ಕೊಪ್ಪಳ: ಜಿಲ್ಲೆಯ ಕೈಗಾರಿಕೆಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರ ಯೋಗ ಕ್ಷೇಮಕ್ಕಾಗಿ, ಅವರಿಗೆ ಅಗತ್ಯ ಚಿಕಿತ್ಸೆಗಾಗಿ ಸರ್ಕಾರ ಇಎಸ್‌ಐ ಆಸ್ಪತ್ರೆ ಮಂಜೂರು ಮಾಡಿದೆ. ಆದರೆ ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ಆರಂಭಿಸಲು ಸ್ಥಳವಕಾಶ ಇಲ್ಲ. ತಜ್ಞರ ತಂಡ ಜಿಲ್ಲಾಸ್ಪತ್ರೆ, ಎಂಸಿಎಚ್ ಆಸ್ಪತ್ರೆಯ ಸ್ಥಳ ಪರಿಶೀಲನೆಯನ್ನೂ ನಡೆಸಿದೆ. ಆದರೆ ಅಂತಿಮಗೊಳಿಸಿಲ್ಲ. ಹಾಗಾಗಿ ಸ್ಥಳಕ್ಕೆ ಇನ್ನು ಅಲೆದಾಟ ನಿಂತಿಲ್ಲ.
ಇಎಸ್‌ಐ ಆಸ್ಪತ್ರೆ ಆರಂಭಿಸಿದರೆ ಈ ಭಾಗದ ಕಾರ್ಮಿಕ ವರ್ಗಕ್ಕೆ ತುಂಬಾ ಅನುಕೂಲವಾಗಲಿದೆ ಎಂಬ ಕಾರಣದಿಂದ ಸಂಸದ ಸಂಗಣ್ಣ ಕರಡಿ ಅವರು ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿ ಇಎಸ್‌ಐ ಆಸ್ಪತ್ರೆ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸರ್ಕಾರ ಆಸ್ಪತ್ರೆಯನ್ನು ಘೋಷಣೆ ಮಾಡಿದೆ. ಆದರೆ ಕೇಂದ್ರ ಸರ್ಕಾರದ ಕೆಲ ಕಠಿಣ ನಿಯಮಗಳಿಂದಾಗಿ ಆಸ್ಪತ್ರೆ ಆರಂಭ ಪ್ರಾರಂಭದಲ್ಲೇ ನಿಧಾನಗತಿ ಎಣಿಸಿತು. ಇದಲ್ಲದೇ, ಆ ಬಳಿಕ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಪ್ರಯತ್ನದಿಂದಾಗಿ ತಾಲೂಕಿನ ಕಿಡದಾಳ ಸಮೀಪದಲ್ಲಿ 10 ಎಕರೆ ಜಮೀನನ್ನು ಆಸ್ಪತ್ರೆಗೆ ಮಂಜೂರು ಮಾಡಲಾಗಿದೆ. ಜಾಗವನ್ನೂ ಮೀಸಲಿರಿಸಲಾಗಿದೆ. ಕಟ್ಟಡ ಕಾರ್ಯಕ್ಕೆ ಕೆಲ ಪ್ರಕ್ರಿಯೆಗಳು ನಡೆಯಬೇಕಿದೆ.
ಅದಕ್ಕೂ ಮುನ್ನ ಇಎಸ್‌ಐ ಆಸ್ಪತ್ರೆಯನ್ನು ತಾತ್ಕಾಲಿಕ ಸ್ಥಳದಲ್ಲಿ ಆರಂಭಿಸಬೇಕಾಗಿದೆ. ಕನಿಷ್ಟ 30 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಆರಂಭಿಸಲು ರಾಜ್ಯ ಸರ್ಕಾರದಿಂದ ನಿರ್ದೇಶನ ನೀಡಿದೆ. ಆದರೆ 30 ಹಾಸಿಗೆಯ ಸಾಮರ್ಥ್ಯಕ್ಕೆ ಬೇಕಾದ ಕಟ್ಟಡದ ಕೊರತೆ ಜಿಲ್ಲೆಯಲ್ಲಿ ಎದುರಾಗಿದೆ. ಜಿಲ್ಲಾಸ್ಪತ್ರೆಯಲ್ಲೇ ಮೊದಲು ಜನದಟ್ಟಣೆ ತುಂಬಿ ತುಳುಕುತ್ತಿದೆ. ಎಲ್ಲಿಯೂ ಬೆಡ್‌ಗಳಿಲ್ಲ. ಹಲವು ರೋಗಿಗಳು ಕೆಲವು ಸಂದರ್ಭದಲ್ಲಿ ನೆಲದ ಮೇಲೆ ಮಲಗಿ ಚಿಕಿತ್ಸೆ ಪಡೆದಂತಹ ಹಲವು ಉದಾಹರಣೆಗಳಿವೆ. ಇನ್ನು ಎಂಸಿಎಚ್ ಆಸ್ಪತ್ರೆಯಲ್ಲಿ ಇಎಸ್‌ಐ ಆರಂಭ ಮಾಡಬೇಕೆನ್ನುವ ಚಿಂತನೆ ನಡೆದರೂ ಅದೂ ಸಫಲತೆ ಕಂಡಿಲ್ಲ.
ಈಚೆಗಷ್ಟೇ ಹುಬ್ಬಳ್ಳಿ, ಕಲಬುರ್ಗಿ ಹಾಗೂ ಬೆಂಗಳೂರು ಅಧಿ ಕಾರಿಗಳ ತಂಡವು ಜಿಲ್ಲೆಗೆ ಭೇಟಿ ನೀಡಿ ಎಲ್ಲಿ ಆಸ್ಪತ್ರೆ ಆರಂಭಿಸಬೇಕೆನ್ನುವ ಸ್ಥಳ ಪರಿಶೀಲನೆಯನ್ನೂ ನಡೆಸಿತ್ತು. ಜಿಲ್ಲಾಸ್ಪತ್ರೆ ಹಾಗೂ ಎಂಸಿಎಚ್ ಆಸ್ಪತ್ರೆ ಪರಿಶೀಲನೆ ನಡೆಸಿದೆ. ಆದರೆ ಎರಡೂ ಸ್ಥಳದಲ್ಲೂ ಸ್ಥಳವಕಾಶದ ಕೊರತೆ ಗಮನಿಸಿದೆ. ಹೀಗಾಗಿ ಎರಡು ಕಡೆ ತಲಾ 15 ಬೆಡ್ ಸಾಮರ್ಥ್ಯದ ಆಸ್ಪತ್ರೆ ಆರಂಭಿಸಬೇಕೆನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅದು ಅಷ್ಟೊಂದು ಸೂಕ್ತವಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ. ಒಂದೇ ಕಡೆ 30 ಬೆಡ್ ಇದ್ದರೆ ಚಿಕಿತ್ಸೆ ನೀಡಲು ವೈದ್ಯರಿಗೆ ತುಂಬ ಅನುಕೂಲವಾಗಲಿದೆ. ಅಲ್ಲೊಂದಿಷ್ಟು, ಇಲ್ಲೊಂದಿಷ್ಟು ಎನ್ನುವಂತಾದರೆ ರೋಗಿಗಳಿಗೆ ಹಾಗೂ ಅಲ್ಲಿನ ವೈದ್ಯರ ತಂಡಕ್ಕೂ ತೊಂದರೆ ಎದುರಾಗಲಿದೆ. ಹೀಗಾಗಿ ತಜ್ಞರ ತಂಡ ಯಾವುದೇ ಒಮ್ಮತಕ್ಕೆ ಬಂದಿಲ್ಲ. ಮತ್ತೂಮ್ಮೆ ಬಂದು ಪರಿಶೀಲನೆ ನಡೆಸಿ ನಿರ್ಧಾರ ಕೈಗೊಳ್ಳುವ ಬಗ್ಗೆ ಅಭಿಪ್ರಾಯ ತಿಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿವೆ.
