ಬಾಗಲಕೋಟೆ: ಪ್ರತಿ ಜಿಲ್ಲೆಗೊಂದು ಇಎಸ್‌ಐ ಆಸ್ಪತ್ರೆ ತೆರೆಯಲಾಗುತ್ತಿದ್ದು, ಅದಕ್ಕೆ ಬೇಕಾದ ಜಾಗವನ್ನು ನೀಡಿದಲ್ಲಿ ಜಮೀನು ಖರೀದಿ ಹಾಗೂ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಕ್ಕರೆ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಟಾರ ಹೇಳಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿಂದು ಜರುಗಿದ ಕಾರ್ಮಿಕ ಮತ್ತು ಸಕ್ಕರೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಾಗಲಕೋಟೆಯ ವಿದ್ಯಾಗಿರಿಯ ಬೃಂದಾವನ ಸೆಕ್ಟರ್‌ನಲ್ಲಿ ಬಾಡಿಗೆ ಕಟ್ಟಡದಲ್ಲಿ ಕರ್ನಾಟಕ ರಾಜ್ಯ ವಿಮಾ ಆಸ್ಪತ್ರೆ ನಡೆಯುತ್ತಿದ್ದು, ಸ್ವಂತ ಕಟ್ಟಡಕ್ಕೆ ಜಾಗ ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಅದಕ್ಕೆ ಬೇಕಾಗುವ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.
ಕೋವಿಡ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಸರಕಾರದ ಯೋಜನೆಗಳು ತಲುಪಿಸುವ ಕಾರ್ಯದಲ್ಲಿ ಅಧಿಕಾರಿಗಳು ಇಚ್ಛಾಶಕ್ತಿಯಿಂದ ಕಾರ್ಯನಿರ್ವಹಿಸಬೇಕು. ಲಾಕ್ ಡೌನ್‌ದಿಂದಾಗಿ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಅವರ ಕುಟುಂಬ ಪೋಷಣೆಗೆ ಸರಕಾರ ಕಟ್ಟಡ ಕಾರ್ಮಿಕರು, ಅಗಸರು, ಕ್ಷೌರಿಕರಿಗೆ ಒಂದು ಬಾರಿ 5 ಸಾವಿರ ರೂ.ಗಳ ಪರಿಹಾರ ನೀಡಲು ನಿರ್ಧರಿಸಿದ್ದು, ಈ ಸೌಲಭ್ಯ ತಲುಪಿಸಬೇಕು ಎಂದು ಸೂಚಿಸಿದರು.
ಬಾಗಲಕೋಟೆಯಲ್ಲಿ ಶೇ. 92ರಷ್ಟು ಈ ಸೌಲಭ್ಯ ಪಡೆದುಕೊಂಡಿದ್ದಾರೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕ್ಷೌರಿಕ ಕೆಲಸ ಮಾಡುತ್ತಿರುವರನ್ನು ಗುರುತಿಸಿ ಆಯಾ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ದೃಢೀಕರಣ ಪತ್ರ ನೀಡಬೇಕು. ಆನ್‌ನಲ್ಲಿ ಅರ್ಜಿಗಳು ಅಪ್ಲೋಡ್ ಆಗದ ಕಾರಣ ಅರ್ಜಿ ಸಲ್ಲಿಸುವ ಅವಧಿಯನ್ನು ಆ. 15ರವರೆಗೆ ವಿಸ್ತರಿಸಲಾಗಿದೆ. ಅಗಸರು ಮತ್ತು ಕ್ಷೌರಿಕರಿಗೆ 5 ಸಾವಿರ ಪರಿಹಾರ ನೀಡಲು ಸರಕಾರ 165 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದೆ. ಈಗಾಗಲೇ ರಾಜ್ಯದಲ್ಲಿ 48,500 ಜನ ಫಲಾನುಭವಿಗಳಿಗೆ ಕೋಟ್ಯಂತರ ರೂ.ಗಳ ಪ್ರೋತ್ಸಾಹಧನ ನೀಡಲಾಗಿದೆ ಎಂದರು.
ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ.ರಾಜೇಂದ್ರ, ಜಿಪಂ ಸಿಇಒ ಟಿ.ಭೂಬಾಲನ, ಎಸ್ಪಿ ಲೋಕೇಶ ಜಗಲಾಸರ, ವೆಂಕಟೇಶ ಎಸ್.ಉಪಸ್ಥಿತರಿದ್ದರು.