Advertisement

ಪ್ರಬಂಧ: ಹಾಡು ತುಂಬುವ ಕೆಲಸ

12:30 AM Mar 10, 2019 | |

ಶೀರ್ಷಿಕೆ ಸ್ವಲ್ಪ ವಿಚಿತ್ರವೆನಿಸಬಹುದು. ಪಾತ್ರೆಗೆ ನೀರು ತುಂಬಿದಂತೆ, ಡಬ್ಬಿಗೆ ಊಟ ತುಂಬಿದಂತೆ ನಾನು ಅನೇಕ ಬಾರಿ ಹಾಡು ತುಂಬಿಸುವ ಕೆಲಸವನ್ನು ತುಂಬಾ ಇಷ್ಟದಿಂದ  ಮಾಡುತ್ತೇನೆ. ಕಾರಿನಲ್ಲಿ ಊರಿಗೆ ಅಥವಾ ಎಲ್ಲಿಗಾದರೂ ದೂರದ ಪ್ರಯಾಣ  ಮಾಡುವಾಗ ದಾರಿ ಖರ್ಚಿಗೆ ಕುರುಕಲು ತಿಂಡಿ, ಉಡಲು ಬಟ್ಟೆಯನ್ನು  ಚೀಲಕ್ಕೆ ತುಂಬಿದಷ್ಟೇ ಜತನದಿಂದ ಡ್ರೈವಿಗೆ ಹಾಡುಗಳನ್ನು  ತುಂಬುತ್ತೇನೆ. ಊರಿಗೆ ಹೋಗುವಾಗ ಬೆಂಗಳೂರಿನಿಂದ 396 ಕಿ.ಮೀ. ಪ್ರಯಾಣಿಸಿ ನಮ್ಮೂರು ತಲುಪಲು ಸರಿಸುಮಾರು ಏಳು ತಾಸು ಹಿಡಿಯುತ್ತದೆ. ಒಂದು ಹಾಡಿಗೆ ಸರಾಸರಿ ನಾಲ್ಕು ನಿಮಿಷ ಎಂದು ಹಿಡಿದರೂ ಒಟ್ಟು ನೂರು ಹಾಡುಗಳನ್ನು ಲ್ಯಾಪ್‌ಟಾಪಿನ ಹಾಡಿನ ಕಣಜದಿಂದ ಡ್ರೈವಿಗೆ ತುಂಬಬೇಕು. ಅನೇಕ ಬಾರಿ ಕೇಳಿದ ಹಾಡುಗಳಾದರೂ ಲಾಂಗ್‌ಡ್ರೈವ್‌ ಹೋಗುವಾಗ, ಸೂರ್ಯಾಸ್ತಕ್ಕೆ ಸಾಕ್ಷಿಯಾಗಿ, ಮುಂಜಾವಿನ ಸಮಯದಲ್ಲಿ, ರಸ್ತೆಯ ಇಕ್ಕೆಲಗಳಲ್ಲಿ ಪ್ರಕೃತಿ ಸೌಂದರ್ಯವನ್ನು ಸವಿಯುತ್ತ ಪ್ರಯಾಣಿಸುವಾಗ ದಾರಿ ಸಾಗಿದ್ದೇ ಗಮನಕ್ಕೆ ಬರುವುದಿಲ್ಲ. ಹಾಗಾಗಿ, ನಾನು ಹಾಡುಗಳನ್ನು ಅಳೆದೂ ತೂಗಿ ತುಂಬಿಸುತ್ತೇನೆ ಎಂದರೂ ಸರಿಯೇ. ಆ ಸಂಗ್ರಹದಲ್ಲಿ ಎಲ್ಲ ಪ್ರಕಾರದ ಹಾಡುಗಳಿರಬೇಕು. ಕನ್ನಡ, ಹಿಂದಿ ಚಿತ್ರಗೀತೆಗಳು, ಭಾವಗೀತೆಗಳು, ಜಾನಪದ ಗೀತೆಗಳು, ನನ್ನೆಜಮಾನರ ಆಯ್ಕೆಯ ಭಕ್ತಿಗೀತೆಗಳು, ಪ್ರಸಿದ್ಧ ವಾದಕರ ವಾದ್ಯ ಸಂಗೀತ, ಸಿನೆಮಾ ಹಾಡುಗಳ ಇನ್‌ಸ್ಟ್ರೆóಮೆಂಟಲ್‌ ಮ್ಯೂಸಿಕ್‌- ಹೀಗೆ ನನ್ನ  ಚಿಕ್ಕ ಮಗನ ಆಯ್ಕೆಯ ನರ್ಸರಿ ರೈಮ್ಸ… ಹೊರತುಪಡಿಸಿ ಎಲ್ಲವನ್ನೂ ಒಳಗೊಂಡ ಮನಸ್ಸಿಗೆ ಮುದ ನೀಡುವ ಉತ್ತಮ ಪ್ಯಾಕೇಜ್‌ ಆಗಿರಬೇಕು ಆ ಸಂಗ್ರಹ. ಒಮ್ಮೆ ಸೆಲೆಕ್ಟ್ ಮಾಡಿ ತುಂಬಿಸಿದ ಹಾಡುಗಳನ್ನು ಯಾವ ಕಾರಣಕ್ಕೂ ಮುಂದಿನ ಹಾಡಿಗೆ ಜಂಪ್‌ ಹೊಡೆಸುವ ಹಾಗಿಲ್ಲ ಎಂಬ ಕರಾರಿದೆ. ಎಲ್ಲರ ಆಯ್ಕೆಯ ಹಾಡುಗಳನ್ನೂ ಎಲ್ಲರೂ ಕೇಳಿಸಿಕೊಳ್ಳಲೇಬೇಕು. ಹಾಡುಗಳೆಲ್ಲವೂ ಶಫ‌ಲ್‌ ಆಗಿ ಬರುವುದರಿಂದ ಮುಂದಿನ ಹಾಡು ಯಾವುದು ಎಂದು ತಿಳಿದಿರುವುದಿಲ್ಲ. ಬರುವ ಹಾಡು ಮೊದಲೇ ಗೊತ್ತಿದ್ದರೆ ಹಾಡು ಹೊರಹೊಮ್ಮುವ ಆ ಕ್ಷಣದ ಖುಷಿ ಇರುವುದೇ ಇಲ್ಲ.  

Advertisement

ಮ್ಯೂಸಿಕ್‌ ಸಿಸ್ಟಮ್ಮಿನಲ್ಲಿ ತಂತಾನೇ  ಹಾಡು ಹರಿಯುವ ವಿಷಯದಲ್ಲಿ  ನಾವು ಕಳೆದ ಬಾರಿ ಊರಿಗೆ ಹೋಗುವಾಗ ನಮ್ಮೆಲ್ಲರಿಗೂ ಒಂದು ವಿಶಿಷ್ಟ ಅನುಭವವಾಗಿತ್ತು. ರಾಷ್ಟ್ರೀಯ ಹೆ¨ªಾರಿ 48, ವಾಜಪೇಯಿ ಸರ್ಕಾರದಲ್ಲಿ ಕಾರ್ಯಾರಂಭವಾದ ಸುವರ್ಣ ಚತುಷ್ಪಥ ರಸ್ತೆಯಲ್ಲಿ ನಾವು ಬೆಂಗಳೂರು, ತುಮಕೂರು, ಚಿತ್ರದುರ್ಗ, ಹರಿಹರ ಮಾರ್ಗವಾಗಿ ನಮ್ಮೂರು ತಲುಪಬೇಕು. ಜೋಡಿ ರಸ್ತೆಯ ಮಧ್ಯದಲ್ಲಿ ಕಣಗಿಲೆ, ದಾಸವಾಳ ಹಾಗೂ ಕಾಗದದ ಹೂವುಗಳು ಮನಸ್ಸಿಗೆ ಮುದ ನೀಡುತ್ತವೆ. ಚಿತ್ರದುರ್ಗ ಇನ್ನೂ ಇಪ್ಪತ್ತು ಕಿ.ಮೀ. ಇದೆ ಎನ್ನುವಾಗಲೇ ದೂರದ ಗುಡ್ಡಗಳ ಮೇಲೆ ಕೈಬೀಸಿ ಕರೆಯುವ ಮೂರು ರೆಕ್ಕೆಯ ಫ್ಯಾನುಗಳು (ವಿಂಡ್‌ ಮಿಲ್‌) ನಮಗೆ “ಹ್ಯಾಪಿ ಜರ್ನಿ’ ಎಂದು ಹೇಳಿ ಮುಗುಳ್ನಕ್ಕಂತೆ ಭಾಸವಾಗುತ್ತದೆ. ಇನ್ನು ರಾಷ್ಟ್ರೀಯ ಹೆ¨ªಾರಿಯಿಂದಲೇ ದೂರದಲ್ಲಿ ಗೋಚರಿಸುವ ದುರ್ಗದ ಕೋಟೆಯನ್ನು ಪ್ರತಿಬಾರಿ ಹೋಗುವಾಗಲೂ ನಮ್ಮ ಮಕ್ಕಳಿಗೆ ಅಲ್ಲಿ ಅದೇ ದುರ್ಗದ ಕೋಟೆ, “ಚಿತ್ರದುರ್ಗದಾ ಕಲ್ಲಿನ ಕೋಟೆ’ ಎಂದು ತೋರಿಸುತ್ತೇವೆ. ಪ್ರತಿ ಪ್ರಯಾಣದಲ್ಲೂ ಮುಂದಿನ ಬಾರಿ ಊರಿಗೆ ಹೋಗುವಾಗ ಅಲ್ಲಿಗೆ ಹೋಗೋಣ ಎಂಬ ಹುಸಿ ಸಮಾಧಾನ ಮಕ್ಕಳಿಗೆ. ಹೀಗೆ ಸಮಾಧಾನ ಮಾಡಿ ಕಾರಿನ ಕಿಟಕಿಯಿಂದಲೇ ಚಿತ್ರದುರ್ಗದ ವೀಕ್ಷಣೆ ಮಾಡುತ್ತಿರುವಾಗ ನಮ್ಮ ಮ್ಯೂಸಿಕ್‌ ಸಿಸ್ಟಮ್‌ “ಕನ್ನಡ ನಾಡಿನ ವೀರ ರಮಣಿಯ ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ…’ ಹಾಡನ್ನು ಹರಿಸಿತ್ತು. ಆ ಹಾಡು ಹೊರ ಹೊಮ್ಮಿದ ಕ್ಷಣ ನಮಗೆಲ್ಲ ಯಾವತ್ತೂ ಮರೆಯಲಾಗದ ಹರ್ಷಾಘಾತವಾಗಿತ್ತು!  ಬೇಕಿದ್ದರೆ ಆ ಹಾಡನ್ನು ದುರ್ಗ ಬರುತ್ತಿದ್ದಂತೆ ನಾವೇ ಮೊಬೈಲಿನಲ್ಲಿ ಪ್ಲೇ ಮಾಡಬಹುದು. ಆದರೆ, ಕಾಕತಾಳೀಯವೆಂಬಂತೆ  ಹಾಡು ಹರಿದುಬಂದಿದ್ದು ಜೀವನದಲ್ಲಿ ಮರೆಯಲಾಗದ ಅನುಭವವಾಗಿತ್ತು. ನಾನು ತುಂಬಿದ ಹಾಡುಗಳು ಹರಿದು ಬರುವಾಗ ನಮ್ಮ ಪ್ರಯಾಣದಲ್ಲಿ ನವಿಲೂರು, ಸಿರಿಗೆರೆ, ಹೊನ್ನೂರು ಎಂಬ ಊರುಗಳ ಬೋರ್ಡ್‌ ಹೆದ್ದಾರಿಯಲ್ಲಿ ಬಾಣದ ಗುರುತಿನೊಂದಿಗೆ ಕಾಣಿಸುತ್ತದೆ. ಮೈಸೂರು ಮಲ್ಲಿಗೆಯಲ್ಲಿ ಉಲ್ಲೇಖವಾಗಿರುವ ಈ ಊರುಗಳ ಹೆಸರು ಓದುವಾಗಲೇ ಮ್ಯೂಸಿಕ್‌ ಸಿಸ್ಟಮ್ಮಿನಲ್ಲಿ , ಸಿರಿಗೆರೆಯ ನೀರಿನಲಿ ಬಿರಿದ ತಾವರೆಯಲ್ಲಿ  ಅಥವಾ ಒಂದಿರುಳು ಕನಸಿನಲಿ ನನ್ನವಳಾ ಕೇಳಿದೆನು ಚಂದ ನಿನಾಗಾವುದೆಂದು? ನಮ್ಮೂರು ಹೊನ್ನೂರು ನಿಮ್ಮೂರು ನವಿಲೂರು … ಹಾಡು ಹರಿದರೆ ಆಗುವ ಮತ್ತೂಂದು ಹರ್ಷಾಘಾತಕ್ಕಾಗಿ ನಾನು ಪ್ರತಿಬಾರಿಯೂ ಆ ಹಾಡುಗಳನ್ನು ಡ್ರೈವಿನಲ್ಲಿ ತಪ್ಪದೇ ತುಂಬಿಸುತ್ತೇನೆ. ಮುಂದೆ ನಾವು ಹರಿಹರದಿಂದ ಹಿರೇಕೆರೂರು ಶಿರಾಳಕೊಪ್ಪ ಮಾರ್ಗದಲ್ಲಿ ಸಂಚರಿಸುವಾಗ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದ ಮಾವಿನ ಮರಗಳು ರಸ್ತೆಗೆ ಚಪ್ಪರ ಹಾಕಿದಂತೆ ಕಮಾನು ಮಾದರಿಯಲ್ಲಿ ಬೆಳೆದಿವೆ. ಆಗೆಲ್ಲ ನನಗೆ ಬಿ.