Advertisement

ಕಲಾವಿದರಿಗೆ ಅಗತ್ಯ ನೆರವು: ಉಮಾಶ್ರೀ ಭರವಸೆ

11:21 AM Jul 19, 2017 | Team Udayavani |

ಬೆಂಗಳೂರು: ಕಲಾವಿದರಿಗೆ ಪ್ರೋತ್ಸಾಹದ ಜತೆಗೆ ಅಗತ್ಯ ನೆರವು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಭರವಸೆ ನೀಡಿದರು. ನಗರದ ರವೀಂದ್ರ ಕಲಾಕ್ಷೇತ್ರ ಸಂಸ ಆವರಣದಲ್ಲಿ ಕರ್ನಾಟಕ ರಾಜ್ಯ ಕನ್ನಡ ವೇದಿಕೆ ಆಯೋಜಿಸಿದ್ದ ಸವಿತಾ ಸಂಗೀತ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

Advertisement

ರಾಜ್ಯ ಸರ್ಕಾರ ಕಲೆ, ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಲೇ ಇದೆ. ನಾಡು, ಸಂಸ್ಕೃತಿ, ಕಲೆಗೆ ಬೇಕಾದಷ್ಟು ನೆರವನ್ನು ನೀಡಿದ್ದು, ಇನ್ನೂ ಹೆಚ್ಚಿನ ಸಹಕಾರ ನೀಡಲಾಗುವುದು ಎಂದು ಹೇಳಿದರು. ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಸವಿತಾ ಸಮಾಜದ ವಿದ್ಯಾರ್ಥಿಗಳಿಗೆ ಡೋಲು ಮತ್ತು ನಾದಸ್ವರ ಸಂಗೀತ ಕಲೆಗಳ ಉಚಿತ ತರಬೇತಿ ನೀಡುತ್ತಿದೆ.

ಜತೆಗೆ ಉಚಿತ ಊಟ, ವಸತಿ ಮತ್ತು ತರಬೇತಿ ಭತ್ಯೆಯನ್ನು ನೀಡುತ್ತಿದ್ದು, ಆಸಕ್ತ ಯುವ ಸಂಗೀತ ಕಲಾವಿದರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.  ಸಂಗೀತ ತರಬೇತಿಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸಬೇಕು ಎಂದು ವೇದಿಕೆ ಅಧ್ಯಕ್ಷ ಎಂ.ಎಸ್‌.ಮುತ್ತುರಾಜ್‌, ಸಚಿವೆ ಉಮಾಶ್ರೀ ಅವರಿಗೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವೆ ಉಮಾಶ್ರೀ, ಈ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಕ್ರಮಕೈಗೊಳ್ಳಲಿದೆ. ಸರ್ಕಾರ ಕಲಾವಿದರ ಪರವಾಗಿದೆ ಎಂದು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಸಮ್ಮೇಳನ ಅಧ್ಯಕ್ಷ ಎನ್‌.ಮುನಿನಾರಾಯಣಪ್ಪ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಚಲನಚಿತ್ರ ನಿರ್ಮಾಪಕ ಮದನ್‌ಪಟೇಲ್‌, ಸವಿತಾ ಸಮಾಜದ ಮುತ್ತುರಾಜ್‌ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next