ಮಾಗಡಿ: ಯುವಕರು ದೇಶದ ಆಸ್ತಿ, ಸದಾ ಚಟುವಟಿಕೆಯಿಂದ ಆರೋಗ್ಯವಂತರಾಗಿರಲು ಕ್ರೀಡಾಂಗಣಗಳ ಅಗತ್ಯವಿದೆ. ಪ್ರತಿಭೆಗಳ ಸಾಂಸ್ಕೃತಿಕ ಅನಾವರಣಕ್ಕಾಗಿ ಡಾ.ಶಿವಕುಮಾರಸ್ವಾಮಿ ಹೆಸರಿನಲ್ಲಿ ಸುಸಜ್ಜಿತ ಆಡಿಟೋರಿಯಂ ಮತ್ತು ರೈತರ ಅನುಕೂಲಕ್ಕಾಗಿ ಸುಸಜ್ಜಿತ ಹೈಟೆಕ್ ಮಾರುಕಟ್ಟೆಯನ್ನು ಪಟ್ಟಣದಲ್ಲಿ ನಿರ್ಮಿಸುವುದು ಎಂದು ಶಾಸಕ ಎ.ಮಂಜು ತಿಳಿಸಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸುಮಾರು 4 ಕೋಟಿ ರೂ. ವೆಚ್ಚದ ಆಡಿಟೋರಿಯಂ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
2 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ: ಯುವಶಕ್ತಿ ದೇಶದ ಆಸ್ತಿಯಾಗಿದೆ. ಅವರು ದೇಶದ ಶಕ್ತಿಯಾಗಿ ಬೆಳೆಯಬೇಕಾದರೆ, ಯೋಗ, ಜಿಮ್, ಬಾಲ್ ಬ್ಯಾಡ್ಮಿಂಟನ್ ಇತರೆ ಕ್ರೀಡಾ ಚುಟುವಟಿಕೆಗೆ ಪಟ್ಟಣದ ತಿರುಮಲೆ ಐಡಿಎಸ್‌ಎಂಟಿ ಬಡಾವಣೆಯಪುರಸಭೆ ಸಿಎ ನಿವೇಶನದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಲಾಗಿದೆ.
ಹೈಟೆಕ್ ಮಾರುಕಟ್ಟೆಗೆ ಶಂಕುಸ್ಥಾಪನೆ: ಡೂಮ್ ಲೈಟ್ ವೃತ್ತದಲ್ಲಿ ರೈತರ ಅನುಕೂಲಕ್ಕಾಗಿ 2.50 ಕೋಟಿರೂ. ವೆಚ್ಚದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಿಸಲು ಈಗಾಗಲೇ ಶಂಕುಸ್ಥಾಪನೆ ನೆರವೇರಿಸಿದ್ದೇನೆ. ಯುವಜನತೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ತಾಲೂಕಿನ ಸಾಂಸ್ಕೃತಿಕ ಕಲಾವಿದರನ್ನು, ಯುವ ಪ್ರತಿಭೆಗಳನ್ನು ಪ್ರೊತ್ಸಾಹಿಸಲು ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸುಮಾರು 4 ಕೋಟಿ ರೂ ವೆಚ್ಚದ ಆಡಿಟೋರಿಯಂ ನಿರ್ಮಿಸಲಾಗುವುದು.ಈಗಾಗಲೇ ನಿರ್ಮಿತಿ ಕೇಂದ್ರಕ್ಕೆ ಟಂಡರ್ ನೀಡಿದ್ದು, ಶೀಘ್ರದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಅನುದಾನಕ್ಕೆ ಸಿಎಂ ಹಸಿರು ನಿಶಾನೆ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಜಿಲ್ಲೆಯವರೇ ಆಗಿರುವುದರಿಂದ ಮಾಗಡಿ ಕ್ಷೇತ್ರಕ್ಕೆ ಆಗಬೇಕಾದ ಶಾಶ್ವತ ಕಾರ್ಯಕ್ರಮವನ್ನು ಕೊಡಲು ಬದ್ಧರಾಗಿದ್ದಾರೆ. ನಾನು ಸಹ ಮುಖ್ಯಮಂತ್ರಿಗಳಿಗೆ ಒತ್ತಡ ಏರಿ ಕ್ಷೇತ್ರಕ್ಕೆ ಆಗಬೇಕಾದ ಕಾರ್ಯಕ್ರಮಗಳ ಪಟ್ಟಿಯನ್ನು ನೀಡಿ ಅನುದಾನ ಬಿಡುಗಡೆಗೆ ಮನವಿ ಮಾಡಿದ್ದೇನೆ. ಮುಖ್ಯಮಂತ್ರಿಗಳು ನನ್ನ ಮನವಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಿದರು.