ಜಿ.ಎಲ್‌. ಸ್ವಾಮಿಯವರು ಮದರಾಸಿನ ಪ್ರಸಿಡೆನ್ಸಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾಗಿನ ರಸಮಯ ಅನುಭವಗಳನ್ನು ಹಂಚಿಕೊಂಡ ಪ್ರಾಧ್ಯಾಪಕನ ಪೀಠದಲ್ಲಿ ಪುಸ್ತಕದಲ್ಲಿ  ಬರುವ ಸಸ್ಯಶಾಸ್ತ್ರದಲ್ಲಿ ಸಂಗೀತ ಕಾಂಡ ಎಂಬ ಪ್ರಬಂಧ ನೆನಪಾಗುತ್ತದೆ. ಅದರಲ್ಲಿ ಇಬ್ಬರು ಸಂಶೋಧನಾರ್ಥಿಗಳು ಒಬ್ಬ ಪಿಟೀಲು ನುಡಿಸುವವನನ್ನು ಪ್ರತಿದಿನ ಅರ್ಧಗಂಟೆಯಂತೆ ಗಿಡದ ಎದುರಿನಲ್ಲಿ ಕುಳಿತು ಪಿಟೀಲು ನುಡಿಸುವಂತೆ ಏರ್ಪಾಟು ಮಾಡುತ್ತಾರೆ. ನಾಲ್ಕು ವರ್ಷಗಳಿಂದ ಹೂಬಿಡದ ಮಲ್ಲಿಗೆ ಗಿಡದಲ್ಲಿ ಹೂವು ಅರಳುತ್ತದೆ. ಆ ಪ್ರಸಂಗವನ್ನು ಸ್ವಾಮಿಯವರು ತುಂಬಾ ರಸವತ್ತಾಗಿ ಹೀಗೆ ವರ್ಣಿಸಿದ್ದಾರೆ. 

ದೈನಂದಿನ ವಾರ್ತಾಪತ್ರಿಕೆಗಳಲ್ಲಿ ಅದ್ಭುತ ಸಂಶೋಧನಾ ಫ‌ಲಿತಾಂಶಗಳು ಪ್ರಕಟವಾಗತೊಡಗಿದವು. “ಮಾಯಾಮಾಳವ ಗೌಳವನ್ನು ಆಲಿಸಿದ ಬದನೇಕಾಯಿ ಸಾಧಾರಣಕ್ಕಿಂತ ಮೂರರಷ್ಟು ಬೆಳೆಯಿತು’, “ಸಂಗೀತ ಸುಧೆಯಿಲ್ಲದೇ ನಾಲ್ಕಂಗುಲ ಎತ್ತರ ಬೆಳೆದ ಕೊತ್ತಂಬರಿ ಧನ್ಯಾಸಿ ರಾಗವನ್ನು ಕೇಳಿ ಏಳು ಅಂಗುಲ ಎತ್ತರ ಬೆಳೆಯಿತು’, “ಶಂಕರಾಭರಣದ ಸವಿಯನ್ನುಂಡ ಬೆಂಡೇಕಾಯಿ ಸಾಧಾರಣಕ್ಕಿಂತ ಮೂರಂಗುಲ ಉದ್ದ ನೀಟಿತು’ ಹಾಗಾಗಿ ನನ್ನ ತಲೆಗೂ ಒಂದು ಯೋಚನೆ ಬರುತ್ತದೆ. ಈ ಮಾವಿನ ಮರಗಳು  ಚಿಕ್ಕ ಸಸಿಗಳಾಗಿದ್ದಾಗ ಹಿಂದೆ ಅಲ್ಲಿ ಹಸು, ಕುರಿ ಮೇಯಿಸುವ ಯಾವಾಗಲೂ ರೇಡಿಯೋ ಕೈಯಲ್ಲಿ ಹಿಡಿದುಕೊಂಡು ಓಡಾಡುವ ದನಗಾಹಿ ಹುಡುಗರು ಪ್ರತಿದಿನ ಗಿಡಗಳಿಗೆ ರೇಡಿಯೋದಲ್ಲಿ ಬರುವ ಚಿತ್ರಗೀತೆಗಳನ್ನು (ಪ್ರಣಯ ಗೀತೆಗಳು) ಕೇಳಿಸಿ ಆ ಗಿಡಗಳು ಒಂದನ್ನೊಂದು ಆಲಂಗಿಸಿಕೊಂಡು ಕಮಾನಿನ ಹಾಗೆ ಬೆಳೆದಿವೆಯೇನೋ ಎಂಬ ಕಲ್ಪನೆ ಮೂಡುತ್ತದೆ.