ಜಿಲ್ಲೆಗೆ ಮಂಜೂರಾಗಿರುವ ಆಸ್ಪತ್ರೆಯನ್ನು ಜಿಲ್ಲಾಡಳಿತ, ಜನಪ್ರತಿನಿಧಿ ಗಳು ಒಕ್ಕೊರಲಿನಿಂದ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ. ಸಾಧ್ಯವಾದಷ್ಟು ಇಎಸ್‌ಐ ಆಸ್ಪತ್ರೆಗೆ ತಾತ್ಕಾಲಿಕ ನೆಲೆ ಕಲ್ಪಿಸಿದರೆ ಮುಂದೆ ಆಸ್ಪತ್ರೆಗೆ ಸ್ವಂತ ನೆಲೆ ಕಂಡುಕೊಳ್ಳಲು ಸಾಧ್ಯವಾಗಲಿದೆ. ಇಲ್ಲದಿದ್ದರೆ ಇಲ್ಲಿನ ಕಾರ್ಮಿಕರಿಗೆ ಚಿಕಿತ್ಸೆ ಪಡೆಯಲು ತುಂಬಾ ಅನುಕೂಲವಾಗಲಿದೆ. ಇಲ್ಲದಿದ್ದರೆ ಇಲ್ಲಿನ ಕಾರ್ಮಿಕರು ಕಲಬುರಗಿ ಹಾಗೂ ಹುಬ್ಬಳ್ಳಿಗೆ ತೆರಳುವ ಸ್ಥಿತಿ ಎದುರಾಗಲಿದೆ. ಜಿಲ್ಲಾಡಳಿತವು ಇದೆಲ್ಲವನ್ನು ಅವಲೋಕನ ಮಾಡಬೇಕಿದೆ.
ಜಿಲ್ಲೆಗೆ ಮಂಜೂರಾಗಿರುವ ಇಎಸ್‌ಐ ಆಸ್ಪತ್ರೆಯ ಆರಂಭಕ್ಕಾಗಿ ಈಚೆಗೆ ತಜ್ಞರ ತಂಡ ಭೇಟಿ ನೀಡಿ ಜಿಲ್ಲಾಸ್ಪತ್ರೆ ಹಾಗೂ ಎಂಸಿಎಚ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಎರಡೂ ಆಸ್ಪತ್ರೆಯಲ್ಲಿ ತಲಾ 15 ಬೆಡ್ ಅಳವಡಿಕೆ ಮಾಡಿ ತಾತ್ಕಾಲಿಕ ಕಟ್ಟಡದಲ್ಲಿ ಆಸ್ಪತ್ರೆ ಆರಂಭಿಸುವ ಮಾತನ್ನಾಡಿದೆ. ಅದೂ ಇನ್ನೂ ಅಂತಿಮವಾಗಿಲ್ಲ. ಅವರು ಮತ್ತೂಮ್ಮೆ ಸ್ಥಳ ಪರಿಶೀಲನೆ ನಡೆಸುವ ಮಾತನ್ನಾಡಿದ್ದಾರೆ. ಇಎಸ್‌ಐ ಆಸ್ಪತ್ರೆಗೆ ಈಗಾಗಲೇ ಜಾಗ ಮಂಜೂರಾಗಿದೆ. ಅಲ್ಲಿ ಕಟ್ಟಡ ಆರಂಭಕ್ಕೆ ಸಮಯ ಬೇಕು. ಆದರೆ ತಾತ್ಕಾಲಿಕ ಕಟ್ಟಡದಲ್ಲಿ ಆಸ್ಪತ್ರೆ ಆರಂಭಕ್ಕೆ ಪ್ರಯತ್ನ ನಡೆದಿದೆ. –
ಸಂಗಣ್ಣ ಕರಡಿ, ಕೊಪ್ಪಳ ಸಂಸದ
-ದತ್ತು ಕಮ್ಮಾರ