Advertisement

ಈಡಿಗ ಅಭಿವೃದ್ದಿ ನಿಗಮ ಸ್ಥಾಪಿಸಲು ಆಗ್ರಹ

02:32 PM Feb 22, 2022 | Team Udayavani |

ರಾಯಚೂರು: ರಾಜ್ಯ ಸರ್ಕಾರ ಹಿಂದುಳಿದ ಈಡಿಗ ಸಮುದಾಯದ ಅಭಿವೃದ್ಧಿಗೆ ನಿಗಮ ಮಂಡಳಿ ಸ್ಥಾಪಿಸುವಂತೆ ಆಗ್ರಹಿಸಿ ರಾಯಚೂರು ತಾಲೂಕು ಆರ್ಯ ಈಡಿಗರ ಸಂಘದ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.

Advertisement

ಈ ಕುರಿತು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ಅನಾದಿ ಕಾಲದಿಂದಲೂ ಆರ್ಯ ಈಡಿಗ ಸಮುದಾಯದ ಕುಲವೃತ್ತಿಯನ್ನೇ ನೆಚ್ಚಿಕೊಂಡು ಜೀವನ ನಡೆಸುತ್ತಿದೆ. ರಾಜ್ಯದಲ್ಲಿ ಆರ್ಯ ಈಡಿಗ ಸಮಾಜದ 25 ಉಪ ಪಂಗಡಗಳು ಸೇರಿದಂತೆ 50 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಆದರೆ, ಸೂಕ್ತ ಪ್ರಾತಿನಿಧ್ಯ ಸಿಗದ ಕಾರಣ ಸಮಾಜ ಹಿಂದುಳಿಯುವಂತಾಗಿದೆ ಎಂದರು. ಕುಲವೃತ್ತಿಯಾಗಿದ್ದ ಸೇಂದಿ ಹಾಗೂ ಸಾರಾಯಿ ಉದ್ಯಮ ನಿಷೇಧಿಸಿದ ಪರಿಣಾಮ ಅನೇಕ ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ. ಸರ್ಕಾರ ಈವರೆಗೆ ಪುನರ್ವಸತಿ ಉದ್ಯೋಗ ಹಾಗೂ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ನಿಗಮ ಮಂಡಳಿ ಸ್ಥಾಪಿಸಿ ಅಭಿವೃದ್ಧಿಗೆ ಸಹಕರಿಸಲಿ ಎಂದು ಸಮಾಜದ ಮುಖಂಡರು ಮನವಿ ಮಾಡುತ್ತಲೇ ಇದ್ದರೂ ಸರ್ಕಾರಗಳು ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೂಡಲೇ ಸಚಿವ ಸಂಪುಟದಲ್ಲಿ ಚರ್ಚಿಸಿ ಬ್ರಹ್ಮಶ್ರೀ ಈಡಿಗ ಅಭಿವೃದ್ಧಿ ಮಂಡಳಿ ಸ್ಥಾಪಿಸುವ ಜತೆಗೆ 500 ಕೋಟಿ ಅನುದಾನ ಮೀಸಲಿಡಬೇಕು. ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಬೇಕು. ಸ್ವಯಂ ಉದ್ಯೋಗ, ತರಬೇತಿ ನೀಡಿ ಸಾಲ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.

ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶ, ಸಾಹಿತ್ಯ ಕನ್ನಡಕ್ಕೆ ಅನುವಾದ ಮಾಡಬೇಕು. ಈಡಿಗ ಸಾಂಸ್ಕೃತಿಕ ಅಧ್ಯಯನ ಪೀಠ ಸ್ಥಾಪಿಸುವಂತೆ ಒತ್ತಾಯಿಸಿದರು. ಈ ವೇಳೆ ಸಂಘದ ಗೌರವಾಧ್ಯಕ್ಷ ಈ. ಆಂಜನೇಯ ಗೌಡ, ಸದಸ್ಯರಾದ ಎಂ. ಬಸವರಾಜ ಗೌಡ, ಮಂಜುನಾಥ ಹಾನಗಲ್‌, ಕಾರ್ಯಾಧ್ಯಕ್ಷ ಖಾಜನಗೌಡ, ಭೀಮನಗೌಡ, ಕೆ.ವೀರೇಶ್ವರ ಗೌಡ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next