ಸುಮ್ಮನೆ ಒಂದೆಡೆ ಕುಳಿತು ಅಥವಾ ಮನೆಯಲ್ಲಿ ಕೆಲಸ ಮಾಡುವಾಗ ಹಾಡು ಕೇಳುವುದಕ್ಕೂ ರಸ್ತೆಯಲ್ಲಿ ಪಯಣಿಸುವಾಗ ಹಾಡು ಆಲಿಸುವುದಕ್ಕೂ ತುಂಬಾ ವ್ಯತ್ಯಾಸವಿದೆ. ವಾಹನಗಳು ಜೋರಾಗಿ ಚಲಿಸುತ್ತಿದ್ದರೂ ಪಕ್ಕದ ಬೆಟ್ಟಗುಡ್ಡಗಳು, ಹಸಿರು ಮರಗಳು, ನದಿಗಳು, ತಿಳಿನೀರಿನ ಕೆರೆಗಳು ಹಾಡಿನ ಕೇಳುವಿಕೆಗೆ ಇಂಬು ಕೊಡುತ್ತದೆ. ಹಾಡಿನ ಟೋನಿಗೆ ನಮ್ಮ ಮೂಡನ್ನು ತಕ್ಷಣ ಏರಿಳಿಸುವ ಕಲೆ ಸಿದ್ಧಿಸಿಕೊಳ್ಳಬೇಕು ಅಷ್ಟೆ. ರಸ್ತೆ ಪಕ್ಕದ ಹಸಿರಾದ ಗ¨ªೆಗಳು, ವಿವಿಧ ತರಕಾರಿ ಬೆಳೆಗಳು, ಹೂವಿನ ಗಿಡಗಳ ಸೌಂದರ್ಯವನ್ನು  ಆಸ್ವಾದಿಸುತ್ತಾ ಕಿಶೋರ್‌ ಕುಮಾರ್‌ ಹಾಡಿದ ರೋಮ್ಯಾಂಟಿಕ್‌ ಹಾಡುಗಳ ವಾದ್ಯ ಸಂಗೀತವನ್ನು ಆಲಿಸುತ್ತ ಇರುವಾಗ ಮಧ್ಯೆ ಜಯತು ಜಯ ವಿಠಲಾ… ನಿನ್ನ ನಾಮವು ಶಾಂತಿ ಧಾಮವು…  ಎಂದು ಮುಂದಿನ ಹಾಡು ಹರಿದಾಗ ತಕ್ಷಣ ಭಕ್ತಿರಸ ಉಕ್ಕಿಸಿಕೊಳ್ಳುವ ಕಲೆ ನನ್ನಂಥವರಿಗೆ ಇನ್ನೂ ಸಿದ್ಧಿಸಿಲ್ಲ ಅಥವಾ ಪೂರ್ತಿ ಮೆಲಾಂಕಲಿಯÇÉೇ ತೇಲಿಸುವ ದೇವರು ಹೊಸೆದ ಪ್ರೇಮದ ದಾರ… ಆಡಿಸುವಾತ ಬೇಸರ ಮೂಡಿ ಆಟ ಮುಗಿಸಿದಾ… ರೀತಿಯ ನಾನೇ ಸೆಲೆಕ್ಟ್ ಮಾಡಿ ನನ್ನಿಷ್ಟದ ಹಾಡುಗಳ ಪಟ್ಟಿಯಲ್ಲಿ  ಸೇರಿಸಿಕೊಂಡರೂ ಒಂದೆರಡು ಬಾರಿ ಈ ಹಾಡುಗಳೆಲ್ಲ ಈಗ ಯಾಕೆ ಬಂತೋ? ಎಂದು ನಾನು ಯೋಚಿಸಿದ್ದೂ ಇದೆ. 

