ಆಳಂದ: ಜ.4ರಂದು ಪಟ್ಟಣದ ಹೊರವಲ ಯದ ನೂತನ ತಾಲೂಕು ಆಡಳಿತ ಸೌಧ ಆವರಣದಲ್ಲಿ ಸಂವಿಧಾನ ಶಿಲ್ಪಿ ಭಾರತರತ್ನ ಡಾ| ಬಿ.ಆರ್. ಅಂಬೇಡ್ಕರ್ ಮೂರ್ತಿ ಸ್ಥಾಪನೆ ಕಾಮಗಾರಿಗೆ ಶಾಸಕ ಸುಭಾಷ ಗುತ್ತೇದಾರ ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು.
ಜ. 4ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾಲೂಕು ಆಡಳಿತ ಸೌಧ ಉದ್ಘಾಟನೆ ನೆರವೇರಿಸಲಿದ್ದು, ಇದೇ ವೇಳೆ ಮುಖ್ಯಮಂತ್ರಿಗಳಿಂದಲೇ ಡಾ| ಅಂಬೇಡ್ಕರ್ ಮೂರ್ತಿ ಅನಾವರಣ ಕೈಗೊಳ್ಳಲು ನಿರ್ಧರಿಸಿ ಕಟ್ಟೆ ನಿರ್ಮಾಣಕ್ಕೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದ್ದರಿಂದ ಕಾಮಗಾರಿ ಭರದಿಂದ ಸಾಗಿದೆ.
ಕಳೆದ 12 ವರ್ಷಗಳ ಹಿಂದೆ ಪುರಸಭೆಯಿಂದ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಕಂಚಿನ ಪ್ರತಿಮೆ ಪ್ರತಿಷ್ಠಾಪನೆ ಕೈಗೊಳ್ಳಲು ಮುಂದಾಗಿ ತಂದಿರಿಸಿದ ಪ್ರತಿಮೆಗೆ ಸೂಕ್ತ ಸ್ಥಳ ದೊರೆಯದೇ ಇದ್ದಿದ್ದರಿಂದ ಈ ಕಾರ್ಯ ನನೆಗುದಿಗೆ ಬಿದ್ದಿತ್ತು. ಪುರಸಭೆ ಆವರಣದಲ್ಲೇ ಪ್ರತಿಮೆಯನ್ನು ಟೀನ್‌ಶೆಡ್‌ನಲ್ಲಿ ಇಡಲಾಗಿತ್ತು. ಈಗ ಆಡಳಿತ ಸೌಧ ಆವರಣದಲ್ಲೇ ಅನಾವರಣ ಕಾರ್ಯ ನಡೆಯಲಿದೆ.
ಪಟ್ಟಣದಲ್ಲಿ ಪ್ರತಿಮೆ ಸ್ಥಾಪನೆ ಕೈಗೊಳ್ಳು ವಂತೆ ಹಲವು ಬಾರಿ ಡಾ| ಅಂಬೇಡ್ಕರ್ ಅಭಿಮಾನಿಗಳು, ದಲಿತಪರ ಸಂಘಟನೆಗಳು ಪ್ರತಿಭಟನೆ ಹೋರಾಟ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ತಾಲೂಕು ನೂತನ ಆಡಳಿತ ಸೌಧ ಆವರಣದಲ್ಲೇ ಮೂರ್ತಿ ಸ್ಥಾಪನೆಗೆ ಶಾಸಕರು ಹಸಿರು ನಿಶಾನೆ ತೋರಿದ್ದರಿಂದ ಪ್ರಕರಣ ಸುಖಾಂತ್ಯವಾಗಿದೆ.
ಜಿಪಂ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ, ರಾಜಶೇಖರ ಮಲ್ಲಶೆಟ್ಟಿ, ಮಲ್ಲಣ್ಣಾ ನಾಗೂರೆ, ಬಿಜೆಪಿ ಮಂಡಲ ಅಧ್ಯಕ್ಷ ಆನಂದ ಪಾಟೀಲ, ಮಲ್ಲಿಕಾರ್ಜುನ ಕಂದಗುಳೆ, ದಯಾನಂದ ಶೇರಿಕಾರ, ಶಿವರಾಮ ಮೋಘಾ, ಡಾ| ಡಿ.ಜಿ.ಸಾಗರ, ಮಹಾದೇವ ಧನ್ನಿ, ಚನ್ನು ಕಾಳಕಿಂಗೆ, ಆನಂದ ಗಾಯಕವಾಡ, ರಾಜು ಮುದಗಲೆ ಮತ್ತಿತರರು ಇದ್ದರು.