Advertisement

ಪ್ರಬಂಧ: ಚಳಿ ಚಳಿ ತಾಳೆವು !

12:30 AM Feb 10, 2019 | |

ಚುಮು ಚುಮು ಚಳಿಗೆ ಬಿಸಿ ಬಿಸಿ ಕಾಫಿ. ಆಹಾ… ಅಂತ ಯಾರಾದ್ರೂ ಅತಿ ರಮ್ಯವಾಗಿ ಚಳಿಯ ಗುಣಗಾನ ಮಾಡಲು ಶುರು ಹಚ್ಚಿಕೊಂಡರೆ ಈಗೀಗಂತೂ ಸಿಟ್ಟು , ಅಸಹನೆ ಒಮ್ಮೆಲೆ ಪುಟಿದೇಳದಿರದು. ಈ ಮೊದಲು ನನ್ನ ಪಾಲಿಗೂ ಪರಮಾಪ್ತವೇ ಆಗಿದ್ದ ಚಳಿ, ಈಗೀಗ ಅದು ತಂದೊಡ್ಡುವ ತರಹೇವಾರಿ ತಾಪತ್ರಯಗಳ ಕಾರಣಕ್ಕೆ ಅಸಹನೀಯವಾಗಿ ಮಾರ್ಪಡುತ್ತಿದೆ.

Advertisement

ಬೆಳಕು ಹರಿಯುವ ವೇಳೆ ಮತ್ತು ಕತ್ತಲಾವರಿಸಿದ ಮೇಲೆ ಆವರಿಸುವ ತೀವ್ರ ಚಳಿಯೊಂದಿಗೆ ಏಗುವವರೆಲ್ಲರೂ ಒಂದಲ್ಲ ಒಂದು ಕಾರಣಕ್ಕೆ ಮೈ ಕೊರೆಯುವ ತನ್ನ ಚಾಳಿ ಬಿಡದ ಚಳಿಗೆ ಹಿಡಿಶಾಪ ಹಾಕುವವರೇ. ಅದರಲ್ಲೂ ಬೆಳಗ್ಗೆ ಬೇಗ ಎದ್ದು ಕೂತು ಓದಿದ್ರೆ ತಲೆಗೆ ಚೆನ್ನಾಗಿ ಹತ್ತುತ್ತೆ ಎನ್ನುವ ನಿಲುವಿಗೆ ಜೋತು ಬೀಳುವ ತಂದೆ-ತಾಯಂದಿರ ಕೈಗೆ ಸಿಕ್ಕಿ ಬೀಳುವ ನತದೃಷ್ಟ ವಿದ್ಯಾರ್ಥಿಗಳ ಪಾಲಿಗಂತೂ ಚಳಿ ಖಳನಾಯಕನೇ ಸರಿ. 

ಇದೊಂದು ವರ್ಷ ಕಷ್ಟಪಟ್ಟು ಓದು ಸಾಕು. ಎಸ್ಸೆಸೆಲ್ಸಿ ಎಲ್ಲದಕ್ಕೂ ತಳಪಾಯವಿದ್ದ ಹಾಗೆ ಅಂತ ಪುಸಲಾಯಿಸಿ ಬೆಳ್ಳಂಬೆಳಗ್ಗೆ ಐದೂವರೆಗೆ ಶುರುವಾಗುತ್ತಿದ್ದ ಟ್ಯೂಷನ್‌ಗೆ ಅಟ್ಟುತ್ತಿದ್ದವರಿಗೆ ಡಿಸೆಂಬರ್‌-ಜನವರಿ ವೇಳೆ ಒಂದಿಷ್ಟು ಹೆಚ್ಚೇ ಬೈಗುಳಗಳು ಸಲ್ಲುತ್ತಿದ್ದವು. ಟ್ಯೂಷನ್‌ ಅಗತ್ಯವಿಲ್ಲವೆಂದು ಸುಮ್ಮನಿದ್ದರೂ, ತಂದೆ-ತಾಯಿಯ ಕಿವಿಗೆ ಎಸ್ಸೆಸೆಲ್ಸಿಗೆ ಟ್ಯೂಷನ್‌ಗೆ ಕಳುಹಿಸೆª ಹೋದ್ರೆ ಕಷ್ಟ ಅಂತ ಊದಿ, ನನ್ನನ್ನು ಈ ಮೈ ಕೊರೆಯುವ ಚಳಿ ಮತ್ತದೇ ಕಾರಣಕ್ಕೆ ಮೈಬಿಡದ ನಿದಿರೆಯೊಂದಿಗೆ ಸೆಣಸಲು ಕಾರಣವಾದವರಿಗೆ ವಿಶೇಷ ಮಂಗಳಾರತಿಯೇ ಸಲ್ಲುತ್ತಿತ್ತು.

