Advertisement

60 ಸಾವಿರ ಸಾಮಾನ್ಯ ಸೇವಾ ಕೇಂದ್ರ ಸ್ಥಾಪನೆ ಗುರಿ: ಡಾ|ಹೆಗ್ಗಡೆ

12:25 AM Oct 29, 2022 | Team Udayavani |

ಮಂಗಳೂರು: ಕೇಂದ್ರ ಸರಕಾರದ ಜನೋಪಯೋಗಿ ಯೋಜನೆಗಳನ್ನು ಜನರಿಗೆ ತಲುಪಿಸುವ ದಿಶೆಯಲ್ಲಿ ಮುಂದಿನ ಆರು ತಿಂಗಳಲ್ಲಿ ದೇಶಾದ್ಯಂತ 60 ಸಾವಿರ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ) ಸ್ಥಾಪಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ರಾಜ್ಯಸಭಾ ಸದಸ್ಯ, ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಸಭಾಂಗಣದಲ್ಲಿ ಶುಕ್ರವಾರ ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳು ಕದ್ರಿ ವಲಯ ಇವರ ಆಶ್ರಯದಲ್ಲಿ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಸಾಧನ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 40 ಲಕ್ಷ ಮಂದಿಗೆ ಇ ಶ್ರಮ್‌, 3 ಲಕ್ಷ ಮಂದಿಗೆ ಆಯುಷ್ಮಾನ್‌ ಆರೋಗ್ಯ ಕಾರ್ಡ್‌, 20 ಸಾವಿರ ಮಂದಿಗೆ ಕಿಸಾನ್‌ ಕಾರ್ಡ್‌ ನೀಡಲು ಕ್ರಮ ಕೈಗೊಳ್ಳಲಾಗಿದೆ. ಆರೋಗ್ಯ ರಕ್ಷಾ ವಿಮೆಯಡಿ 5 ಲಕ್ಷ ರೂ. ವರೆಗೆ ಆಸ್ಪತ್ರೆ ಬಿಲ್‌ನ್ನು ಸರಕಾರವೇ ಭರಿಸುತ್ತದೆ. ಸಣ್ಣ ಪುಟ್ಟ ಕಾಯಿಲೆಗಳಿಗೂ ವಿಮಾ ಮೊತ್ತ ಭರಿಸಲು ಸಾಧ್ಯ. ಸಾಲ ಪಡೆದ ಕೂಡಲೇ ವಿಮಾ ಸೌಲಭ್ಯ ಕೂಡ ಕಲ್ಪಿಸಲಾಗುತ್ತಿದ್ದು, ವೃದ್ಧರಿಗೂ ತಾತ್ಸಲ್ಯ ಯೋಜನೆ ಕಾರ್ಯಗತಗೊಳಿಸಲಾಗುತ್ತಿದೆ ಎಂದರು.

ಗ್ರಾಮೀಣಾಭಿವೃದ್ಧಿ ಯೋಜನೆಯ ಅತೀ ಹೆಚ್ಚು ಫ‌ಲಾನುಭವಿಗಳು ಇರುವುದು ದ.ಕ. ಜಿಲ್ಲೆಯ ಮಂಗಳೂರಿನಲ್ಲಿ. ಇಲ್ಲಿ ಸುಮಾರು 22.50 ಕೋಟಿ ರೂ. ಉಳಿತಾಯವಾಗಿದ್ದು, 152 ಕೋಟಿ ರೂ. ಹೊರಬಾಕಿ ಸಾಲ ಇದೆ. 1,600 ಕೋಟಿ ರೂ. ವಹಿವಾಟು ನಡೆಸಲಾಗಿದೆ ಎಂದರು.

