ಹರಿಹರ: ಹಿಂದಿನ ಜೆಡಿಎಸ್‌ನ ಆಡಳಿತಾವಧಿಯಲ್ಲಿ ನಗರಸಭೆಯಲ್ಲಿ ನಡೆದಿರುವ ಭ್ರಷ್ಟಾಚಾರದ ತನಿಖೆ ಮಾಡಲು ಎಸಿಬಿಗೆ (ಭ್ರಷ್ಟಾಚಾರ ನಿಗ್ರಹ ದಳ) ನೀಡಿರುವ ದೂರನ್ನು ವಾಪಸ್ ಪಡೆದಿಲ್ಲ ಎಂದು ನಗರಸಭಾಧ್ಯಕ್ಷೆ ಆಶಾ ಮರಿಯೋಜಿರಾವ್ ಹೇಳಿದರು.
ಕಾಂಗ್ರೆಸ್ ಪಕ್ಷದಿಂದ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ದೂರು ಹಿಂಪಡೆದಿದ್ದೇನೆ ಎಂಬುದು ಸುಳ್ಳು, ದುರುದ್ದೇಶದಿಂದ ಕೆಲವರು ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿರಬಹುದು. ದೂರನ್ನು ಹಿಂಪಡೆಯುವ ಪ್ರಶ್ನೆಯೆ ಇಲ್ಲ, ತನಿಖೆ ನಡೆದು ಸತ್ಯ ಹೊರಬರಬೇಕಾಗಿದೆ ಎಂದು ಸ್ಪಷ್ಟಪಡಿಸಿದರು.
ಗುರುವಾರ ಎಸಿಬಿ ಅಧಿಕಾರಿಯೊಬ್ಬರು ಫೋನ್ ಮಾಡಿ, ದೂರು ಸಮರ್ಪಕವಾಗಿಲ್ಲ, ದೋಷಪೂರಿತವಾಗಿದೆ ಎನ್ನುತ್ತಿದ್ದಾರೆ. ಸೂಕ್ತ ದಾಖಲೆಗಳೊಂದಿಗೆ ನಾನು ಸಮರ್ಪಕವಾಗಿಯೇ ದೂರು ಸಲ್ಲಿಸಿದ್ದು, ಅದರಲ್ಲಿ ಏನು ದೋಷವಿದೆಯೋ ತಿಳಿಯದಾಗಿದೆ ಎಂದರು.
ನೀರು ಪೂರೈಕೆಗೆ ಆದ್ಯತೆ: ನದಿಯಲ್ಲಿ ನೀರಿಲ್ಲದ್ದರಿಂದ ನಗರಕ್ಕೆ ಕುಡಿಯುವ ನೀರು ಪೂರೈಸುವುದೇ ಸಾವಲಾಗಿದ್ದು, ಆದರೂ ಎಲ್ಲಾ ಅಗತ್ಯ ಕ್ರಮ ಕೈಗೊಂಡು ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ. ಕೊಳವೆಬಾವಿ ಮೂಲಕವಲ್ಲದೇ ನಗರಸಭೆ ಟ್ಯಾಂಕರ್ ಮೂಲಕವೂ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.
ಕಾಂಗ್ರೆಸ್ ಮುಖಂಡ ಎಸ್.ರಾಮಪ್ಪ, ನಗರಸಭೆ ಸದಸ್ಯರಾದ ವಸಂತ್ ಕುಮಾರ್, ನಿಂಬಕ್ಕ ಚಂದಾಪೂರ್, ರತ್ನಮ್ಮ, ಮುಖಂಡರಾದ ಡಿ.ಜಿ.ರಘುನಾಥ್, ಎಂ.ಬಿ.ಆಬಿದ್ ಅಲಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಡಿ.ರೇವಣಸಿದ್ದಪ್ಪ, ಜಿ.ಎಚ್. ಮರಿಯೋಜಿರಾವ್, ಕೆ.ಜಡಿಯಪ್ಪ, ಕೆ.ಪಿ.ಗಂಗಾಧರ್, ಸಿ.ಎನ್.ಹುಲಿಗೇಶ್, ನಜೀರ್ ಅಹ್ಮದ್ ಮತ್ತಿತರರಿದ್ದರು.