ರಾಮನಗರ: ಬಿಡದಿ ಬಳಿಯಲ್ಲಿ ಕಾರ್ಮಿಕ ವಿಮಾ ಯೋಜನೆಯ (ಇ.ಎಸ್.ಐ) ಸೂಪರ್ ಸ್ಪಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ, ಈ ಯೋಜನೆಗೆ ಅಂದಾಜು 100 ಕೋಟಿ ರೂ ಬೇಕಾಗವುದು ಎಂದು ಮಾಗಡಿ ಕ್ಷೇತ್ರದ ಶಾಸಕ ಎ.ಮಂಜುನಾಥ್ ತಿಳಿಸಿದರು.
ತಾಲೂಕಿನ ಬಿಡದಿಯ ಹೌಸಿಂಗ್ ಬೋರ್ಡ್ ಬಡಾವಣೆಯ ಕ್ರೀಡಾಂಗಣದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಮತ್ತು ಕೂಲಿ ಕಾರ್ಮಿಕರಿಗೆ ಆಹಾರ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಿಡದಿ-ಹಾರೋಹಳ್ಳಿ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ ನೂತವಾಗಿ ನಿರ್ಮಾ ನವಾಗಲಿರುವ ಕೈಗಾರಿಕಾ ಪ್ರದೇಶದಲ್ಲೇ ಸೂಪರ್ ಸ್ಪಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳವನ್ನು ಗುರುತಿಸಲಾಗಿದೆ ಎಂದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಅಶ್ವಥನಾರಾಯಣ ಅವರ ನೇತೃತ್ವ ದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ರಾಮನಗರ ಶಾಸಕರಾದ ಅನಿತಾ ಕುಮಾರಸ್ವಾಮಿ ಮತ್ತು ತಾವು ಭಾಗವಹಿಸಿದ್ದಾಗಿ, ಈ ಸಭೆಯಲ್ಲಿ ಇಎಸ್ಐ ಆಸ್ಪತ್ರೆ ನಿರ್ಮಾಣದ ಅಗತ್ಯದ ಬಗ್ಗೆ ಚರ್ಚೆಗಳಾಗಿವೆ. ಜಿಲ್ಲೆಯಲ್ಲಿ ನೂರಾರು ಕೈಗಾರಿಕೆಗಳಿವೆ ಈ ಕಾರ್ಮಿಕರನ್ನು ದೃಷ್ಟಯಲ್ಲಿರಿಸಿಕೊಂಡು ಸೂಪರ್ ಸ್ಪಷಾಲಿಟಿ ಆಸ್ಪತ್ರೆ ನಿರ್ಮಾಣ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ ಎಂದರು.
ರಾಮನಗರ, ಚನ್ನಪಟ್ಟಣದಲ್ಲಿ ಈಗಿರುವ ಇಎಸ್ಐ ಆಸ್ಪತ್ರೆಗಳಲ್ಲಿ ಸಾಮಾನ್ಯ ಸೌಲಭ್ಯಗಳಿವೆ. ಉನ್ನತ ಚಿಕಿತ್ಸೆಗೆ ಸೌಲಭ್ಯಗಳು ಇಲ್ಲ. ಖಾಸಗಿ ಆಸ್ಪತ್ರೆಗಳಿಗೆ ಮೊರೆ ಹೋಗಬೇಕಾಗಿದೆ. ಜಿಲ್ಲೆಯಲ್ಲೇ ಸೂಪರ್ ಸ್ಪಷಾಲಿಟಿ ಆಸ್ಪತ್ರೆ ನಿರ್ಮಾಣವಾದರೆ ಕಾರ್ಮಿಕರಿಗೆ ಒಳಿತು ಎಂದರು. ಕಾರ್ಮಿಕ ಇಲಾಖೆ ಸೌಲಭ್ಯಗಳಿ ಗಾಗಿ ನೋಂದಣಿ ಅಗತ್ಯ. ಇದಕ್ಕೆ ಅಧಿಕಾರಿಗಳು ಪ್ರಚಾರಕ್ಕಾಗಿ ಪ್ರಚಾರ ಕೈಗೊಳ್ಳುವಂತೆ ಸೂಚಿಸಿದರು.
ಕಾರ್ಮಿಕ ಇಲಾಖೆ ಅಧಿಕಾರಿ ಯತೀಶ್ ಕುಮಾರ್ ಮಾತನಾಡಿದರು. ಕಾರ್ಮಿಕ ಇಲಾಖೆ ಅಧಿಕಾರಿ ಸುರೇಶ್, ಪುರಸಭೆ ಮಾಜಿ ಸದಸ್ಯರಾದ ರಾಕೇಶ್, ಬಿ.ಎಂ ರಮೇಶ್ ಕುಮಾರ್, ದೇವರಾಜು, ಕುಮಾರ್ , ಮಾಗಡ ಪುರಸಭೆ ಸದಸ್ಯ ಬಾಲರಾಜ್ , ಜೆಡಿಎಸ್ ಮುಖಂಡರಾದ ಸೋಮೇಗೌಡ ಇತರರು ಇದ್ದರು.