ಹಾಸನ: ಶಿಕ್ಷಣ ಸಂಸ್ಥೆಗಳು ಮಾಹಿತಿ ಒದಗಿಸುತ್ತವೆ. ವಿದ್ಯಾರ್ಥಿಗಳು ಮೌಲ್ಯಗಳನ್ನು ರೂಢಿಸಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಾಧೀಶ ಸಂತೋಷ್‌ಹೆಗ್ಡೆ ಅವರು ಸಲಹೆ ನೀಡಿದರು. ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್) ಹಮ್ಮಿಕೊಂಡಿದ್ದ 9ನೇ ಘಟಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡುತ್ತವೆ. ಆದರೆ ವಿದ್ಯಾರ್ಥಿಗಳು ಅದನ್ನಾಧರಿಸಿ ಮೌಲ್ಯಗಳನ್ನು ರೂಢಿಸಿಕೊಂಡು ಜೀವನ ರೂಪಿಸಿಕೊಳ್ಳಬೇಕು. ವಿದ್ಯೆಗೆ ಕೊನೆಯಿಲ್ಲ. ಪರಿಶ್ರಮ ಹಾಗೂ ಪೋಷಕರ ತ್ಯಾಗದ ಫಲವಾಗಿ ಪದವಿ ಪಡೆಯುವ ವಿದ್ಯಾರ್ಥಿಗಳಿಗೆ ಸಾಮಾಜಿಕ ಜವಬ್ದಾರಿಯಿರುತ್ತದೆ. ಹಾಗಾಗಿ ಸಮಾಜವನ್ನು ಸರಿದಾರಿಗೆ ತರುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಇದನ್ನು ಸಾಕಾರಗೊಳಿಸಲು ಶ್ರಮಿಸಿ ಎಂದು ಎಂದರು.
ಮೌಲ್ಯಗಳ ಕಡೆಗಣನೆ: ಇತ್ತೀಚಿನ ದಿನಗಳಲ್ಲಿ ಜನರು ಹಣಕ್ಕೆ ಹೆಚ್ಚಿನ ಬೆಲೆ ನೀಡುತ್ತಿದ್ದು ಮೌಲ್ಯಗಳ ಕಡೆಗಣಿಸುತ್ತಿದ್ದಾರೆ. ತಪ್ಪುಮಾಡಿದವನಿಗೆ ಸಮಾಜವೇ ಶಿಕ್ಷೆ ನೀಡುವಂತಾಗಬೇಕು. ಪ್ರತಿಯೊಬ್ಬ ವ್ಯಕ್ತಿಗೂ ಜೀವನದ ಪ್ರತಿ ಘಟ್ಟದಲ್ಲೂ ಅವರದೇ ಆದ ಜವಬ್ದಾರಿಗಳಿರುತ್ತವೆ. ಸಮಾಜದಲ್ಲಿ ಶಾಂತಿ ಸೌಹಾರ್ದ ಉಳಿಯಬೇಕಾದರೆ ಹಿರಿಯರ ಆದರ್ಶ ಪಾಲಿಸಿ ಸಮಾಜ ಕಟ್ಟುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಜೀವನದಲ್ಲಿ ಗುರಿಯಿರಲಿ: ಯುವ ಸಮೂಹವು ಗುರಿಯಿಟ್ಟುಕೊಂಡು ಸಾಧನೆಯ ಹಾದಿಯಲ್ಲಿ ಸಾಗಬೇಕು. ಮೋಸದ ಸಂಪಾದನೆಯಲ್ಲಿ ನೆಮ್ಮದಿಯಿಲ್ಲ. ಕೋಟಿ ಸಂಪಾದಿಸಿದರೂ ಕಾನೂನು ಚೌಕಟ್ಟಿನಲ್ಲಿ ಸಂಪಾದಿಸಬೇಕು. ಮಾಂಸದ ಮುದ್ದೆಯಾಗಿ ಹುಟ್ಟುವ ನಾವು ಮೌಲ್ಯಗಳ ಅಳವಡಿಸಿಕೊಳ್ಳುವ ಮೂಲಕ ಮಾನವರಾಗಿ ಸಾಯಬೇಕು ಎಂದು ಹೇಳಿದರು.
ವೈದ್ಯರ ಜವಾಬ್ದಾರಿ ಹೆಚ್ಚಾಗಿದೆ: ಸಮಾಜದಲ್ಲಿ ವೈದ್ಯರ ಜವಾಬ್ದಾರಿ ಹೆಚ್ಚಿದೆ. ಮತ್ತೂಬ್ಬರ ಹಿತಕ್ಕಾಗಿಯೇ ಸದಾ ಶ್ರಮಿಸಬೇಕು. ಸಾಮಾಜಿಕ ಹಾಗೂ ಮಾನವೀಯ ಮೌಲ್ಯಗಳನ್ನು ಕಾಪಾಡಿಕೊಂಡು ವೈದ್ಯರು ಕರ್ತವ್ಯ ನಿರ್ವಹಿಸಬೇಕು. ಜೀವನವೆಂದರೆ ನಾವು ಮಾತ್ರವಲ್ಲ. ನಮ್ಮ ಸುತ್ತಮುತ್ತಲಿನವರೂ ನೆಮ್ಮದಿಯಿಂದ ಬದುಕಬೇಕು. ಹಾಗಾಗಿ ವೈದ್ಯರು ಸಮಾಜ ಒಳಿತಿಗಾಗಿ ಶ್ರಮಿಸಬೇಕು ಎಂದರು.
ಕರ್ತವ್ಯ ನಿಷ್ಠೆ ಪಾಲಿಸಿ: ಡಾ. ಎಂ.ಆರ್. ರಾಜಗೋಪಾಲ್ ಮಾತನಾಡಿ, ವೈದ್ಯರು ಕರ್ತವ್ಯ ನಿಷ್ಠೆ ಪಾಲಿಸಬೇಕು. ವೈದ್ಯರನ್ನು ನಂಬಿ ಬರುವ ರೋಗಿಗಳ ನಂಬಿಕೆಯನ್ನು ವೈದ್ಯರು ಉಳಿಸಿಕೊಳ್ಳಬೇಕು. ಹಣ ಗಳಿಕೆಗಾಗಿ ವೃತ್ತಿಧರ್ಮ ಮರೆಯಬಾರದು. ಇಂದು ಪದವಿ ಸ್ವೀಕರಿಸಿದ ವಿದ್ಯಾರ್ಥಿಗಳು ಮಾನವೀಯ ಮೌಲ್ಯ ರೂಢಿಸಿಕೊಂಡು ಕೆಲಸ ನಿರ್ವಹಿಸಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 103 ವಿದ್ಯಾರ್ಥಿಗಳಿಗೆ ಪದವಿ ಪ್ರದಾನಮಾಡಲಾಯಿತು. ಜಿಲ್ಲಾಧಿಕಾರಿ ಆರ್. ಗಿರೀಶ್, ಹಿಮ್ಸ್ ನಿರ್ದೇಶಕ ರವಿಕುಮಾರ್, ಪ್ರಾಂಶುಪಾಲ ಕೆ.ಆರ್. ನಾಗೇಶ್, ವೈದ್ಯಕೀಯ ಅಧೀಕ್ಷಕ ಡಾ. ಕೃಷ್ಣ ಮೂರ್ತಿ, ಮುಖ್ಯ ಆಡಳಿತಾಧಿಕಾರಿ ಕಲ್ಪಶ್ರೀ ಮತ್ತಿತರರು ಉಪಸ್ಥಿತರಿದ್ದರು.