Advertisement

ಮಂದಿರ ನಿರ್ಮಾಣ ಸನ್ನಿಹಿತ

01:21 AM Feb 06, 2020 | mahesh |

ಹೊಸದಿಲ್ಲಿ: ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಿಸಬೇಕೆಂಬ ಕೋಟ್ಯಂತರ ಭಾರತೀಯರ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಸುಪ್ರೀಂ ಕೋರ್ಟ್‌ನ ಆದೇಶದ ಅನ್ವಯ ರಾಮಮಂದಿರ ಟ್ರಸ್ಟ್‌ ರಚನೆ ಕುರಿತು ಪ್ರಧಾನಿ ಮೋದಿ ಬುಧವಾರ ಘೋಷಣೆ ಮಾಡಿದ್ದಾರೆ.

Advertisement

ಕೇಂದ್ರ ಸಂಪುಟ ಸಭೆಯ ಅನಂತರ ಲೋಕಸಭೆಯಲ್ಲಿ ಈ ಘೋಷಣೆ ಮಾಡಿದ ಪ್ರಧಾನಿ ಮೋದಿ, ಮಂದಿರ ನಿರ್ಮಾಣಕ್ಕಾಗಿ “ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ’ ಎಂಬ ಹೆಸರಿನ ಸ್ವಾಯತ್ತ ಟ್ರಸ್ಟ್‌ ರಚಿಸಲಾಗಿದೆ ಎಂದಿದ್ದಾರೆ. ಅಯೋಧ್ಯೆ ತೀರ್ಪು ನೀಡುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಈ ಟ್ರಸ್ಟ್‌ ರಚನೆಗೆ ಫೆ.9ರ ಗಡುವು ವಿಧಿಸಿತ್ತು. ಗಡುವು ಮುಗಿಯಲು 4 ದಿನಗಳು ಬಾಕಿಯಿರುವಾಗಲೇ ಸರಕಾರ ಟ್ರಸ್ಟ್‌ ರಚನೆ ಕುರಿತು ಘೋಷಣೆ ಮಾಡಿದೆ. ಈ ಘೋಷಣೆ ಹೊರಬಿದ್ದ ಬೆನ್ನಲ್ಲೇ ಉತ್ತರಪ್ರದೇಶ ಸರಕಾರವು ಸುನ್ನಿ ವಕ್ಫ್ ಮಂಡಳಿಗೆ ಅಯೋಧ್ಯೆಯ ರಾಮಮಂದಿರ ಸಂಕೀರ್ಣದಿಂದ 25 ಕಿ.ಮೀ. ದೂರದಲ್ಲಿ 5 ಎಕರೆ ಭೂಮಿಯನ್ನು ಹಂಚಿಕೆ ಮಾಡಿದೆ.

ಎಲ್ಲರೂ ಬೆಂಬಲಿಸೋಣ
ಬುಧವಾರ ಲೋಕಸಭೆ ಕಲಾಪದ ವೇಳೆ ಮಾತನಾಡಿದ ಪ್ರಧಾನಿ, ನಾನಿಂದು ಅತ್ಯಂತ ಮಹತ್ವದ ಮತ್ತು ಐತಿಹಾಸಿಕ ವಿಚಾರಕ್ಕೆ ಸಂಬಂಧಿಸಿದ ಮಾಹಿತಿ ನೀಡಲು ಇಚ್ಛಿಸುತ್ತೇನೆ. ಕೋಟ್ಯಂತರ ದೇಶವಾಸಿಗಳಂತೆಯೇ ಈ ವಿಚಾರ ನನ್ನ ಹೃದಯಕ್ಕೂ ತೀರಾ ಹತ್ತಿರವಾದದ್ದು. ಅದರ ಬಗ್ಗೆ ಮಾತನಾಡುವುದು ನನ್ನ ಅದೃಷ್ಟ ಎಂದು ಭಾವಿಸಿದ್ದೇನೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ವಿಸ್ತೃತ ಯೋಜನೆಯನ್ನು ರೂಪಿಸಿದ್ದೇವೆ. ಅದಕ್ಕಾಗಿ ಸ್ವಾಯತ್ತ ಟ್ರಸ್ಟ್‌ ರಚಿಸಲಾಗುತ್ತಿದೆ. ಯಾವುದೇ ನಿರ್ಧಾರ ಕೈಗೊಳ್ಳಲೂ ಈ ಟ್ರಸ್ಟ್‌ಗೆ ಮುಕ್ತ ಸ್ವಾತಂತ್ರ್ಯವಿರುತ್ತದೆ ಎಂದರು. ಜತೆಗೆ ಅಯೋಧ್ಯೆ ತೀರ್ಪು ಬಳಿಕ ಶಾಂತಿ ಕಾಪಾಡಿದ 13 ಕೋಟಿ ಭಾರತೀಯರನ್ನು ಅಭಿನಂದಿಸುತ್ತೇನೆ ಎಂದೂ ಮೋದಿ ಹೇಳಿದರು.

