Advertisement

ಜಿಲ್ಲಾ ಮಟ್ಟದಲ್ಲಿ ಘಟಕ, ಕಾಲೇಜುಗಳಲ್ಲಿ ಕ್ಲಬ್‌ ಸ್ಥಾಪನೆ

01:03 AM Feb 03, 2022 | Team Udayavani |

ಮಂಗಳೂರು: ಮಾನವ ಕಳ್ಳಸಾಗಣೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಇಲಾಖೆ ಪ್ರತೀ ಜಿಲ್ಲೆಯಲ್ಲೂ ಮಾನವ ಕಳ್ಳ ಸಾಗಣೆ ತಡೆ ಘಟಕ ಹಾಗೂ ಕಾಲೇಜುಗಳಲ್ಲಿ “ಮಾನವ ಕಳ್ಳಸಾಗಣೆ ತಡೆ ಕ್ಲಬ್‌’ ರಚಿಸಲು ನಿರ್ದೇಶಿಸಿದೆ.

Advertisement

ದೇಶದಲ್ಲಿ ಅಥವಾ ವಿದೇಶಗಳಲ್ಲಿ ಜೀತ ಪದ್ಧತಿ ರೀತಿಯ ವೃತ್ತಿಗಳು, ಲೈಂಗಿಕ ಚಟುವಟಿಕೆ, ಭಿಕ್ಷಾಟನೆ, ಅಂಗಾಂಗಗಳನ್ನು ತೆಗೆಯುವಿಕೆ, ಬಲವಂತದ ಮದುವೆ ಮೊದಲಾದ ದುಷ್ಕೃತ್ಯಗಳಿಗಾಗಿ ಮಹಿಳೆಯರು, ಮಕ್ಕಳು ಮತ್ತು ಗ್ರಾಮೀಣ ಭಾಗದ ಜನರನ್ನು ಕಳ್ಳಸಾಗಣೆ (human trafficking) ಮಾಡುತ್ತಿರುವ ಕೃತ್ಯಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಎಲ್ಲ ಜಿಲ್ಲೆಗಳಿಗೂ ವಿಶೇಷ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಮಾನವ ಕಳ್ಳಸಾಗಣೆ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತಡೆಯು ವುದಕ್ಕಾಗಿ ಕೇಂದ್ರ ಸರಕಾರ 2018ರಲ್ಲಿ ಲೋಕಸಭೆಯಲ್ಲಿ ಮಸೂದೆ ಮಂಡಿಸಿ ಅಂಗೀಕಾರ ಪಡೆದಿತ್ತು. ಪೂರಕ ಹೆಜ್ಜೆ ಎಂಬಂತೆ ಪ್ರತೀ ಜಿಲ್ಲೆಯಲ್ಲಿಯೂ ಘಟಕ ಹಾಗೂ ಕಾಲೇಜುಗಳಲ್ಲಿ ಕ್ಲಬ್‌ ರಚಿಸಲು ಸೂಚನೆ ನೀಡಲಾಗಿದೆ. ಪೊಲೀಸ್‌ ಇಲಾಖೆ ಸೇರಿದಂತೆ ಮಕ್ಕಳು, ಮಹಿಳೆಯರ ರಕ್ಷಣೆಗೆ ಸಂಬಂಧಿಸಿದ ಇಲಾಖೆಗಳನ್ನು ಎಚ್ಚರಿಸುವುದು, ಸಾರ್ವಜನಿಕರು, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶ.

