Advertisement

ಶೀಘ್ರ 2 ಸಾವಿರ ಗ್ರಾಮ ನ್ಯಾಯಾಲಯ ಸ್ಥಾಪನೆ: H K ಪಾಟೀಲ್‌

12:51 AM Aug 06, 2023 | Team Udayavani |

ಬ್ರಹ್ಮಾವರ: ನ್ಯಾಯದಾನ ವ್ಯವಸ್ಥೆಯನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸಿ, ಶೀಘ್ರ ಮತ್ತು ಕಡಿಮೆ ವೆಚ್ಚದಲ್ಲಿ ನ್ಯಾಯ ದೊರಕಿಸುವ ಉದ್ದೇಶದಿಂದ 2ರಿಂದ 3 ಗ್ರಾಮಗಳಿಗೆ ಒಂದರಂತೆ 2 ಸಾವಿರ ಗ್ರಾಮ ನ್ಯಾಯಾಲಯಗಳನ್ನು ಹಂತ ಹಂತವಾಗಿ ರಾಜ್ಯದಲ್ಲಿ ಆರಂಭಿಸಲಾಗುವುದು ಎಂದು ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ಹೇಳಿದರು.

Advertisement

ಅವರು ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಮತ್ತು ಬ್ರಹ್ಮಾವರ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಾವರದಲ್ಲಿ ಸ್ಥಾಪನೆಗೊಂಡಿರುವ ನೂತನ ಸಂಚಾರಿ ಸಿವಿಲ್‌ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ವಿಳಂಬ ನ್ಯಾಯ ದಾನವೆನ್ನುವುದು ನ್ಯಾಯವನ್ನು ನಿರಾಕರಿಸಿದಂತೆ ಎಂಬ ಮಾತಿದೆ. ನೊಂದವರಿಗೆ ಶೀಘ್ರ ನ್ಯಾಯ ಒದಗಿಸುವ ಉದ್ದೇಶದಿಂದ ರಾಜ್ಯದ ಸಿವಿಲ್‌ ಪ್ರೊಸೀಜರ್‌ ಕೋಡ್‌ನ‌ಲ್ಲಿ 6 ತಿಂಗಳ ಒಳಗೆ ವ್ಯಾಜ್ಯಗಳನ್ನು ವಿಲೇವಾರಿ ಮಾಡುವ ಹಾಗೂ ಪ್ರಕರಣಗಳನ್ನು 3ಕ್ಕಿಂತ ಹೆಚ್ಚು ಬಾರಿ ಮುಂದೂಡದಂತೆ ತಿದ್ದುಪಡಿ ಮಾಡಿ ರಾಷ್ಟ್ರಪತಿಗಳ ಅಂಕಿತಕ್ಕಾಗಿ ಸಲ್ಲಿಸಲಾಗಿದೆ. ಶೀಘ್ರದಲ್ಲಿ ಅಂಕಿತ ದೊರೆಯಲಿದೆ ಎಂದರು.

ವ್ಯಾಜ್ಯ ಮುಕ್ತ ಗ್ರಾಮ
ರಾಜ್ಯದಲ್ಲಿ ವ್ಯಾಜ್ಯ ಮುಕ್ತ ಗ್ರಾಮಗಳನ್ನು ನಿರ್ಮಾಣ ಮಾಡುವ ಕಲ್ಪನೆ ಇದ್ದು, ಪ್ರತೀ ಗ್ರಾಮದಲ್ಲಿ ಕನಿಷ್ಠ ಇಬ್ಬರು ಉತ್ತಮ ಕೌನ್ಸೆಲಿಂಗ್‌ ಮಾಡುವ ವ್ಯಕ್ತಿಗಳಿದ್ದಲ್ಲಿ ಇದು ಸಾಧ್ಯವಾಗಲಿದೆ. ವಕೀಲರು ಆದಷ್ಟು ತ್ವರಿತವಾಗಿ ಕಕ್ಷಿದಾರರಿಗೆ ನ್ಯಾಯ ದೊರಕಿಸಬೇಕು ಎಂದರು.