ದಿಲ್ಲಿಯಲ್ಲಿ ಕಚೇರಿ
ಹೊಸದಾಗಿ ರಚನೆಯಾದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಹೆಸರಿನ ಟ್ರಸ್ಟ್‌ನ ಕಚೇರಿಯು ಹೊಸದಿಲ್ಲಿಯ ಗ್ರೇಟರ್‌ ಕೈಲಾಶ್‌ ಪ್ರದೇಶದಲ್ಲಿ ಇರಲಿದೆ ಎಂದು ಗೃಹ ಸಚಿವಾಲಯ ಮಾಹಿತಿ ನೀಡಿದೆ.

ಸುನ್ನಿ ಮಂಡಳಿಗೆ 5 ಎಕರೆ ಭೂಮಿ
ಅಯೋಧ್ಯೆಯ ಸೋನಾವಾಲ್‌ ಎಂಬಲ್ಲಿನ ಧನ್ನೀಪುರ ಗ್ರಾಮದಲ್ಲಿ ಸುನ್ನಿ ಸೆಂಟ್ರಲ್‌ ವಕ್ಫ್ ಮಂಡಳಿಗೆ 5 ಎಕರೆ ಭೂಮಿಯನ್ನು ಉತ್ತರಪ್ರದೇಶ ಸರಕಾರ ಹಂಚಿಕೆ ಮಾಡಿದೆ. ಸಿಎಂ ಯೋಗಿ ಆದಿತ್ಯನಾಥ್‌ ನೇತೃತ್ವ ದಲ್ಲಿ ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು ಎಂದು ಸರಕಾರದ ವಕ್ತಾರ ಶ್ರೀಕಾಂತ್‌ ಶರ್ಮಾ ತಿಳಿಸಿದ್ದಾರೆ.

Advertisement

ಈ ಹಿಂದೆ ರಾಮಜನ್ಮ ಭೂಮಿ ನ್ಯಾಸ್‌ ಸಿದ್ಧಪಡಿಸಿದ ವಿನ್ಯಾಸದ ಮಾದರಿಯಲ್ಲೇ ಅಯೋಧ್ಯೆ ಯಲ್ಲಿ ರಾಮ ಮಂದಿರ ನಿರ್ಮಾಣವಾಗಲಿ ಎಂದು ನಾವು ಬಯಸುತ್ತೇವೆ.
– ವಿಷ್ಣು ಸದಾಶಿವ ಕೋಕ್ಜೆ, ವಿಎಚ್‌ಪಿ ಅಧ್ಯಕ್ಷ

5 ಎಕರೆ ಭೂಮಿಯನ್ನು ನಮಗೇನಾದರೂ ಕೊಟ್ಟಿದ್ದರೆ, ನಾವು ಅಲ್ಲಿ ಮತ್ತೂಂದು ರಾಮಮಂದಿರವನ್ನು ನಿರ್ಮಿಸುತ್ತಿದ್ದೆವು.
– ವಾಸಿಂ ರಿಜ್ವಿ, ಉ.ಪ್ರದೇಶ ಶಿಯಾ ವಕ್ಫ್ ಮಂಡಳಿ ಅಧ್ಯಕ್ಷ

ಸುನ್ನಿ ವಕ್ಫ್ ಮಂಡಳಿಯು ಇಡೀ ಮುಸ್ಲಿಂ ಸಮುದಾಯದ ಪ್ರತಿನಿಧಿಯಲ್ಲ. ಸರಕಾರ ಕೊಟ್ಟ ಭೂಮಿಯನ್ನು ಅದು ಸ್ವೀಕರಿಸಿದ್ದೇ ಆದಲ್ಲಿ, ಅದನ್ನು ದೇಶದ ಮುಸ್ಲಿಮರ ನಿರ್ಧಾರ ಎಂದು ಪರಿಗಣಿಸಲಾಗದು.
– ಮೌಲಾನಾ ಯಾಸಿನ್‌ ಉಸ್ಮಾನಿ, ಎಐಎಂಪಿಎಲ್‌ಬಿ ಕಾರ್ಯಕಾರಿ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next