Advertisement

ಸಮಾಜ ಸೇವೆಗೆ ಸಾಕ್ಷಿಯಾದ ಗಣಪತಿ ಪ್ರತಿಷ್ಠಾಪನೆ

04:06 PM Sep 27, 2019 | Suhan S |

ಚನ್ನರಾಯಪಟ್ಟಣ: ಪಟ್ಟಣದ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ಈ ಬಾರಿ ಪ್ರತಿಷ್ಠಾಪಿಸಿರುವ ವಿಘ್ನೇಶ್ವರನಿಗೆ ಬೆಳ್ಳಿ ಮಂಟಪದ ದರ್ಬಾರ್‌ ಅಲಂಕಾರ ಮಾಡಿರುವುದರಿಂದ ತಾಲೂಕಿನ ಭಕ್ತರನ್ನು ತನ್ನತ್ತ ಆಕರ್ಷಿಸುತ್ತಿದ್ದು, ನಿತ್ಯವೂ ಸಾವಿರಾರು ಮಂದಿ ಗ್ರಾಮೀಣ ಭಾಗದಿಂದ ಆಗಮಿಸಿ ವಿಘ್ನೇಶ್ವರನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

Advertisement

ಗಣೇಶ ಚತುರ್ಥಿಯಂದು ಸಾಂಪ್ರದಾಯಿಕವಾಗಿ ವಿಘ್ನೇಶ್ವರ ಮೂರ್ತಿಯನ್ನು ಪ್ರಸನ್ನ ಗಣಪತಿ ಸೇವಾ ಸಮಿತಿಯವರು ಆಸ್ಥಾನ ಮಂಟಪದಲ್ಲಿ ಪ್ರತಿಷ್ಠಾಪಿಸಿದ್ದರು. ಆದರೆ ತಾಲೂಕು ಮಂಜುನಾಥ ಡೆಕೋರೇಟರ್ ಸಂಘದಿಂದ ಕಲಾವಿದ ರವೀಂದ್ರ ಅವರ ಮಾರ್ಗದರ್ಶ ನದಲ್ಲಿ ಬೆಳ್ಳಿ ಆಸ್ಥಾನ ಮಂಟಪ ನಿರ್ಮಾಣ ಮಾಡುವ ಮೂಲಕ ಗಣಪತಿ ಪೆಂಡಾಲಿಗೆ ಮೆರುಗು ನೀಡಿದ್ದರಿಂದ ಸಾವಿರಾರು ಭಕ್ತರನ್ನು ತನ್ನತ್ತ ಆಕಷಣೆ ಮಾಡುತ್ತಿದೆ.

ವಿಷೇಶ ಅಲಂಕಾರ: ಪ್ರಸಕ್ತ ವರ್ಷದ ಪ್ರಸನ್ನ ಗಣಪತಿ ಪೆಂಡಾಲನ್ನು ವಿನೂತನವಾಗಿ ಅಲಂಕಾರ ಮಾಡಲಾಗಿದ್ದು, ಕಾಮಧೇನುವಿನಿಂದ ಬಾಲಗಣಪ ಹಾಲು ಕುಡಿಯುತ್ತಿರುವುದು, ಗಣಪನ ಸಹೋದರರಾದ ಸುಬ್ರಹ್ಮಣ್ಯಸ್ವಾಮಿ ಮತ್ತು ಅಯ್ಯಪ್ಪ ಸ್ವಾಮಿಯ ವಿಗ್ರಹಗಳನ್ನು ಬಳಕೆ ಮಾಡುವ ಮೂಲಕ ಬೆಳ್ಳಿ ಆಸ್ಥಾನ ಮಂಟಪದಲ್ಲಿ ಗಣಪತಿಯು ಸಹೋದರರೊಂದಿಗೆ ದರ್ಭಾರ್‌ ರೀತಿ ಕಾಣುತ್ತಿದೆ, ಒಮ್ಮೆ ನೋಡಿದ ಭಕ್ತರು ಮತ್ತೂಮ್ಮೆ ನೋಡಬೇಕೆನ್ನಿಸುವಂತೆ ಅಲಂಕಾರ ಮಾಡಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ: ನೂತನವಾಗಿ ಮಾಡಿರುವ ಅಲಂಕಾರ ಸಾಮಾಜಿಕ ಜಾಲತಾಣದಲ್ಲಿ ಬಹಳ ಸದ್ದು ಮಾಡಿದ್ದು ತಾಲೂಕಿನ 6 ಹೋಬಳಿ ನೂರಾರು ಗ್ರಾಮದ ಜನರು ಆಗಮಿಸಿ ಸಹೋದರರೊಂದಿಗಿನ ದರ್ಬಾರ್‌ ವಿಘ್ನೇಶ್ವರ ಸ್ವಾಮಿಯ ದರ್ಶನ ಮಾಡುತ್ತಿದ್ದಾರೆ. ಇದಲ್ಲದೇ ತುಮಕೂರು ಜಿಲ್ಲೆಯ ತಿಪಟೂರು, ತುರುವೇಕೆರೆ, ಮಂಡ್ಯ ಜಿಲ್ಲೆಯ ನಾಗಮಂಗಲ, ಕೆಆರ್‌ಪೇಟೆ ತಾಲೂಕಿನಿಂದ ಹಲವು ಮಂದಿ ಭಕ್ತರು ಆಗಮಿಸುತ್ತಿರುವುದಲ್ಲದೆ ಜಿಲ್ಲೆಯ ಹೊಳೆನರಸೀಪುರ, ಹಾಸನ, ಅರಸೀಕೆರೆ ತಾಲೂಕಿನಿಂದ ಅನೇಕ ಭಕ್ತರು ಆಗಮಿಸಿ ಸೆಲ್ಪಿ ಕ್ಲಿಕಿಸಿಕೊಳ್ಳುತ್ತಿದ್ದಾರೆ.