ನಾನು ಇತ್ತೀಚಿಗೆ ಚಿತ್ರಗೀತೆಗಳನ್ನೆಲ್ಲ ಹಾಡುಗಳಿಗಿಂತ ಹೆಚ್ಚಾಗಿ ವಾದ್ಯ ಸಂಗೀತದಲ್ಲೇ ತುಂಬಿಸಿಕೊಳ್ಳುತ್ತೇನೆ. ಒಂದೊಂದು ವಾದ್ಯದಲ್ಲೂ ಹಾಡುಗಳು ಬಲು ಸೊಗಸಾಗಿರುತ್ತವೆ ಕೇಳಲಿಕ್ಕೆ.  ಹಾಡುಗಳ ಸಾಹಿತ್ಯದ ಬಗ್ಗೆ ಆಗುವ ಅನಗತ್ಯ ಚರ್ಚೆಗಳಿಗೂ ಆಸ್ಪದ ವಿರುವುದಿಲ್ಲ. ಚಿತ್ರಗೀತೆಗಳನ್ನು ಕೇಳುವಾಗ ನಾನು ಮತ್ತು ನನ್ನವರ ಮಧ್ಯೆ ಆ ಹಾಡಿನ ಸಾಹಿತ್ಯದ ಬಗ್ಗೆ ವಾದ-ವಿವಾದಗಳಾಗುತ್ತವೆ. “ಕನ್ನಡದ ಪ್ರಣಯ ಗೀತೆಗಳಲ್ಲಿ ಮುಕ್ಕಾಲು ಪಾಲು ಬರೀ ಹೆಣ್ಣಿನ ಸೌಂದರ್ಯ ಹೊಗಳಿ, ಅವಳನ್ನು ಆರಾಧಿಸಿ ಅಟ್ಟಕ್ಕೇರಿಸುವ ಗೀತೆಗಳೇ, ಗಂಡಸರನ್ನು ಹೊಗಳುವ ಗೀತೆಗಳು ತುಂಬ ಕಡಿಮೆ’ ಎಂಬುದು ನನ್ನ ಗಂಡನ ದೂರಾಗಿತ್ತು. ಒಂದು ದಿನ ನಾನು ಬಿಡುವು ಮಾಡಿಕೊಂಡು ಗಂಡಸರನ್ನು ಆರಾಧಿಸುವ ಹೊಗಳಿ ಅಟ್ಟಕ್ಕೇರಿಸುವ ಒಂದಷ್ಟು ಗೀತೆಗಳನ್ನು ಪಟ್ಟಿ ಮಾಡಿ ಅವರ ಮುಂದೆ ಹಿಡಿದೆ. “ಆ ಗೀತೆಗಳ ರಚನಾಕಾರರನ್ನೂ ಪತ್ತೆ ಹಚ್ಚು’ ಎಂದರು. ನಾನು ಹುಡುಕಿದಾಗ  ಆ ಎಲ್ಲ ಹಾಡುಗಳೂ ವಿಜಯನಾರಸಿಂಹ, ಉದಯ ಶಂಕರ್‌ ಇಲ್ಲಾ ದೊಡ್ಡ ರಂಗೇಗೌಡರ ರಚನೆಗಳೇ ಆಗಿದ್ದವು! ಆಗ ಅವರು, “ನಿಮ್ಮ  ಕವಯಿತ್ರಿಯರಿಗೆಲ್ಲ ಇಂಥದಕ್ಕೆಲ್ಲ ಸಮಯವೆಲ್ಲಿ?’ ಎಂದು ನನ್ನತ್ತ ದುರುಗುಟ್ಟಿದಾಗ,  “ಅಬ್ಟಾ! ನಾನಂತೂ ಕವಯಿತ್ರಿ ಅಲ್ಲ’ ಎಂದು ನಕ್ಕು, “ನನಗೆ ಕವನ ಬರೆಯಲು ಬರುವುದೇ ಇಲ್ಲ’ ಎಂದು ಸಮುಜಾಯಿಷಿ ಕೊಟ್ಟಿದ್ದೆ. 

