ಚಿತ್ರದುರ್ಗ: ವೀರವನಿತೆ ಒನಕೆ ಓಬವ್ವ ಹೆಸರಿನಲ್ಲಿ ನಿಗಮ ಸ್ಥಾಪಿಸಿ ಅದರ ಅಡಿಯಲ್ಲಿ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದರು.
ನಗರದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಒನಕೆ ಓಬವ್ವ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಓಬವ್ವಳ ಹೆಸರಿನಲ್ಲಿ ಅಧ್ಯಯನ ಪೀಠ ಆರಂಭಿಸಲಾಗುವುದು. ಚಿತ್ರದುರ್ಗದಲ್ಲಿ ಒನಕೆ ಓಬವ್ವ ಸ್ಮಾರಕ ಟ್ರಸ್ಟ್‌ಗೆ ಜಾಗ ನೀಡುವ ವಿಚಾರವಾಗಿ ಜಿಲ್ಲಾ ಧಿಕಾರಿಗಳಿಂದ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದರು.
ಇತಿಹಾಸದಲ್ಲಿ ಅಧಿಕಾರದಲ್ಲಿದ್ದವರು ಸಾಧನೆ ಮಾಡುವುದು ಸಹಜ. ಆದರೆ ಯಾವುದೇ ಅ ಧಿಕಾರ ಇಲ್ಲದೆ ದೊಡ್ಡ ಸಾಧನೆ ಮಾಡುವುದು ಅಪರೂಪ. ಕೇವಲ ನಾಡು ಹಾಗೂ ಒಡೆಯನ ಮೇಲಿನ ಭಕ್ತಿಯಿಂದ ಒನಕೆ ಓಬವ್ವ ಮಾಡಿದ ತ್ಯಾಗ, ಸಾಹಸ ಸುವರ್ಣಾಕ್ಷರದಲ್ಲಿ ಬರೆದಿಡುವಂತಹುದು. ಓಬವ್ವಳ ಸಮುದಾಯಕ್ಕೆ ಸೇರಿದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ರಂಗನಾಥ್, ಬಸವಲಿಂಗಯ್ಯ, ಮೋಟಮ್ಮ ಅವರಂತಹ ನಾಯಕರು ಹಾಗೂ ಕೆಲ ಸಮರ್ಥ ಅ ಧಿಕಾರಿಗಳು ಉತ್ತಮ ಆಡಳಿತ ನೀಡಿದ್ದಾರೆ. ಇಲ್ಲಿ ಸಾಮರ್ಥ್ಯಕ್ಕೆ ಕೊರತೆ ಇಲ್ಲ, ಆದರೆ ಅವಕಾಶಗಳ ಕೊರತೆಯಾಗಿದೆ ಎಂದರು.
ಶಾಸಕರಾದ ನೆಹರೂ ಓಲೇಕಾರ್, ಎಂ.ಚಂದ್ರಪ್ಪ, ಗೂಳಿಹಟ್ಟಿ ಶೇಖರ್, ಡಿ.ಎಸ್.ವೀರಯ್ಯ, ಜಿ.ಎಚ್.ತಿಪ್ಪಾರೆಡ್ಡಿ, ಪೂರ್ಣಿಮಾ ಶ್ರೀನಿವಾಸ್, ಎನ್.ಮಹೇಶ್, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವೆ ಮೋಟಮ್ಮ ಮೊದಲಾದವರು ಪಾಲ್ಗೊಂಡಿದ್ದರು. ರಾಜ್ಯ ಮಟ್ಟದ ಒನಕೆ ಓಬವ್ವ ಜಯಂತಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಜನ ಆಗಮಿಸಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ಮುರುಘರಾಜೇಂದ್ರ ಕ್ರೀಡಾಂಗಣದವರೆಗೆ ಬೃಹತ್ ಮೆರವಣಿಗೆ ನಡೆಯಿತು.
ನಾನು ಅಂಬೇಡ್ಕರ್ ವಿಚಾರಧಾರೆ ಪ್ರತಿಪಾದಕ
ನಾನು ಅಂಬೇಡ್ಕರ್ ವಿಚಾರಧಾರೆ ನಂಬಿದವನು. ಅದಕ್ಕೆ ಬದ್ಧನಾಗಿ ಕೆಲಸ ಮಾಡುತ್ತಿದ್ದೇನೆ. ಬುದ್ಧ, ಬಸವ, ಅಂಬೇಡ್ಕರ್ ನಮಗೆ ಆದರ್ಶ. ಹೀಗಾಗಿ ನನ್ನ ನಿರ್ಣಯಗಳಲ್ಲಿ ಅವರ ವಿಚಾರಧಾರೆಗಳು ಕಾಣುತ್ತವೆ. ಎಲ್ಲರಿಗೂ ಸಮನಾದ ಅವಕಾಶ ಸಿಗಬೇಕು ಎನ್ನುವುದನ್ನು ಅಂಬೇಡ್ಕರ್ ಸಂವಿಧಾನದಲ್ಲಿ ಹೇಳಿದ್ದಾರೆ. ಇಷ್ಟೊಂದು ಜಾತಿ, ಜನಾಂಗಗಳ ನಡುವೆ ಇಂದು ದೇಶದಲ್ಲಿ ಪ್ರಜಾಪ್ರಭುತ್ವ ಉಳಿದಿದ್ದರೆ ಅದಕ್ಕೆ ಭಾರತದ ಸಂವಿಧಾನವೇ ಕಾರಣ. ಅಂಬೇಡ್ಕರ್ ವಿಚಾರ ಒಪ್ಪಿದವನು ದೇಶಭಕ್ತನಾಗುತ್ತಾನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.