ಖಾಯಂ ನ್ಯಾಯಾಲಯ
ಬ್ರಹ್ಮಾವರದಲ್ಲಿ ಸಂಚಾರಿ ನ್ಯಾಯಾಲಯದ ಬದಲು ಖಾಯಂ ನ್ಯಾಯಾಲಯ ಆರಂಭಿಸುವಂತೆ ಮನವಿ ಬಂದಿದ್ದು, ಈ ಕುರಿತು ನ್ಯಾಯಾಂಗ ಇಲಾಖೆ ಮೂಲಕ ಅಗತ್ಯ ಕಡತ ಸಲ್ಲಿಕೆಯಾದಲ್ಲಿ 48 ಗಂಟೆಯೊಳಗೆ ಅನುಮತಿ ನೀಡಲಾಗುವುದು ಎಂದು ಪಾಟೀಲ್‌ ತಿಳಿಸಿದರು.

Advertisement

ಕರ್ನಾಟಕ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿ ಹಾಗೂ ಜಿಲ್ಲಾ ನ್ಯಾಯಾಂಗ ಕಟ್ಟಡಗಳ ಸಮಿತಿ ಅಧ್ಯಕ್ಷ ಪಿ.ಎಸ್‌. ದಿನೇಶ್‌ ಕುಮಾರ್‌ ಕಾರ್ಯಕ್ರಮ ಉದ್ಘಾಟಿಸಿದರು. ಆಡಳಿತಾತ್ಮಕ ನ್ಯಾಯಮೂರ್ತಿ ಎಂ.ಐ. ಅರುಣ್‌, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ, ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಪ್ರಭಾರ ಮುಖ್ಯ ಅಭಿಯಂತ ಕೆ.ಜಿ. ಜಗದೀಶ್‌, ಬ್ರಹ್ಮಾವರ ವಕೀಲರ ಸಂಘದ ಅಧ್ಯಕ್ಷ ಕಾಡೂರು ಪ್ರವೀಣ್‌ ಶೆಟ್ಟಿ , ಕಾರ್ಯದರ್ಶಿ ಶ್ರೀಪಾದ ರಾವ್‌, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ. ನಾಗರಾಜ್‌, ಪ್ರಧಾನ ಕಾರ್ಯದರ್ಶಿ ರೊನಾಲ್ಡ್‌ ಪ್ರವೀಣ್‌ ಕುಮಾರ್‌ ಉಪಸ್ಥಿತರಿದ್ದರು. ನ್ಯಾಯಾಧೀಶ ಶ್ಯಾಂಪ್ರಕಾಶ್‌ ಅವರು ಕೋರ್ಟ್‌ ಕಾರ್ಯಕಲಾಪಗಳಿಗೆ ಚಾಲನೆ ನೀಡಿದರು.

ಜಿಲ್ಲಾ ನ್ಯಾಯಾಧೀಶ ಶಾಂತವೀರ ಶಿವಪ್ಪ ಸ್ವಾಗತಿಸಿದರು. ಮಹಮ್ಮದ್‌ ಸುಹಾನ್‌ ಮತ್ತು ಅಖೀಲ್‌ ಹೆಗ್ಡೆ ನಿರೂಪಿಸಿದರು.

ಹೃದಯದ ಭಾವನೆ ಮೂಲಕ ನ್ಯಾಯ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌ ಮಾತನಾಡಿ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ವಕೀಲಿ ವೃತ್ತಿಯಲ್ಲಿ ತೊಡಗಿಕೊಳ್ಳಬೇಕು. ಇವರು ಕಾನೂನು ಮೂಲಕ ಮಾತ್ರವಲ್ಲದೇ ಹೃದಯದ ಭಾವನೆಗಳ ಮೂಲಕ ವಾದ ಮಾಡಿ ಕಕ್ಷಿದಾರರಿಗೆ ಶೀಘ್ರ ನ್ಯಾಯ ಕೊಡಿಸಬಲ್ಲರು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next