ಬೆಂಗಳೂರು: ಮಹಿಳಾ ಸಾಹಿತಿಗಳಾದ ಶಾಂತಾದೇವಿ ಮಾಳವಾಡ, ತ್ರಿವೇಣಿ, ಶ್ಯಾಮಲಾದೇವಿ ಬೆಳಗಾಂವಕರ, ಎಂ.ಕೆ.ಇಂದಿರಾ ಅವರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಬೇಕು ಎಂದು ಸಾಹಿತಿ ಡಾ.ವೀಣಾ ಶಾಂತೇಶ್ವರ ಒತ್ತಾಯಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ಲೇಖಕಿಯರ ಸಂಘದಿಂದ ನಗರದಲ್ಲಿ ಹಮ್ಮಿಕೊಂಡಿದ್ದ “ಎಂ.ಕೆ.ಇಂದಿರಾ ಹಾಗೂ ವಾಣಿ ಜನ್ಮ ಶತಮಾನೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಾರಸ್ವತ ಲೋಕಕ್ಕೆ ಮಹತ್ತರ ಕೊಡುಗೆ ನೀಡಿರುವ ಈ ನಾಲ್ವರು ಮಹಿಳಾ ಲೇಖಕಿಯರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ, ಅವರ ಕೊಡುಗೆಯನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ಆಗಬೇಕಿದೆ. ಈ ನಿಟ್ಟಿನಲ್ಲಿ ಕಸಾಪ ಮತ್ತು ಸರ್ಕಾರ ಯೋಜನೆ ರೂಪಿಸಬೇಕು ಎಂದು ಮನವಿ ಮಾಡಿದರು.
ಎಂ.ಕೆ. ಇಂದಿರಾ ಮತ್ತು ವಾಣಿ ಅವರು ಪ್ರಸಿದ್ಧ ಲೇಖಕಿಯರಾಗಿದ್ದಾರೆ. 1960ರ ದಶಕದಲ್ಲಿ ಅವರು ರಚಿಸಿದ ಅನೇಕ ಕೃತಿಗಳನ್ನು ಜನಸಾಮಾನ್ಯರು ಮೆಚ್ಚಿ ಓದಿದ್ದಾರೆ. ಆದರೆ ವಿಮರ್ಶಕರಿಂದ ಅವರಿಗೆ ಸಿಗಬೇಕಾದ ನ್ಯಾಯ ಸಿಗಲಿಲ್ಲ. ವಿಶ್ವವಿದ್ಯಾನಿಲಯಗಳು ಹೊರತಂದಿರುವ ಮಹಿಳಾ ಸಾಹಿತ್ಯ ಚರಿತ್ರೆಯ ಪುನರ್ ಮೌಲ್ಯಮಾಪದಲ್ಲಿ ಎಂ.ಕೆ.ಇಂದಿರಾ ಮತ್ತು ವಾಣಿ ಅವರಿಗೆ ಅನ್ಯಾಯವಾಗಿದೆ. ಕನ್ನಡದ ಮಹಾನ್ ಲೇಖಕಿಯರಲ್ಲಿ ಸ್ಥಾನ ಪಡೆದಿರುವ ಇವರುಗಳಿಗೆ ಇನ್ನು ಮುಂದಾದರೂ ನ್ಯಾಯ ಸಿಗುವಂತೆ ಮಾಡುವ ಅಗತ್ಯತೆ ಇದೆ ಎಂದು ಹೇಳಿದರು.
ಆಶಯ ನುಡಿಗಳನ್ನಾಡಿದ ವಿಜಯ ಪುರದ ಅಕ್ಕಮಹಾದೇವಿ ವಿವಿ ಕುಲಪತಿ ಡಾ.ಸಬಿಹಾ ಭೂಮಿಗೌಡ, ಕನ್ನಡ ಸಾಹಿತ್ಯ ಅಕಾಡೆಮಿ ಹೊರತಂದಿರುವ ಸಾಲುದೀಪಗಳು ಸಂಪುಟದಲ್ಲಿ ವಾಣಿ ಮತ್ತು ಇಂದಿರಾ ಅವರ ಕುರಿತು ಯಾವುದೇ ಲೇಖನಗಳಿಲ್ಲ. ಇಂದಿನ ಯುವ ತಲೆಮಾರಿಗೆ ಈ ಲೇಖಕಿಯರನ್ನು ಪರಿಚಯಿಸುವ ಕಾರ್ಯವನ್ನು ಕನ್ನಡ ಸಾಹಿತ್ಯ ಅಕಾಡೆಮಿ ಮಾಡಬೇಕಿತ್ತು ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮನು ಬಳಿಗಾರ್ ವಹಿಸಿದ್ದರು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಡಾ.ವಸುಂಧರಾ ಭೂಪತಿ ಉಪಸ್ಥಿತರಿದ್ದರು.
ವಿದ್ವತ್ ಗೋಷ್ಠಿಗಳು: ಎಂ.ಕೆ.ಇಂದಿರಾ ಸಾಹಿತ್ಯ ಕುರಿತಾದ ಗೋಷ್ಠಿಯ ಅಧ್ಯಕ್ಷತೆ ಯನ್ನು ನೀಳಾದೇವಿ ವಹಿಸಿದ್ದರು. ಇಂದಿರಾ ಅವರ ಕತೆಗಳ ಕುರಿತಾಗಿ ಡಾ.ಎಚ್.ಎಲ್.ಪುಷ್ಪಾ, ಕಾದಂಬರಿಗಳ ಕುರಿತು ವೈ.ಕೆ.ಸಂಧ್ಯಾಶರ್ಮ, ಚಲನಚಿತ್ರಗಳ ಬಗ್ಗೆ ಆರತಿ ಆನಂದ ವಿಷಯಗಳನ್ನು ಮಂಡಿಸಿದರು. ವಾಣಿಯವರ ಸಾಹಿತ್ಯ ಕುರಿತ ಗೋಷ್ಠಿಗೆ ಡಾ.ಸರಸ್ವತಿ ಚಿಮ್ಮಲಗಿ ಅಧ್ಯಕ್ಷತೆ ವಹಿಸಿದ್ದರು. ವಾಣಿಯವರ ಕತೆ ಕುರಿತು ಡಾ.ವಿಜಯಶ್ರೀ ಸಬರದ, ಕಾದಂಬರಿ ಬಗ್ಗೆ ಡಾ.ಪ್ರಜ್ಞಾಮತ್ತಿಹಳ್ಳಿ, ಚಲನಚಿತ್ರದ ಕುರಿತು ಡಾ.ಭಾರತೀ ಕಾಸರಗೋಡು ವಿಷಯ ಮಂಡಿಸಿದರು.