ಹೇಗೋ ತಳಪಾಯ ನೆಟ್ಟಗಾದ ಮೇಲಾದರೂ ಈ ಬೆಳಗಿನ ಜಾವದ ಟ್ಯೂಷನ್ನಿನ ಕಿರಿಕಿರಿ ಇರಲಾರದೆಂದು ನಂಬಿಕೊಂಡವನಿಗೆ ಅದೆಲ್ಲ ಶುದ್ಧ ಸುಳ್ಳೆಂದು ಅರಿವಾಗಲು ಹೆಚ್ಚು ದಿನವೇನೂ ಬೇಕಾಗಲಿಲ್ಲ. ಎಸ್ಸೆಸೆಲ್ಸಿ ಎಂಬ ತಳಪಾಯದ ನಂತರ ಪಿಯುಸಿ ಎಂಬ ಬುಡವೂ ಬಲಿಷ್ಠವಾಗಿಯೇ ಇರಬೇಕೆಂಬ ಬುದ್ಧಿವಾದ ಹೇಳಲು ಅನುಭವಿಗಳಿಗೇನೂ ಕೊರತೆ ಇರಲಿಲ್ಲ. ಪರಿಣಾಮ ಡಬಲ್‌ ಧಮಾಕ ಎಂಬಂತೆ ಬೆಳಗಿನ ಜಾವ 5ರಿಂದ 6ರವರೆಗೆ ಮ್ಯಾಥುÕ, ಆನಂತರ 6ರಿಂದ 7ರವರೆಗೆ ಫಿಸಿಕ್ಸು ಪಾಠ ಕೇಳುವ ಅನಿವಾರ್ಯ ಕರ್ಮ ನನ್ನ ಪಾಲಿಗೆ ಫಿಕ್ಸ್‌ ಆಗಿತ್ತು. ಬೆಳ್ಳಂಬೆಳಗ್ಗೆ ಎದ್ದು ಟ್ಯೂಷನ್‌ಗೆ ಹೋಗುವುದು ಮಳೆಗಾಲದಲ್ಲೂ ಕಷ್ಟವೇ ಆದರೂ, ಜೋರು ಮಳೆ ಬಂದ ದಿನ ಆ ನೆಪದಲ್ಲೇ ಟ್ಯೂಷನ್‌ ತಪ್ಪಿಸಿ ಮಲಗಬಹುದಾದ ಸದವಕಾಶವಾದರೂ ದೊರೆಯುತ್ತಿತ್ತು. ಆದರೆ, ಈ ಚಳಿಗಾಲದಲ್ಲಿ ಯಾವ ನೆಪವೂ ವರ್ಕ್‌ ಔಟ್‌ ಆಗುತ್ತಿರಲಿಲ್ಲ. ಹೆಚ್ಚು ಚಳಿ ಇತ್ತು ಅಂತ ಹೇಳಿ ಟ್ಯೂಷನ್‌ ತಪ್ಪಿಸಿದರೆ, ಇದಕ್ಕೆಲ್ಲ ಸೋಮಾರಿತನವಲ್ಲದೆ ಮತ್ತಿನ್ನೇನೂ ಕಾರಣವಲ್ಲ ಎಂದು ಮನೆಯವರೆಲ್ಲ ಪೂಜೆ ಮಾಡಲು ಪೈಪೋಟಿಗೆ ಬೀಳುತ್ತಿದ್ದರು.