Advertisement

ಹಾಡುಗಳನ್ನು ತುಂಬಿಸುವ ಇನ್ನೊಂದು ಅವಕಾಶ ನನಗೆ ನಮ್ಮ ಅಪಾರ್ಟ್‌ಮೆಂಟಿನಲ್ಲಿ ನಾವು ಆಚರಿಸುವ ಹಬ್ಬಗಳು ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಯಾರಿ ನಡೆಸುವಾಗ ಸಿಗುತ್ತದೆ.  ಪ್ರೇಕ್ಷಕರು ಬಂದು ಕುಳಿತು ಇನ್ನೂ ಕಾರ್ಯಕ್ರಮ ಪ್ರಾರಂಭವಾಗದಿದ್ದಾಗ ಅಥವಾ ಕಾಫಿ-ಟೀ ವಿರಾಮದಲ್ಲಿ ಒಳ್ಳೆಯ ಸಂಗೀತ ಕಿವಿಯ ಮೇಲೆ ಬೀಳುತ್ತಿರಲಿ ಎಂದು ನಾನು ಆಯಾ ಕಾರ್ಯಕ್ರಮಗಳ ಥೀಮಿಗೆ ಸಂಬಂಧಿಸಿದಂತೆ ಹಾಡುಗಳನ್ನು ಹುಡುಕಿ ಹುಡುಕಿ  ತುಂಬುತ್ತೇನೆ. ಸಂಕ್ರಾಂತಿಗಾದರೆ ಕೆಲವು ಜಾನಪದ ಗೀತೆಗಳು, ಕೆಲವು ಹಬ್ಬಗಳಿಗೆ ಆಯಾ ದೇವರ ಭಕ್ತಿಗೀತೆಗಳು, ಕನ್ನಡ ರಾಜ್ಯೋತ್ಸವಕ್ಕೆ ಅಂತೂ ಬೇಜಾನ್‌ ಗೀತೆಗಳು ಸಿಗುತ್ತವೆ. ವಿಶ್ವ ಪರಿಸರ ದಿನ, ವಿಶ್ವ ಮಹಿಳಾ ದಿನಗಳಿಗೆಲ್ಲ ಬೇಕಾದ ಗೀತೆಗಳು ಬೇಕಷ್ಟು ಸಂಖ್ಯೆಯಲ್ಲಿ  ಸಿಗುವುದಿಲ್ಲ. ಕೆಲವೊಮ್ಮೆ ಸಿಕ್ಕರೂ ಅಲ್ಲಿರುವ ಫಾಮ್ಯಾìಟ್‌ ನನ್ನ ಪ್ಲೇಯರ್‌ನಲ್ಲಿ ಹಾಡಲು ಒಲ್ಲೆ ಎನ್ನುತ್ತದೆ. ಅಂತಹ ಹಾಡುಗಳನ್ನು ಬೇರೊಂದು ಫಾಮ್ಯಾìಟಿಗೆ ಪರಿವರ್ತಿಸಿ ಹಾಕುವಷ್ಟು ಸಮಯ ಇರುವುದಿಲ್ಲ. ಕೆಲವೊಂದು ಹಾಡುಗಳನ್ನು ನೆಟ್‌ಗೆ ಏರಿಸಿದವರು ಇಳಿಸುವ ಆಯ್ಕೆಯನ್ನೇ ಕೊಟ್ಟಿರುವುದಿಲ್ಲ. ಆಗೆಲ್ಲ ಅಡ್ಡದಾರಿ ಹಿಡಿದು ಆ ಹಾಡುಗಳನ್ನು  ಇಳಿಸಿಕೊಳ್ಳಬೇಕಾಗುತ್ತದೆ. ಅದೆಲ್ಲ ಸಮಯ ಮತ್ತು ತಾಳ್ಮೆ ಬೇಡುವ ಕೆಲಸ. ಆಗೆಲ್ಲ ನನ್ನ ಕೈ ಹಿಡಿದಿದ್ದು ಪ್ರಸಿದ್ಧ ಸಂಗೀತಕಾರರ ವಾದ್ಯ ಸಂಗೀತ. ಸೆಲೆಕ್ಟ್ ಮಾಡಿ ತುಂಬಿಸಿಟ್ಟ ಒಂದಷ್ಟು ರಾಗಗಳು ಒಂದೆರಡು ಗಂಟೆಗಳ ಗ್ಯಾಪ್‌ ಫಿಲ್ಲಿಂಗಿಗೇನೂ ತೊಂದರೆ ಇಲ್ಲದಂತೆ ಮೊಳಗುತ್ತಿರುತ್ತದೆ. 