ಅನಧಿಕೃತ ಏಜೆನ್ಸಿಗಳ ವಿರುದ್ಧ ಕ್ರಮ: ಮಾನವ ಕಳ್ಳಸಾಗಣೆಗೆ ಒಳಗಾಗುವವರಲ್ಲಿ ಮಕ್ಕಳು, ಮಹಿಳೆಯರೇ ಹೆಚ್ಚು. ಇಂತಹ ಪ್ರಕರಣಗಳನ್ನು ಪೊಲೀಸ್‌ ಇಲಾಖೆ ಗಂಭೀರವಾಗಿ ಪರಿಗಣಿಸುತ್ತಿದೆ. ಕರಾವಳಿಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಾನವ ಕಳ್ಳಸಾಗಣೆ ಪ್ರಕರಣಗಳು ಕಡಿಮೆ. ವಿದೇಶಗಳಲ್ಲಿ ಉತ್ತಮ ಉದ್ಯೋಗದ ಆಮಿಷ ತೋರಿಸಿ ಅಲ್ಲಿ ಶೋಷಣೆ ಮಾಡುವ ಘಟನೆಗಳ ಬಗ್ಗೆಯೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸೂಕ್ತ ಕ್ರಮ ಕೈಗೊಂಡಿದ್ದೇವೆ. ಅನಧಿಕೃತ ಏಜೆನ್ಸಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ. ಮಂಗಳೂರಿನ ಮೂಲಕ ಕೆನಡಾಕ್ಕೆ ಅಕ್ರಮವಾಗಿ ತೆರಳಲು ಬಂದಿದ್ದ ಶ್ರೀಲಂಕಾದ 32 ಮಂದಿಯನ್ನು ವಶಕ್ಕೆ ಪಡೆದು ಈ ಮಾನವ ಕಳ್ಳಸಾಗಣೆ ಜಾಲದ ಹಿಂದೆ ಇದ್ದವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ನಾಪತ್ತೆಯಾಗಿರುವ ಎಲ್ಲ ಮಕ್ಕಳನ್ನು ಪತ್ತೆ ಮಾಡಿದ್ದೇವೆ. ಸಿಐಡಿ ಕೂಡ ವಿಶೇಷ ನಿಗಾ ವಹಿಸುತ್ತದೆ ಎಂದು ಮಂಗಳೂರು ಡಿಸಿಪಿ ಹರಿರಾಂ ಶಂಕರ್‌ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಕ್ಲಬ್‌ ಆರಂಭ
ಮಾನವ ಕಳ್ಳಸಾಗಣೆ ಜಾಲಕ್ಕೆ ಹೆಚ್ಚಾಗಿ ಬಡವರು, ಅವಿದ್ಯಾವಂತರು, ಗ್ರಾಮೀಣ ಭಾಗದವರು ಗುರಿಯಾಗುತ್ತಾರೆ. ವಿದ್ಯಾವಂತರಾಗಿದ್ದರೂ ವಂಚನೆ ಅಥವಾ ಬಲಾತ್ಕಾರದಿಂದ ಇದಕ್ಕೆ ಬಲಿಯಾಗುತ್ತಾರೆ. ಈ ಬಗ್ಗೆ ವಿದ್ಯಾರ್ಥಿ ಸಮುದಾಯವನ್ನು ಬಳಸಿಕೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕ್ಲಬ್‌ ಆರಂಭಿಸಲಾಗಿದೆ ಎಂದು ಮಂಗಳೂರು ರೋಶನಿ ನಿಲಯ ಸ್ಕೂಲ್‌ ಆಫ್ ಸೋಶಿಯಲ್‌ ವರ್ಕ್‌ನ ಸ್ನಾತಕೋತ್ತರ ಪದವಿಯ ಅಪರಾಧ ಶಾಸ್ತ್ರ ಮತ್ತು ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥೆ ಹಾಗೂ ಸಹಾಯಕ ಪ್ರಾಧ್ಯಾಪಕಿಯಾಗಿರುವ ಡಾ| ಸರಿತಾ ತಿಳಿಸಿದ್ದಾರೆ.

Advertisement

“ಸ್ಟಾ ಟಿಸ್ಟಾ’ ಸಂಶೋಧನ ವಿಭಾಗದ ಪ್ರಕಾರ 2020ರಲ್ಲಿ ಭಾರತದಲ್ಲಿ 900 ಪ್ರಕರಣಗಳು ಬೆಳಕಿಗೆ ಬಂದಿದ್ದು ಇದರಲ್ಲಿ 3,000 ಮಂದಿಯನ್ನು ರಕ್ಷಿಸಲಾಗಿದೆ. 2020ರಲ್ಲಿ ಮಹಾರಾಷ್ಟ್ರದಲ್ಲಿ 154, ತೆಲಂಗಾಣದಲ್ಲಿ 104 ಹಾಗೂ ಕರ್ನಾಟಕದಲ್ಲಿ 13 ಮಾನವ ಕಳ್ಳಸಾಗಣೆ ಪ್ರಕರಣಗಳು ಬೆಳಕಿಗೆ ಬಂದಿವೆ.

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next