ಕುಣಿಗಲ್: ಪ್ರಸಕ್ತ ಶೈಕ್ಷಣಿಕ ವರ್ಷದ ಅಂತ್ಯದೊಳಗಾಗಿ ನನ್ನ ಮತಕ್ಷೇತ್ರದ ವ್ಯಾಪ್ತಿಗೆ ಬರುವ 5 ಜಿಲ್ಲೆಗಳಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಒಂದು ಸಾವಿರ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಒದಗಿಸುವ ಗುರಿ ಹೊಂದಿದ್ದೇನೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಶಿಕ್ಷಕರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಸಲುವಾಗಿ ತಲಾ 2 ಲಕ್ಷ ರೂ. ವೆಚ್ಚದಲ್ಲಿ ಒಂದು ಸಾವಿರ ಶುದ್ಧಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.
ಅನುದಾನಿತ ಶಾಲೆಗಳಿಗೂ ವಿಸ್ತರಣೆಗೆ ಮನವಿ: ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಕೊರತೆ ನೀಗಿಸಲು ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ರೀತಿ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಸರ್ಕಾರ ತಾತ್ಕಾಲಿಕ ವ್ಯವಸ್ಥೆಯಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡುತ್ತಿದೆ. ಈ ಅತಿಥಿ ಶಿಕ್ಷಕರಿಗೆ ಮಾಸಿಕ 7500 ರೂ.ನೀಡಲಾಗುತ್ತದೆ. ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ವಯೋನಿವೃತ್ತಿ, ರಾಜೀನಾಮೆ ಮತ್ತು ನಿಧನ ಮತ್ತಿತರ ಕಾರಣಗಳಿಂದ ಸಾಕಷ್ಟು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಅಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರ ಅನುದಾನಿತ ಪ್ರೌಢ ಶಾಲೆಗಳಿಗೂ ಅತಿಥಿ ಶಿಕ್ಷಕರ ನೇಮಕಾತಿ ಮಾಡುಕೊಳ್ಳಲು ಅವಕಾಶ ನೀಡಬೇಕು ಎಂದು ನಾರಾಯಣಸ್ವಾಮಿ ಸರ್ಕಾರವನ್ನು ಆಗ್ರಹಿಸಿದರು.
ಕಲಿಕಾ ಚೇತರಿಕೆ ತರಬೇತಿಯನ್ನು ಕೇವಲ ಸರ್ಕಾರಿ ಶಾಲಾ ಶಿಕ್ಷಕರಿಗೆ ಮಾತ್ರ ನೀಡಲಾಗುತ್ತಿದೆ. ಇದನ್ನು ಅನುದಾನಿತ ಶಾಲೆಗಳ ಶಿಕ್ಷಕರಿಗೂ ಕೊಡಬೇಕು ಎಂದರು.
2020ರವರೆಗೂ ಅನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿಯಾಗಿರುವ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ತಕ್ಷಣ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಮುಖಂಡರಾದ ಬಲರಾಮ, ದೇವರಾಜ, ನಿವೃತ್ತ ಬಿಇಒ ಡಿ.ಕೃಷ್ಣ, ಡಯಟ್ ಉಪನ್ಯಾಸಕಿ ಮಮತಾಮಣಿ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀನಿವಾಸಮೂರ್ತಿ, ಕಾರ್ಯದರ್ಶಿ ಎಸ್.ಎನ್ .ನರಸಿಂಹಮೂರ್ತಿ, ಮುಖ್ಯ ಶಿಕ್ಷಕರಾದ ವೆಂಕಟೇಶಬಾಬು, ಪ್ರಕಾಶಮೂರ್ತಿ, ತೋಟ ಗಾರಿಕೆ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಗಂಗಾಧರ್, ಶಿಕ್ಷಕರಾದ ಚನ್ನಪ್ಪ, ಓಬಣ್ಣ ಹಾಜರಿದ್ದರು.