ಎಸ್ಸೆಸೆಲ್ಸಿ-ಪಿಯುಸಿಗಾದರೂ ಮುಗಿದು ಹೋಗಬಹುದಾಗಿದ್ದ ಈ ಚಳಿಯೊಂದಿಗೆ ಏಗುವ ಉಸಾಬರಿ, ಇಂಜಿನಿಯರಿಂಗ್‌ ಓದಲು ನಾನು ಆಯ್ದುಕೊಂಡ ಕಾಲೇಜಿನ ಕಾರಣದಿಂದ ಮತ್ತೆ ನಾಲ್ಕು ವರ್ಷ ಪೀಡಿಸದೆ ಬಿಡಲಿಲ್ಲ. ಉಳಿದ ಇಂಜಿನಿಯರಿಂಗ್‌ ಕಾಲೇಜುಗಳೆಲ್ಲ ಬೆಳಗ್ಗೆ ಒಂಬತ್ತು ಗಂಟೆಗೆ ಶುರುವಾದರೆ ನಮ್ಮದು ಮಾತ್ರ ಏಳೂವರೆಗೆ! ಅದರಲ್ಲೂ ರೂಲ್ಸ್‌ ಅಂದ್ರೆ ರೂಲ್ಸು, ಟೈಮ್‌ ಅಂದ್ರೆ ಟೈಮು ಅಂತ ಸಿಕ್ಕಾಪಟ್ಟೆ ಸ್ಟ್ರಿಕ್ಟ್ ಆಗಿದ್ದ ಪ್ರೊಫೆಸರ್‌ ಒಬ್ರು ಏಳೂವರೆಗಿಂತ ಒಂದು ನಿಮಿಷ ತಡವಾಗಿ ಹೋದರೂ ತಮ್ಮ ಕ್ಲಾಸಿಗೆ ಅಂತಹವರನ್ನು ಸೇರಿಸುತ್ತಿರಲಿಲ್ಲ. ತಾವೂ ಅಷ್ಟೇ; ಎಂದಿಗೂ ಲೇಟಾಗಿ ಕ್ಲಾಸಿಗೆ ಹೋಗುತ್ತಿರಲಿಲ್ಲ! ಅದೃಷ್ಟವಶಾತ್‌ ಅವರ ಏಳೂವರೆ ಕ್ಲಾಸುಗಳಿಗೆ ಕೂರುವ ತಾಪತ್ರಯ ನಾನು ಆ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದ ಅಷ್ಟೂ ದಿನ ಎದುರಾಗಲೇ ಇಲ್ಲ.

Advertisement

ಇದೀಗ ಬೆಳಗ್ಗೆ ಏಳೂವರೆಗೆ ಕ್ಲಾಸು ಶುರುವಾಗುವ ಅದೇ ಕಾಲೇಜಿನಲ್ಲಿ ಅಧ್ಯಾಪಕನಾಗಿರುವ ನಾನು, ನನ್ನ ಹಾಗೆ ಒಳಗೊಳಗೆ ಗೊಣಗಿಕೊಂಡು, ನಿದ್ರೆಗೆ ಅಲ್ಪವಿರಾಮ ವಿಧಿಸಿ ಏಳೂವರೆಗೆ ಬರುವ ವಿದ್ಯಾರ್ಥಿಗಳಿಗೆ ಕೊರೆಯುವ ಕಾಯಕವನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದೇನೆ!

ಗಮನಾರ್ಹ ಸಂಗತಿ ಎಂದರೆ, ಕ್ಲಾಸಿಗೆ ಲೇಟ್‌ ಆಗಿ ಬರುವ ಯಾರೊಬ್ಬರೂ ಇದುವರೆಗೂ, ತಮ್ಮ ಲೇಟ್‌ ಎಂಟ್ರಿಗೆ ಚಳಿಯೇ ಕಾರಣವೆಂದು ಹೇಳಿರುವ ನಿದರ್ಶನವೇ ಇಲ್ಲ. ಬದಲಿಗೆ, ಬಸ್‌ ಲೇಟು, ಗಾಡಿ ಪಂಕ್ಚರ್‌ ಆಗಿತ್ತು ಎನ್ನುವ ಅವವೇ ಹಳೆ ಸುಳ್ಳುಗಳನ್ನೇ ಪುನರಾವರ್ತಿಸುವ ಉಸಾಬರಿಗೆ ಹೋಗುತ್ತಾರೆ.

ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಬಳಲುವ ವಿದ್ಯಾರ್ಥಿಗಳ ನೋವಿನ ಕಥೆಗಳಿಗೆ ಕಿವಿಯಾದಾಗಲೆಲ್ಲ, ಅವರ ಸಮಸ್ಯೆ ಮತ್ತಷ್ಟು ಉಲ್ಬಣಿಸಲು ಕಾರಣವಾಗುವ ಚಳಿಯ ಕುರಿತು ನನ್ನೊಳಗೆ ಅಳಿದುಳಿದಿರುವ ರಮ್ಯ ಭಾವನೆಗಳೂ ಮಸುಕಾಗುತ್ತವೆ. ಆದರೇನು ಮಾಡುವುದು, ಒಳಿತು-ಕೆಡುಕು ಎರಡನ್ನೂ ಒಡಲಿಗಿಳಿಸಿಕೊಂಡ ಎಲ್ಲ ಕಾಲಗಳನ್ನೂ ಹಾದು ಹೋಗಲೇಬೇಕಲ್ಲವೇ!

ಎಚ್‌.ಕೆ. ಶರತ್‌

Advertisement

Udayavani is now on Telegram. Click here to join our channel and stay updated with the latest news.

Next