10 ಕೋಟಿ ಅನುದಾನ ಮಂಜೂರು: ಲಕ್ಷಾಂತರ ಮಂದಿಗೆ ಅಕ್ಷರ ಜ್ಞಾನವನ್ನು ನೀಡಿರುವ ಇಲ್ಲಿನ ಸರ್ಕಾರಿ ಪದವಿ ಪೂರ್ವಕಾಲೇಜಿಗೆ 75 ವರ್ಷಗಳು ತುಂಬಿದ ಸಂತಸ ಒಂದೆಡೆಯಾದರೆ ಇದು ಈಗ ತೀರ ಶಿಥಿಲಗೊಂಡಿದೆ. ಶಿಥಿಲಕಟ್ಟಡವನ್ನು ತೆರವುಗೊಳಿಸಿ 10 ಕೋಟಿ ರೂ ವೆಚ್ಚದಲ್ಲಿ ನೂತನ ಕಾಲೇಜು ಕಟ್ಟಡ ನಿರ್ಮಿಸಲು ಸರ್ಕಾರ ಈಗಾಗಲೇ 10 ಕೋಟಿ ಮಂಜೂರಾತಿ ನೀಡಿದೆ. ಮುಖ್ಯಮಂತ್ರಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದ ಸಾರ್ವಜನಿಕರ ಅನುಕೂಲಕ್ಕಾಗಿ ಬಸ್ ನಿಲ್ದಾಣದ ಆರ್‌ಆರ್ ರಸ್ತೆ ಹಿಂಭಾಗದಲ್ಲಿ ಬೂನ್ ವ್ಯವಸ್ಥೆಯಲ್ಲಿ ಸುಲಭ್ ಶೌಚಾಲಯಗಳನ್ನು ಈಗಾಗಲೇ ನಿರ್ಮಿಸಿದ್ದು,ಉದ್ಘಾಟಿಸಲಾಗಿದೆ.
ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಪುರಸಭೆ ಆವರಣದಲ್ಲಿ ಸಸಿಗಳನ್ನು ನೆಟ್ಟಿದ್ದೇವೆ. ಪೌರಕಾರ್ಮಿಕರಿಗೆ ಉಚಿತವಾಗಿ ಸಸಿಗಳನ್ನು ವಿತರಣೆ ಮಾಡಲಾಗಿದೆ ಎಂದು ಶಾಸಕ ಮಂಜುನಾಥ್ ಹೇಳಿದರು.
ಬಡ ವಿದ್ಯಾರ್ಥಿಗಳ ಪ್ರವೇಶಕ್ಕೆ ಸಹಾಯ ಹಸ್ತ ನೀಡಲು ಬದ್ಧ: ಮಾಗಡಿ ಪಟ್ಟಣದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಡ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸಕ್ಕಾಗಿ ಧನಸಹಾಯ ಹಸ್ತ ನೀಡುವ ಮೂಲಕ ಉಚಿತವಾಗಿ ನೋಂದಣಿ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಶಾಸಕರು ವಿವರಿಸಿದರು. ಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಜೆಡಿಎಸ್ ಅಧ್ಯಕ್ಷ ಪೊಲೀಸ್ ರಾಮಣ್ಣ, ಪುರಸಭೆ ಮಾಜಿ ಸದಸ್ಯರಾದ ಎಂ.ಎನ್. ಮಂಜುನಾಥ್, ಕೆ.ವಿ. ಬಾಲು, ಜುಟ್ಟನಹಳ್ಳಿ ಜಯರಾಂ, ಗಂಗರಾಜು, ಕಲ್ಕರೆ ಶಿವಣ್ಣ, ಕೆ.ಎನ್. ನರಸೇಗೌಡ, ಜಯಕುಮಾರ್, ತಹಶೀಲ್ದಾರ್ ರಮೇಶ್, ಬಿಇಒ ಎಸ್. ಸಿದ್ದೇಶ್ವರ್, ಗುತ್ತಿಗೆದಾರ ಶ್ರೀನಿವಾಸ್, ಗೋವಿಂದರಾಜು, ಮಹೇಶ್, ರವಿಕುಮಾರ್, ಶಿವಣ್ಣ, ರೇವಣ್ಣ, ಮುನಿಕೃಷ್ಣ, ಮಿಶ್ರಾ, ದೇವರಾಜು, ಪ್ರಕಾಶ್, ಕುಮಾರ್, ರಹಮತ್, ವೆಂಕಟೇಶ್, ಪುರುಶೋತ್ತಮ್, ಅಶೋಕ್ ಸೇರುದಂತೆ ಮತ್ತಿತರರು ಇದ್ದರು.