Advertisement

ಅಂಗವಿಕಲರೇ ಕಾರ್ಯನಿರ್ವಹಿಸಲು ಮತಗಟ್ಟೆ ಸ್ಥಾಪನೆ

01:08 PM Mar 31, 2019 | Lakshmi GovindaRaju |

ರಾಮನಗರ: ಏಪ್ರಿಲ್‌ 18ರಂದು ನಡೆಯುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಗೆ 2672 ಮತಗಟ್ಟೆಗಳು ಸಿದ್ಧವಾಗಲಿದೆ. ಪಿಂಕ್‌ ಮತಗಟ್ಟೆಗಳ ಮಾದರಿಯಲ್ಲೇ ಈ ಬಾರಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದು ಅಂಗವಿಕಲ (ಪರ್ಸನ್‌ ವಿತ್‌ ಡಿಸೆಬಿಲಿಟಿ) ಮತಗಟ್ಟೆಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.

Advertisement

ಕಳೆದ ವಿಧಾನಸಭಾ ಚುನಾವಣೆ ವೇಳೆಯಲ್ಲಿ ರಾಜ್ಯದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಪಿಂಕ್‌ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಮಹಿಳಾ ಅಧಿಕಾರಿಗಳು, ಸಿಬ್ಬಂದಿಗಳೇ ಈ ಮತಗಟ್ಟೆಗಳನ್ನು ನಿರ್ವಹಿಸಿ, ಮತದಾರರ ಪ್ರಶಂಸೆಗೆ ಪಾತ್ರರಾಗಿದ್ದರು. ಈ ಬಾರಿ ಅಂಗವಿಕಲರು ನಿರ್ವಹಿಸುವ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ.

ಅಂಗವಿಕಲರೇ ಅಧಿಕಾರಿ, ಸಿಬ್ಬಂದಿ: ಇಂತಹ ಮತಗಟ್ಟೆಗಳನ್ನು ನಿರ್ವಹಿಸುವ ಹೊಣೆಯನ್ನು ಅಂಗವಿಕಲ ಅಧಿಕಾರಿಗಳು, ಸಿಬ್ಬಂದಿಗಳೇ ವಹಿಸಲಿದ್ದಾರೆ ಎಂಬುದು ವಿಶೇಷ. ಸಾಮಾನ್ಯವಾಗಿ ಅಂಗವಿಕಲ ಸರ್ಕಾರಿ ನೌಕರರನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳುವುದಿಲ್ಲ. ಆದರೆ, ಜಿಲ್ಲೆಯ ಹಿರಿಯ ಅಧಿಕಾರಿಗಳು ಈಗಾಗಲೇ ಅಂಗವಿಕಲ ಸರ್ಕಾರಿ ನೌಕರರು, ಅಧಿಕಾರಿಗಳ ಬಳಿ ಚರ್ಚಿಸಿದ್ದಾರೆ. ಚುನಾವಣಾ ಕಾರ್ಯಕ್ಕೆ ಒಪ್ಪಿಗೆ ಸೂಚಿಸಿದವರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂಗವಿಕಲರು ನಿರ್ವಹಿಸುವ ಬೂತ್‌ಗಳು ಯಾವುವು?: ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಬೂತ್‌ ಸಂಖ್ಯೆ- 91 (ಕುಮುಂದನ್‌ ಮೊಹಲ್ಲ), ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬೂತ್‌ ಸಂಖ್ಯೆ- 169 (ಅವ್ವೆàರಹಳ್ಳಿ), ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಬೂತ್‌ ಸಂಖ್ಯೆ- 35 (ಸೋಮೇದ್ಯಾಪನಹಳ್ಳಿ) ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಬೂತ್‌ ಸಂಖ್ಯೆ- 69 (ಸ್ಪನ್‌ ಸಿಲ್ಕ್ ಮಿಲ್‌). ಈ ಮತಗಟ್ಟೆಗಳನ್ನು ಅಂಗವಿಕಲರ ಮತಗಟ್ಟೆಗಳಾಗಿ ಪರಿವರ್ತನೆಯಾಗುತ್ತವೆ.

ಮತಗಟ್ಟೆಗೆ ತಲುಪಲು ವಾಹನ ವ್ಯವಸ್ಥೆ: ಮತದಾನದಿಂದ ಯಾರೂ ಹಿಂದುಳಿಯಬಾರದು ಎಂಬ ಉದ್ದೇಶಕ್ಕೆ ಚುನಾವಣಾ ಆಯೋಗ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಕ್ರಮಗಳನ್ನು ಕೈಗೊಂಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಮತಗಟ್ಟೆಗೆ ತಲುಪಲು ಆಯೋಗವೇ ವಾಹನ ವ್ಯವಸ್ಥೆ ಮಾಡಿತ್ತು.