ಹಾಡು ತುಂಬಿಸುವ ವಿಚಾರದಲ್ಲಿ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದ ನೆನಪುಗಳು ಅಂದರೆ ನಾವು ಚಿಕ್ಕವರಿದ್ದಾಗ ನಮ್ಮಪ್ಪ ಖಾಲಿ ಕ್ಯಾಸೆಟ್ಟಿನಲ್ಲಿ ನಮಗೆ ಬೇಕಾದ ಹಾಡುಗಳನ್ನು ತುಂಬಿಸಿಕೊಂಡು ಬರುತ್ತಿದ್ದರು. ನಾವು ನಾಲ್ಕು ಜನ ಮಕ್ಕಳಾದ್ದರಿಂದ ಒಬ್ಬೊಬ್ಬರು ಒಂದು ಕ್ಯಾಸೆಟ್ಟಿಗೆ  ತುಂಬಿಸಲು ಚೀಟಿಯಲ್ಲಿ ಮೂರು ಹಾಡುಗಳನ್ನು ಬರೆಯಬಹುದಿತ್ತು. ಆ ಹನ್ನೆರಡು ಹಾಡುಗಳಲ್ಲಿ ಕೆಲವೊಮ್ಮೆ ಎಲ್ಲ ಹಾಡುಗಳೂ ಅವರ ಸಂಗ್ರಹದಲ್ಲಿ ಇರುತ್ತಿರಲಿಲ್ಲ. ಆಗ ಅವರ ಆಯ್ಕೆಯ ಯಾವುದೋ ಒಂದು ಗೀತೆಯನ್ನು ತುಂಬಿಸಿಕೊಡುತ್ತಿದ್ದರು. ಪೇಟೆಗೆ ಹೋದ ತತ್‌ಕ್ಷಣ ಕ್ಯಾಸೆಟ್‌ ಅಂಗಡಿಯಲ್ಲಿ ಲಿಸ್ಟ್‌ ಕೊಟ್ಟು ಹೋದರೆ ಕೆಲಸ ಮುಗಿಸಿಕೊಂಡು ಬರುವಷ್ಟರಲ್ಲಿ  ಕ್ಯಾಸೆಟ್‌ ರೆಡಿ ಆಗಿರುತ್ತಿತ್ತು. ಕೆಲವೊಮ್ಮೆ ತುಂಬಿದ ಹಾಡುಗಳನ್ನು ನಾವು ಅಕ್ಕ-ತಂಗಿಯರು ನಮ್ಮ ಆಯ್ಕೆ ಹಾಡುಗಳನ್ನು ಮಾತ್ರ ಪದೇ ಪದೇ ರಿವೈಂಡ್‌ ಮಾಡಿ ಕೇಳುತ್ತಿದ್ದೆವು. ನಾನಂತೂ ಹೆಚ್‌. ಎಸ್‌ ವೆಂಕಟೇಶಮೂರ್ತಿ ಸಾಹಿತ್ಯವಿರುವ  ಬಣ್ಣದ ಹಕ್ಕಿ ಕ್ಯಾಸೆಟ್ಟಿನ ಅಮ್ಮ ಅಮ್ಮ ಅಮ್ಮ ನಮ್ಮ ತೋಳಿಗೆ ರೆಕ್ಕೆ ಹಚ್ಚು… ಸೊಂಟಕೆ ಬೆಳ್ಳಿ ಪಟ್ಟಿ ಕಟ್ಟಿ ಹಕ್ಕಿ ಪುಚ್ಚ ಚುಚ್ಚು ಹಾಡನ್ನು ಟೇಪ್‌ ರೆಕಾರ್ಡರ್‌ ಹಾಳಾಗುವಷ್ಟು ರಿವೈಂಡ್‌ ಮಾಡುವುದನ್ನು ನೋಡಲಾಗದೆ ನಮ್ಮಪ್ಪ ಒಂದೇ ಕ್ಯಾಸೆಟ್ಟಿನಲ್ಲಿ ಅದೊಂದೇ ಹಾಡನ್ನು ಹನ್ನೆರಡು ಬಾರಿ ಬರುವಂತೆ ರೆಕಾರ್ಡ್‌ ಮಾಡಿಸಿಕೊಂಡು ಬಂದಿದ್ದರು. ಈಗ ಮೊಬೈಲಿನಲ್ಲಿ ಕೆಲವೊಮ್ಮೆ  ದಿನವಿಡೀ ಒಂದೇ ಹಾಡನ್ನು ಕೇಳುವಾಗಲೆಲ್ಲ ಆಗಿನ ಕಾಲದಲ್ಲಿ ನಮ್ಮಪ್ಪ ಟೇಪ್‌ ರೆಕಾರ್ಡರ್‌ ಹಾಳಾಗಬಾರದೆಂದು ಕಂಡುಕೊಂಡ ಆ ಐಡಿಯಾ ಬಗ್ಗೆ ಹೆಮ್ಮೆ ಎನಿಸುತ್ತದೆ. 

ವಿದ್ಯಾ ಹೊಸಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next