ಎರಡು ತಿಂಗಳು ಪೂಜೆ: 53 ದಿವಸ ನಿತ್ಯ ಪೂಜೆಸಲ್ಲಿಸಿ ಕೊನೆಯ ದಿವಸ ಹೋಮ ನೆರವೇರಿಸಿ ಪಟ್ಟಣದ ಮುಖ್ಯ ರಸ್ತೆ ಹಾಗೂ ಪ್ರಮುಖ ಬಡಾವಣೆಯಲ್ಲಿ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಿ ವಿಸರ್ಜನೆ ಮಾಡಲಾಗುತ್ತಿದೆ. ಪ್ರತಿ ದಿವಸವೂ ಗಣಪತಿ ಆಸ್ಥಾನ ಮಂಟಪದಲ್ಲಿ ವಿವಿಧ ಸಂಘದವರ ಸಹಕಾರದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ. ಅನೇಕ ಸಂಘ ಸಂಸ್ಥೆಯವರು ಅನ್ನ ದಾಸೋಹವನ್ನು ಮಾಡಲಿದ್ದಾರೆ.

Advertisement

ತಿಲಕರ ಚಿಂತನೆ ಸಾಕಾರ :

ದೇಶಕ್ಕೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಮಸ್ತ ಹಿಂದೂಗಳನ್ನು ಒಗ್ಗೂಡಿಸಲು ತಿಲಕರು ಗಣಪತಿ ಪ್ರತಿಷ್ಠಾಪನೆಗೆ ಪ್ರೇರಣೆ ನೀಡಿದರು. ಸ್ವಾತಂತ್ರ್ಯ ಚಳವಳಿಯಲ್ಲಿ ಹಿಂದೂ ಯುವಕರನ್ನು ಸೆಳೆಯಲು ಗಣಪತಿ ಪ್ರತಿಷ್ಠಾಪನೆ ಮಹತ್ತರ ಪಾತ್ರ ವಹಿಸಿತ್ತು. ಇದೇ ಹಾದಿಯಲ್ಲಿ ಪಟ್ಟಣದ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯು ಸಾಗುತ್ತಿದೆ. ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ನಿತ್ಯ 15 ದಿವಸ ಬೆಳಗ್ಗೆ ಯೋಗ ಹಾಗೂ ಪ್ರಣಾಯಾಮ, ಸಾಮೂಹಿಕ ಸತ್ಯನಾರಾಯಣ ಪೂಜೆ, ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.85 ಅಂಕಪಡೆದು ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮೊದಲಾದ ಸಾಮಾಜಿಕ ಕಾರ್ಯಕ್ರಮವನ್ನು ಸೇವಾ ಸಮಿತಿಯು ಆಯೋಜಿಸುವ ಮೂಲಕ ಸರ್ವಧರ್ಮದ ಪಾಲಿಗೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿದ್ದಾರೆ.

 

  • ಶಾಮಸುಂದರ್‌ ಕೆ. ಅಣ್ಣೇನಹಳ್ಳಿ
Advertisement

Udayavani is now on Telegram. Click here to join our channel and stay updated with the latest news.

Next