Advertisement

ಪ್ಲೇಸ್ಟೋರ್‌ನಲ್ಲಿ ಸಿಗುವ ಚುನವಣಾ ಆ್ಯಪ್‌ ಮೂಲಕ ಅಂಗವಿಕಲರು ಎಪಿಕ್‌ ಕಾರ್ಡ್‌ನಲ್ಲಿರುವ ಸ್ಥಳದಿಂದ ತಾವು ಮತ ಚಲಾಯಿಸುವ ಮತಗಟ್ಟೆಗೆ ತೆರಳಲು ವಾಹನಕ್ಕೆ ಬೇಡಿಕೆ ಇಡಬಹುದಾಗಿದೆ. ಮತಗಟ್ಟೆಯ ಆವರಣದಲ್ಲಿ ವೀಲ್‌ಚೇರ್‌ಗಳು ಮತ್ತು ರ್‍ಯಾಂಪ್‌ ವ್ಯವಸ್ಥೆ ಇರುತ್ತದೆ. ಅಂಗವಿಕಲರು ಮತ ಚಲಾಯಿಸಲು ಸರದಿಯಲ್ಲಿ ಕಾಯಬೇಕಾಗಿಲ್ಲ.

ಹೀಗಾಗಿ ಅಂಗವಿಕಲರು ಯಾವುದೇ ಅತಂಕ ಇಲ್ಲದೆ ಮತದಾನಕ್ಕೆ ತೆರಳಬಹುದಾಗಿದೆ. ಸ್ವೀಪ್‌ ಸಮಿತಿ ಈಗಾಗಲೇ ವಿಧಾನಸಭಾವಾರು ಅಂಗವಿಕಲರ ಪಟ್ಟಿ ಸಿದ್ಧಪಡಿಸಿದೆ. ಯಾವ ಮತಗಟ್ಟೆಗಳಲ್ಲಿ ಅಂಗವಿಕಲರು ಇದ್ದಾರೆ ಎಂಬುದನ್ನು ಗುರುತಿಸಲಾಗಿದೆ. ಇಂತಹ ಮತಗಟ್ಟೆಗಳಲ್ಲಿ ರ್‍ಯಾಂಪ್‌ಗ್ಳನ್ನು ಈಗಾಗಲೇ ನಿರ್ಮಿಸಲಾಗಿದೆ.

ಯಾವ ವಿಧಾನಸಭಾ ಕ್ಷೇತ್ರದಲ್ಲಿ ಎಷ್ಟು ಅಂಗವಿಕಲ ಮತದಾರರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 13109 ಅಂಗವಿಕಲ ಮತದಾರರಿದ್ದಾರೆ. ಈ ಪೈಕಿ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ 2062 ಮಂದಿ, ಕನಕಪುರ ತಾಲೂಕಿನಲ್ಲಿ 2321 ಜನ, ಚನ್ನಪಟ್ಟಣ ತಾಲೂಕಿನಲ್ಲಿ 3310 ಮಂದಿ, ಮಾಗಡಿಯಲ್ಲಿ 2337, ಕುಣಿಗಲ್‌ನಲ್ಲಿ 2293, ರಾಜರಾಜೇಶ್ವರಿ ನಗರದಲ್ಲಿ 172, ಬೆಂಗಳೂರು ದಕ್ಷಿಣದಲ್ಲಿ 221, ಆನೇಕಲ್‌ ತಾಲೂಕಿನಲ್ಲಿ 393 ಮಂದಿ ಅಂಗವಿಕಲ ಮತದಾರರಿದ್ದಾರೆ.

ರಾಮನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದು ಅಂಗವಿಕಲ ಮತಗಟ್ಟೆಯನ್ನು (ಪಿಡಬುಡಿ) ಸ್ಥಾಪಿಸಲಾಗುತ್ತಿದೆ. ಈ ಮತಗಟ್ಟೆಗಳಲ್ಲಿ ಎಲ್ಲಾ ಅಂಗವಿಕಲರೇ ಕಾರ್ಯನಿರ್ವಹಿಸಲಿದ್ದಾರೆ. ಈಗಾಗಲೇ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಅಧಿಕಾರಿ, ಸಿಬ್ಬಂದಿಯ ಪಟ್ಟಿಯನ್ನು ಸಿದ್ಧಪಡಿಸಿಲಾಗಿದೆ.
-ಬಿ.ಪಿ.ವಿಜಯ್‌, ಅಪರ ಜಿಲ್ಲಾಧಿಕಾರಿ, ರಾಮನಗರ ಜಿಲ್ಲೆ

* ಬಿ.ವಿ.ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next