ಚಿತ್ತಾಪುರ: ಕ್ರೈಸ್ತ ಸಮಾಜಕ್ಕೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಕಾರ್ಯಕರ್ತರು ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸಾಂಕೇತಿಕ ಧರಣಿ ನಡೆಸಿದರು.
ನಂತರ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಪ್ಪ ಎಂ. ವಾಡೇಕಾರ್ ಮಾತನಾಡಿ, ರಾಜ್ಯ ಸರ್ಕಾರ ಎಲ್ಲ ಸಮುದಾಯಗಳ ಹೆಸರಿನ ಮೇಲೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಿದೆ. ಆದರೆ ಕ್ರೈಸ್ತ ಸಮಾಜಕ್ಕೆ ನಿಗಮ ಮಂಡಳಿ ಸ್ಥಾಪಿಸಿಲ್ಲ. ಆದ್ದರಿಂದ ಕ್ರೈಸ್ತ ಸಮಾಜದ ಜನರ ಬಹಳ ದಿನಗಳ ಬೇಡಿಕೆಯಾದ ನಿಗಮ ಮಂಡಳಿ ಕೂಡಲೇ ಸ್ಥಾಪಿಸಬೇಕು. ವಾಡಿ ಪಟ್ಟಣದಲ್ಲಿರುವ ಡಾ| ಬಿ.ಆರ್. ಅಂಬೇಡ್ಕರ್ ಕಲ್ಯಾಣ ಮಂಟಪ ಕಾಮಗಾರಿ ಅರ್ಧಕ್ಕೆ ನಿಂತು 10 ತಿಂಗಳು ಕಳೆದಿವೆ. ಸಂಬಂಧಿಸಿದ ಅಧಿಕಾರಿಗಳ ಅನೇಕ ಬಾರಿ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಕೂಡಲೇ ಕಾಮಗಾರಿ ಪ್ರಾರಂಭಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಒತ್ತಾಯಿಸಿದರು.
ಲಾಡ್ಲಾಪುರದಲ್ಲಿ ದಲಿತರಿಗಾಗಿ ಕೂಡಲೇ ರುದ್ರಭೂಮಿ ಮಂಜೂರು ಮಾಡಿಸಬೇಕು. ವಾಡಿ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಮೂತ್ರಾಲಯ ನಿರ್ಮಾಣ ಮಾಡಲು ಆದೇಶ ನೀಡಬೇಕು. ಹಲಕಟ್ಟಾ ಗ್ರಾಮದಲ್ಲಿನ ಚಾಂದ್‌ಪಾಶಾ ಮನೆಯಿಂದ ಹರಿಜನ ವಾಡಾದ ವರೆಗೆ ಚರಂಡಿ ನಿರ್ಮಾಣ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಅವರು ಆಗ್ರಹಿಸಿದರು.
ಗ್ರೇಡ್-2 ತಹಶೀಲ್ದಾರ್ ರವೀಂದ್ರ ದಾಮಾ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ದಲಿತ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಜೈವಂತ್ ಆರ್, ಜಿಲ್ಲಾ ಉಪಾಧ್ಯಕ್ಷ ಬಾಬು ಓರಣಿಚಿ, ತಾಲೂಕು ಅಧ್ಯಕ್ಷ ಸಾಬಣ್ಣ ಲಾಡ್ಲಾಪುರ, ಪ್ರಧಾನ ಕಾರ್ಯದರ್ಶಿ ಮಾನಪ್ಪ ಹುಡೇಕರ್, ಗ್ರಾಪಂ ಸದಸ್ಯ ಬಾಸ್ಕರ್, ಆರ್‌ಪಿಐ ಉಪಾಧ್ಯಕ್ಷ ವಸಂತ ಕಾಂಬಳೆ, ಅಶೋಕ ನಂದೂರಕರ್, ಡಾ| ಶ್ಯಾಂ ಸುಂದರ್ ರೇಡ್ ಸನ್ ಇದ್ದರು.