ಬೆಂಗಳೂರು: ಸದ್ಯ ಇಡೀ ಜಗತ್ತು “ಇಮ್ಯುನಾಲಜಿ’ ಬಗ್ಗೆ ಚಿಂತಿಸುತ್ತಿರುವ ಹಾಗೂ ಪರಿಣಾಮಕಾರಿ ಲಸಿಕೆಗೆ ಕಾದಿರುವ ಸಂದರ್ಭದಲ್ಲಿ ಅಮೆರಿಕದ ಅಟ್ಲಾಂಟಾದ ಎಮೊರಿ ಲಸಿಕಾ ಕೇಂದ್ರ ಸಹಯೋಗದಲ್ಲಿ “ಇಮ್ಯು ನಾಲಜಿ ಮತ್ತು ಲಸಿಕಾ ಸಂಶೋಧನಾ ಕೇಂದ್ರ’ವನ್ನು ರಾಜ್ಯದಲ್ಲಿ ಸ್ಥಾಪಿಸಲು ಸರ್ಕಾರ ಉತ್ಸುಕವಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.
ಅಮೆರಿಕದ ಅಟ್ಲಾಂಟಾದ ಎಮೊರಿ ವಿವಿಯ ಲಸಿಕಾ ಕೇಂದ್ರದ ನಿರ್ದೇಶಕ ಡಾ.ರಫಿ ಅಹಮ್ಮದ್ ಅವರೊಂದಿಗೆ ಸೋಮವಾರ ವೆಬಿನಾರ್ ಮೂಲಕ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಭವಿಷ್ಯದಲ್ಲಿ ಇಮ್ಯುನಾಲಜಿ ಅಧ್ಯಯನ ಪ್ರಮುಖವಾಗಿದೆ. ರಾಜ್ಯದಲ್ಲೇ “ಇಮ್ಯುನಾಲಜಿ ಮತ್ತು ಲಸಿಕಾ ಸಂಶೋಧನಾ ಕೇಂದ್ರ’ ಸ್ಥಾಪನೆ ಸಂದರ್ಭೂಚಿತವೆನಿಸಿದೆ ಎಂದರು. ಲಸಿಕೆ, ಸಾಂಕ್ರಾಮಿಕ ರೋಗಗಳು, ಕ್ಯಾನ್ಸರ್ ಸಂಶೋಧನೆಗಳೆಲ್ಲಾ ಅಂತಿಮವಾಗಿ “ಇಮ್ಯುನಾಲಜಿ’ ವ್ಯಾಪ್ತಿಗೆ ಬರುತ್ತವೆ. “ಇಮ್ಯುನಾಲಜಿ’ ಕ್ಷೇತ್ರದಲ್ಲಿನ ಸಂಶೋಧನೆಗಳು ಭವಿಷ್ಯದಲ್ಲಿ ಎದುರಾಗಲಿರುವ ಸಮಸ್ಯೆಗಳಿಗೆ ಉತ್ತರ ಒದಗಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೋವಿಡ್- 19ರ ದೃಢೀಕರಣದ ಆಧುನಿಕ ವಿಧಾನಗಳ ಅಭಿವೃದ್ಧಿ ಬಗ್ಗೆಯೂ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ರಾಜ್ಯದಲ್ಲಿ ಸಂಶೋಧನೆ ಮತ್ತು ಆವಿಷ್ಕಾರಕ್ಕೆ ಪೂರಕ ವಾತಾವರಣವಿದೆ. ಇದನ್ನು ಬಳಸಿಕೊಂಡು ಲಸಿಕೆಗಳಿಗೆ ಸಂಬಂಧಿಸಿದಂತೆ ಸಂಶೋಧನೆ, ಕ್ಲಿನಿಕಲ್ ಟ್ರಯಲ್, ಸಂಶೋಧನೆಗಳ ಪ್ರಯೋಜನವನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಅಗತ್ಯವಿದೆ. ಇದಕ್ಕೆ ಪೂರಕವಾದ ನೀತಿಯನ್ನು ಸರ್ಕಾರ ರೂಪಿಸಲಿದೆ ಎಂದು ತಿಳಿಸಿದರು. ಅಮೆರಿಕದ ಅಟ್ಲಾಂಟಾದದ ಎಮೊರಿ ವಿವಿ ಲಸಿಕಾ ಕೇಂದ್ರದ ನಿರ್ದೇಶಕ ಡಾ.ರಫಿ ಅಹಮ್ಮದ್ ಮಾತನಾಡಿ, ಎಮೊರಿ ಲಸಿಕಾ ಕೇಂದ್ರವು ನಿಖರತೆಯಿಂದ ಕೂಡಿದ ಅತ್ಯಾಧುನಿಕ ಕ್ಷಿಪ್ರ ಪರೀಕ್ಷಾ ವಿಧಾನವನ್ನು ಅಭಿವೃದ್ಧಿಪಡಿಸಿದೆ. ಇದನ್ನು ಅಟ್ಲಾಂಟಾದ ಆಸ್ಪತ್ರೆಗಳಲ್ಲಿ ಯಶಸ್ವಿಯಾಗಿ ಬಳಸಲಾಗುತ್ತಿದೆ. “ಪ್ಲಾಸ್ಮಾ ಥೆರಪಿ’, “ಹ್ಯೂಮನ್ ಮಾಲಿಕ್ಯುಲಾರ್ ಆಂಟಿಬಾಡೀಸ್’ ಕ್ಷೇತ್ರವು ಎಮೊರಿ ಕೇಂದ್ರವು ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇತರೆ ಪ್ರಮುಖ ವಲಯಗಳಾಗಿವೆ ಎಂದು ಹೇಳಿದರು.
