಳು ಬೇಕಾಗಿದ್ದಾರೆ ಎಂದರು.

ನಮ್ಮದು ಸರ್ವರ ಸರ್ಕಾರ
ಬೆಂಗಳೂರು:
ನಮ್ಮದು ಸರ್ವಾಧಿಕಾರಿ ಸರ್ಕಾರವಲ್ಲ,  ಸರ್ವರನ್ನು ಸಮಷ್ಟಿಯೊಂದಿಗೆ ಕೊಂಡೊಯ್ಯುವ ಜನಪರ ಆಡಳಿತದ ಸರ್ಕಾರ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್‌ ಕುಮಾರ್‌ ಹೆಗಡೆ ಹೇಳಿದರು. ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಡೆಯುತ್ತಿರುವ ಐಪಿಎ ಪ್ರಾಯೋಜಕತ್ವದ ಐಎಸ್‌ಎಚ್‌ ಇಂಡಿಯಾ ಮೇಳಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿ, ಸರ್ಕಾರ ಎಂದರೆ ಸರ್ವಾಧಿಕಾರವಲ್ಲ.

ನಾವೆಲ್ಲರೂ ಸೇರಿಕೊಂಡು ಆಡಳಿತ ನಡೆಸುವುದೇ ಜನಪರ ಸರ್ಕಾರ. ಇಲ್ಲಿ ಹೊಸತೇನು ಇರುವುದಿಲ್ಲ. ಆಲೋಚನಾ ಕ್ರಮ ಬದಲಿಸಿಕೊಂಡು ನವ ಭಾರತ ನಿರ್ಮಾಣದಲ್ಲಿ ಸಾಗಬೇಕಿದೆ ಎಂದರು. ಮೆಸ್ಸೆ ಫ್ರ್ಯಾಂಕ್‌ಪ್ರೂಟ್‌ ಸಂಸ್ಥೆಯ ಕಾರ್ಯನಿರ್ವಹಕ ನಿರ್ದೇಶಕ ರಾಜ್‌ ಮನೆಕ್‌, ಇಂಡಿಯಾ ಪ್ಲಂಬಿಂಗ್‌ ಸ್ಕಿಲ್‌ ಕೌನ್ಸಿಲ್‌ನ ಸಂಸ್ಥಾಪಕ ವಿನಯ್‌ ಗುಪ್ತ, ಇಂಡಿಯನ್‌ ಪ್ಲಂಬಿಂಗ್‌ಅಸೋಸಿಯೇಷನ್‌ನ ಅಧ್ಯಕ್ಷ ಗುರ್ಮಿತ್‌ ಸಿಂಗ್‌ ಅರೋರಾ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next