Advertisement

ಸಮಾಜದ ಮುನ್ನೆಡೆಗೆ ಮಾರ್ಕ್ಸ್ ವಾದ ಚಿಂತನೆ ಅತ್ಯಗತ್ಯ: ಎಸ್‌ಯುಸಿಐ

08:05 PM Aug 05, 2021 | Team Udayavani |

ವಾಡಿ(ಚಿತ್ತಾಪುರ): ಭಾರತದಲ್ಲಿ ಬಾಹ್ಯವಾಗಿ ಬಿಜೆಪಿ ಮುಖವಾಡದ ಆಡಳಿತ ಕಂಡು ಬಂದರೂ ಆಂತರಿಕದಲ್ಲಿ ಅಂಬಾನಿ ಹಾಗೂ ಅದಾನಿಯಂತಹ ದೊಡ್ಡ ಬಂಡವಾಳಶಾಹಿ ಶೋಷಕರು ಸರಕಾರವನ್ನು ನಿಯಂತ್ರಿಸುತ್ತಿದ್ದಾರೆ ಎಂದು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಕಾಮ್ರೇಡ್ ಆರ್.ಕೆ.ವೀರಭದ್ರಪ್ಪ ಆರೋಪಿಸಿದರು.

Advertisement

ಪಟ್ಟಣದ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಪಕ್ಷದ ಸಂಸ್ಥಾಪಕ ಅಧ್ಯಕ್ಷ, ಮಹಾನ್ ಮಾರ್ಕ್ಸ್ ವಾದಿ ಚಿಂತಕ ಕಾಮ್ರೇಡ್ ಶಿವದಾಸ ಘೋಷ್ ಅವರ 45ನೇ ಸ್ಮರಣ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಕೊರೊನಾ ಸಾಂಕ್ರಾಮಿಕ ರೋಗದಿಂದ ಇಡೀ ದೇಶ ತತ್ತರಿಸಿ ಹೋಗಿದೆ. ನೆರೆ ಹಾವಳಿಯಿಂದ ಬೆಳೆ ನಾಶವಾಗಿ ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ಬಡವರ ಬದುಕು ಕಷ್ಟಕ್ಕೆ ಸಿಲುಕಿದೆ. ರಾಜ್ಯ ಸರಕಾರ ಅಧಿಕಾರದ ಹಪಹಪಿಯಲ್ಲಿ ಮುಳುಗಿದೆ. ಜನಸಾಮಾನ್ಯರಿಗೆ ಒಳ್ಳೆಯ ದಿನಗಳ ಕನಸು ತೋರಿಸಿ ಕರಾಳ ದಿನಗಳನ್ನು ಕೊಟ್ಟಿರುವ ಪ್ರಧಾನಿ ಮೋದಿ ಖಾಸಗೀಕರಣದ ಹೆಸರಿನಲ್ಲಿ ದೇಶದ ಸಂಪತ್ತನ್ನು ಬಂಡವಾಳಶಾಹಿಗಳ ಪಾದಕ್ಕೆ ಅರ್ಪಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾರ್ಕ್ಸ್ ವಾದ ಚಿಂತನೆಯಡಿ ದೇಶದ 24 ರಾಜ್ಯಗಳಲ್ಲಿ ಜನತಾಂತ್ರಿಕ ಹೋರಾಟಗಳನ್ನು ಬೆಳೆಸುತ್ತಿರುವ ಎಸ್‌ಯುಸಿಐ (ಸಿ) ಪಕ್ಷ ನೈಜ ಕ್ರಾಂತಿಕಾರಿ ಪಕ್ಷವಾಗಿ ಹೊರಹೊಮ್ಮಿದೆ. ಇದರ ಸಂಸ್ಥಾಪಕ ಅಧ್ಯಕ್ಷ ಕಾಮ್ರೇಡ್ ಶಿವದಾಸ ಘೋಷ್ ಅವರು ಮಾರ್ಕ್ಸ್ ವಾದಿ ದೃಷ್ಠಿಕೋನದಡಿ ದೇಶದ ಬಂಡವಾಳಶಾಹಿ ವ್ಯವಸ್ಥೆಯನ್ನು ಸೋಲಿಸಲು ಹೋರಾಟಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಕಾಗಿ ಪಕ್ಷದ ಲಕ್ಷಾಂತರ ಜನ ಕ್ರಾಂತಿಕಾರಿ ಕಾರ್ಯಕರ್ತರು ಜನ ಸಂಘಟನೆಯಲ್ಲಿ ತೊಡಗಿದ್ದಾರೆ. ರೈತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳೆ ಮತ್ತು ದುಡಿಯುವ ಜನಗಳ ದನಿಯಾಗಿ ಕೆಲಸ ಮಾಡುತ್ತಿದೆ. ಸಮಾಜದಲ್ಲಿ ಸಾಮಾಜಿಕ ಕ್ರಾಂತಿಯ ಗುರಿಯೊಂದಿಗೆ ಘೋಷಣೆ ಮೊಳಗಿಸುತ್ತಿರುವ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷವು ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ಸಾಂಸ್ಕೃತಿಕ ಚಳುವಳಿಯನ್ನೂ ಅಷ್ಟೇ ಪ್ರಬಲವಾಗಿ ಮುನ್ನೆಡೆಸುತ್ತಿದೆ ಎಂದರು.

ಪಕ್ಷದ ಕಾರ್ಯಕರ್ತರಾದ ಯೇಸಪ್ಪಾ ಕೇದಾರ, ಶರಣು ಹೇರೂರ, ರಾಜು ಒಡೆಯರಾಜ್, ದೌಲಪ್ಪ ದೊರೆ, ಅವಿನಾಶ ಒಡೆಯರ, ರಿತ್ವಿಕ್ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next