ಕರ್ನಾಟಕ ಹಾಗೂ ಎಮೊರಿ ಲಸಿಕಾ ಕೇಂದ್ರದ ನಡುವೆ ಶೈಕ್ಷಣಿಕ ಸಹಭಾಗಿತ್ವಕ್ಕೆ ಅವಕಾಶವಿದ್ದು, ಸದ್ಯ ಆನ್‌ಲೈನ್ ಮೂಲಕ ಆರಂಭಿಸಬಹುದು. ಇದರಿಂದ ಎರಡೂ ಕಡೆಯ ವಿದ್ಯಾರ್ಥಿಗಳಿಗೂ ಪ್ರಯೋಜನವಾಗಲಿದೆ. ಕರ್ನಾಟಕ ಸರ್ಕಾರದ ಸಹಯೋಗಕ್ಕಾಗಿ ಸದ್ಯದಲ್ಲೇ ಪ್ರಸ್ತಾವ ಸಲ್ಲಿಸಲಾಗುವುದು ಎಂದು ತಿಳಿಸಿದರು. ಕ್ಯಾನ್ಸರ್ ತಜ್ಞ ಡಾ. ವಿಶಾಲ್ ರಾವ್ ಉಪಸ್ಥಿತರಿದ್ದರು.
ಆರು ತಿಂಗಳಲಿ ತಾತ್ಕಾಲಿಕ ಪರವಾನಗಿ ನಿರೀಕ್ಷೆ : ಕೋವಿಡ್-19 ಲಸಿಕೆಗೆ ಸಂಬಂಧಪಟ್ಟಂತೆ ಅಮೆರಿಕದಲ್ಲಿ ಮೂರು ಲಸಿಕೆಗಳ ಕ್ಲಿನಿಕಲ್ ಟ್ರಯಲ್ ಮುಂಚೂಣಿಯಲ್ಲಿವೆ. ಅವು ಫಲಪ್ರದವೆಂದು ದೃಢಪಟ್ಟರೆ ಮುಂದಿನ 6-8 ತಿಂಗಳಲ್ಲಿ ತಾತ್ಕಾಲಿಕ ಪರವಾನಗಿ ಲಭ್ಯವಾಗಬಹುದು ಎಂದು ಅಟ್ಲಾಂಟಾದ ಎಮೊರಿ ವಿವಿ ಲಸಿಕಾ ಕೇಂದ್ರದ ನಿರ್ದೇಶಕ ಡಾ. ರμ ಅಹಮ್ಮದ್ ತಿಳಿಸಿದರು. ಈ ಪೈಕಿ ಎರಡು ಲಸಿಕೆಗಳು ಆರ್ ಎನ್‌ಎ ಆಧಾರಿತವಾಗಿವೆ. ಕನಿಷ್ಠ ಶೇ. 50 ಜನರಿಗಾದರೂ ಇದು ಪರಿಣಾಮಕಾರಿ ಎಂದು ದೃಢಪಟ್ಟರೆ ಆರರಿಂದ ಎಂಟು ತಿಂಗಳ ಅವಧಿಯಲ್ಲಿ ತಾತ್ಕಾಲಿಕ ಪರವಾನಗಿ ಸಿಗಬಹುದು ಎಂದರು.