ಶಾಸಕ ವೇದವ್ಯಾಸ ಕಾಮತ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರಕಾರ ಮಾಡಬೇಕಾದ ಕೆಲಸವನ್ನು ಶ್ರೀಕ್ಷೇತ್ರ ಧರ್ಮಸ್ಥಳದಿಂದ ಮಾಡುವ ಮೂಲಕ ಸಾಮಾಜಿಕ ಬದ್ಧತೆ ತೋರ್ಪಡಿಸುತ್ತಿದ್ದಾರೆ. ಮಹಿಳೆಯರು ಸೇರಿದಂತೆ ಸಾವಿರಾರು ಮಂದಿಗೆ ಸ್ವಾವಲಂಬನೆಯ ದಾರಿ ತೋರಿಸಿಕೊಡುವ ಮೂಲಕ ಸಾಮಾಜಿಕ ಬದಲಾವಣೆಗೆ ಡಾ| ಹೆಗ್ಗಡೆ ಅವರ ಕೊಡುಗೆ ಅಪಾರವಾದದ್ದು ಎಂದರು.

Advertisement

ಈ ಸಂದರ್ಭ ವಿವಿಧ ಫ‌ಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು. ಒಕ್ಕೂಟದ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ನೆರವೇರಿಸಲಾಯಿತು.

ಮಾಜಿ ಸಚಿವ ನಾಗರಾಜ ಶೆಟ್ಟಿ, ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ಮಾಜಿ ಮೇಯರ್‌ ಶಶಿಧರ ಹೆಗ್ಡೆ, ಪಾಲಿಕೆ ಸದಸ್ಯರಾದ ಮನೋಹರ್‌ ಶೆಟ್ಟಿ, ಶಕೀಲ ಕಾವ, ಕದ್ರಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ.ಜೆ.ಶೆಟ್ಟಿ, ಮುಜರಾಯಿ ಇಲಾಖೆ ಸಹಾಯಕ ಕಮಿಷನರ್‌ ಗುರುಪ್ರಸಾದ್‌, ಕದ್ರಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಜಯಮ್ಮ, ಬ್ಯಾಂಕ್‌ ಆಫ್ ಬರೋಡ ಮಂಗಳೂರು ಉಪ ವಲಯ ಮುಖ್ಯಸ್ಥ ಗೋಪಾಲಕೃಷ್ಣ ಆರ್‌., ಮಂಗಳೂರು ಜನಜಾಗೃತಿ ವೇದಿಕೆ ಅಧ್ಯಕ್ಷ ಮಹಾಬಲ ಚೌಟ, ಗ್ರಾಮಾಭಿವೃದ್ಧಿ ಯೋಜನ ಟ್ರಸ್ಟ್‌ ಉಡುಪಿ ಇದರ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್‌, ಉದ್ಯಮಿ ರತ್ನಾಕರ ಜೈನ್‌, ಮಂಗಳೂರು ಕೇಂದ್ರ ಒಕ್ಕೂಟ ಅಧ್ಯಕ್ಷ ಸತೀಶ್‌ ದೀಪಂ ಕುಂಪಲ, ಕದ್ರಿ ವಲಯಾಧ್ಯಕ್ಷೆ ಸುಚಿತ್ರಾ ಶಿವಾನಂದ, ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಸತೀಶ್‌ ಪಾಲ್ಗೊಂಡರು. ರೋಹಿತ್‌ ಉಳ್ಳಾಲ್‌ ಕಾರ್ಯಕ್ರಮ ನಿರೂಪಿಸಿದರು. ಸತೀಶ್‌ ಶೆಟ್ಟಿ ಸ್ವಾಗತಿಸಿದರು.

ಕೋಟಿ ಕಂಠ ಗಾಯನ
ಇದೇ ಸಂದರ್ಭ ಶಾಲಾ ವಿದ್ಯಾರ್ಥಿಗಳು, ಸ್ವಸಹಾಯ ಸಂಘ ಸದಸ್ಯೆಯರು ಸೇರಿ ಕೋಟಿ ಕಂಠ ಗಾಯನದಲ್ಲಿ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next